ಬೆಳ್ತಂಗಡಿ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮೂಲಕ ರಾಜ್ಯಾದ್ಯಂತವಾಗಿ ಕಳೆದ 3 ದಶಕಗಳಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ದ ಜಾಗೃತಿ, ಚಿಕಿತ್ಸೆಮತ್ತು ಪುನಶ್ಚೇತನ ಕಾರ್ಯಕ್ರಮಗಳ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 1460 ಕ್ಕೂ ಮಿಕ್ಕಿದ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಎರಡು ಲಕ್ಷಕ್ಕೂ ಮಿಕ್ಕಿದ ಜನರಿಗೆ ವ್ಯಸನ ಮುಕ್ತರಾಗಲು ನೆರವಾಗಿದೆ.ವಾರ್ಷಿಕವಾಗಿ 1.5 ಲಕ್ಷ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಜೊತೆಯಲ್ಲಿ ಕೈ ಜೋಡಿಸಿ ಹಲವಾರು ಕಾರ್ಯಕ್ರಮಗಳನ್ನು ಈ ನಿಟ್ಟಿನಲ್ಲಿ ವೇದಿಕೆಯ ಆಯೋಜಿಸುತ್ತಾ ಬಂದಿದೆ.

ಇದೀಗ ರಾಜ್ಯದಲ್ಲಿ ಮಾದಕ ವಸ್ತು ಪ್ರಕರಣಗಳಿಗೆ ಸಿನಿಮಾ ಬಾಲಿವುಡ್ ನಂಟಿರುವ ಕುರಿತಾಗಿ ಚರ್ಚೆಯಾಗುತ್ತಿದೆ. ಮಾದಕ ವಸ್ತುಗಳ ದಂಧೆ, ಪ್ರಕರಣಗಳು ಹೆಚ್ಚಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಸರಕಾರವು ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳಬೇಕಾಗಿದೆ. ಮಾದಕ ವಸ್ತು ನಿಯಂತ್ರಣ ಬ್ಯೂರೊ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ. ಮಾದಕ ವಸ್ತು ಪ್ರಕರಣಗಳು ಸಾಕಷ್ಟು ಪ್ರಮಾಣದಲ್ಲಿ ದಾಖಲಾಗುತ್ತಿದ್ದರೂ, ಆರೋಪಿಗಳಿಗೆ ಶಿಕ್ಷೆಯಾಗದೇ ಖುಲಾಸೆ ಹೊಂದುತ್ತಾರೆ. ನಾರ್ಕೊಟಿಕ್‍ ಡ್ರಗ್ಸ್ ಎಂಡ್ ಸೈಕೋಟ್ರೋಫಿಕ್ ಸಬ್ಟಾನ್ಸಸ್(NDPS)ಕಾಯಿದೆ 1985 ಪ್ರಕಾರ ಮಾದಕ ವಸ್ತುಗಳ ಉತ್ಪಾದನೆ, ಸಾಗಾಟ, ಮಾರಾಟ, ಸೇವನೆ ಶಿಕ್ಷಾರ್ಹ ಅಪರಾಧ. ಆರೋಪ ಸಾಬೀತಾದರೆ ದಂಡ, ಜೈಲು, ಮರಣದಂಡನೆಗೂ ಅವಕಾಶವಿದೆ. 

ಆದುದರಿಂದ ಸರಕಾರ ಗಮನಹರಿಸಿ ಡ್ರಗ್ಸ್ ಜಾಲದಲ್ಲಿ ತೊಡಗಿಸಿಕೊಂಡವರಿಗೆ ಸೂಕ್ತ ತನಿಖೆ ನಡೆಸಿ ಕಟ್ಟು ನಿಟ್ಟಿನ ಕ್ರಮಕೈಗೊಂಡು ಯುವಜನತೆ/ಸಮಾಜವನ್ನು ಕಾಪಾಡಿಕೊಳ್ಳುವಂತೆ ಕೋರುತ್ತಿದ್ದೇವೆ. ಪ್ರಸ್ತುತ ಸಿನಿಮಾ ಬಾಲಿವುಡ್ ಸೆಲೆಬ್ರಿಟಿಗಳು, ವಿದ್ಯಾವಂತರು, ಬುದ್ಧಿವಂತ ರೇಡ್ರಗ್ಸ್‍ನ ನಂಟಿರುವ ಕುರಿತಾಗಿ ಚರ್ಚೆಯಾಗುತ್ತಿರುವುದು ಅಪಾಯಕಾರಿಯಾಗಿದೆ. ಡ್ರಗ್ಸ್ ನ ಮೂಲ ಮತ್ತು ತನಿಖೆಗೆ ಇದು ಸಕಾಲವಾಗಿದ್ದು, ಶೀಘ್ರವೇ ಈ ಬಗ್ಗೆ ವಿಶೇಷ ತಂಡವನ್ನು ರಚಿಸಿ ಇದರ ಮಟ್ಟ ಹಾಕಬೇಕೆಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯು ಆಗ್ರಹಿಸುತ್ತಿದೆ.

ಜಿಲ್ಲಾ ವೇದಿಕೆಗಳ ಮೂಲಕ ರಾಜ್ಯದ 30 ಜಿಲ್ಲೆಗಳಲ್ಲಿಯೂ ಈ ಕುರಿತಾಗಿ ವ್ಯಾಪಕ ಜನಾಂದೋಲನ ರೂಪಿಸಿ ಹಕ್ಕೊತ್ತಾಯ ಮಂಡನೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ನಿಯೋಗಗಳ ಮೂಲಕ ಜಿಲ್ಲಾಡಳಿತಕ್ಕೆ ತೆರಳಿ ಮನವಿ ಮಾಡುವ ಬಗ್ಗೆ ಸೂಚಿಸಲಾಗಿದೆ. ರಾಜ್ಯ ವೇದಿಕೆಯಿಂದ ಮುಖ್ಯಮಂತ್ರಿಗಳನ್ನು, ಗೃಹಸಚಿವರನ್ನು ಶೀಘ್ರವೇ ಭೇಟಿ ಮಾಡಿ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಲಾಗುವುದೆಂದು ರಾಜ್ಯಾಧ್ಯಕ್ಷರಾದ ವಿ. ರಾಮಸ್ವಾಮಿ, ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ| ಎಲ್.ಹೆಚ್.ಮಂಜುನಾಥ್, ಪ್ರಾದೇಶಿಕ ನಿರ್ದೇಶಕರಾದ  ವಿವೇಕ್ ವಿ. ಪಾೈಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.