ಮಂಗಳೂರು (ಜು.13) : ಆಯುಷ್ಮಾನ್‌ ಭಾರತ್‌ ಯೋಜನೆಯಡಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲೂ ಪೂರ್ಣ ಪ್ರಮಾಣದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ್‌ ಪೂಜಾರಿಯವರು ತಿಳಿಸಿದ್ದಾರೆ.

ಯಾರಲ್ಲಿ ಆಯುಷ್ಮಾನ್‌ ಭಾರತ್‌ ಕಾರ್ಡ್ ಇರುತ್ತದೋ ಅವರಿಗೆ ಖಾಸಗಿ ಆಸ್ಪತ್ರೆಗೆ ಹೋದರೂ ಕೂಡಾ ಪೂರ್ಣ ಪ್ರಮಾಣದಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅವರು ಬರೀ ಆಧಾರ್‌ ಕಾರ್ಡ್ ತೆಗೆದುಕೊಂಡು ಹೋದರೆ ಸಾಕು, ಬಿಪಿಎಲ್‌ ಎಪಿಎಲ್‌ ಯಾವುದೇ ಪಡಿತರ ಚೀಟಿ ಹೊಂದಿದ್ದರೂ ಕೂಡಾ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ಇಲಾಖೆಯಿಂದ ಎಲ್ಲಾ ಆಸ್ಪತ್ರೆಯಲ್ಲಿ ಓರ್ವ ಆರೋಗ್ಯ ಮಿತ್ರ ಇರುತ್ತಾರೆ. ಪ್ರತಿ ಆಸ್ಪತ್ರೆಯ ಮುಂಭಾಗ ಹೆಲ್ಪ್‌ ಡೆಸ್ಕ್‌ ಇರುತ್ತದೆ. ಅಲ್ಲಿ ಅವರ ಆಧಾರ್‍ ಕಾರ್ಡ್ ತೋರಿಸಿದರೂ ಸಾಕು ಕೊರೊನಾ ದೃಢಪಟ್ಟಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಎಲ್ಲಾ ಆಸ್ಪತ್ರೆಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ ಎಂದು ಹೇಳಿದ ಅವರು ಒಂದು ವಾರದ ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಜನರ  ಸಹಕಾರ ಬೇಕು ಎಂದು ಮನವಿ ಮಾಡಿದ್ದಾರೆ.

ಸದ್ಯ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ 2 ಸಾವಿರಕ್ಕೂ ಅಧಿಕ ಬೆಡ್‌ಗಳು ಇದ್ದು ಅಗತ್ಯವಿದ್ದಲ್ಲಿ ಹಾಸ್ಟೆಲ್‌ಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.