ಬೆಂಗಳೂರು (ಜು.9):- - ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರವನ್ನು ಎಂಟು ವಲಯಗಳನ್ನಾಗಿ ವಿಂಗಡಿಸಿ ಒಬ್ಬೊಬ್ಬ ಸಚಿವರಿಗೆ ಜವಾಬ್ದಾರಿ ನೀಡಲು ಸರ್ಕಾರ ಮುಂದಾಗಿದೆ.
ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದು, 8 ವಲಯಗಳನ್ನು ವಿಂಗಡಿಸಿ ಒಬ್ಬೊಬ್ಬ ಸಚಿವರನ್ನು ಕೊರೊನಾ ನಿಯಂತ್ರಣಕ್ಕಾಗಿ ನೇಮಿಸಲಿದ್ದಾರೆ.
ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ವಿ.ಸೋಮಣ್ಣ, ಕೆ.ಗೋಪಾಲಯ್ಯ, ಎಸ್.ಸುರೇಶ್‍ಕುಮಾರ್, ಭೈರತಿ ಬಸವರಾಜ್, ಡಾ.ಅಶ್ವಥ್ ನಾರಾಯಣ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಕೂಡ ಈ ತಂಡದಲ್ಲಿರುತ್ತಾರೆ.
ಒಟ್ಟು ಎಂಟು ವಲಯಗಳಲ್ಲಿ ಈ ಸಚಿವರು ಜವಾಬ್ದಾರಿ ವಹಿಸಿಕೊಂಡು ಕೊರೊನಾ ನಿಯಂತ್ರಣ ಮಾಡಲು ಕೆಲಸ ಮಾಡಬೇಕು. ಸಚಿವರಿಗೆ ಶಾಸಕರು, ಬಿಬಿಎಂಪಿ ಸದಸ್ಯರು, ರಾಜ್ಯಸಭಾ ಹಾಗೂ ವಿಧಾನಸಭಾ ಸದಸ್ಯರು ಕೂಡ ಇದರಲ್ಲಿ ಪಾಲ್ಗೊಳ್ಳಬೇಕು. ಯಾವ ಸಚಿವರಿಗೆ, ಯಾವ ವಲಯ ಎಂಬುದನ್ನು ಸಂಜೆಯೊಳಗೆ ಮುಖ್ಯಮಂತ್ರಿ ಯಡಿಯೂರಪ್ಪ ಜವಾಬ್ದಾರಿ ಹಂಚಿಕೆ ಮಾಡಲಿದ್ದಾರೆ.