ಮಂಗಳೂರು:- ಮಂಗಳೂರು ಮತ್ತು ಉಡುಪಿ ನಡುವೆ ಎರಡು ಟೋಲ್ ಕೇಂದ್ರಗಳಿದ್ದು ಅವು ಸುರತ್ಕಲ್ ಮತ್ತು ಹೆಜ್ಜಾಡಿಗಳಲ್ಲಿವೆ. ಇದರಲ್ಲಿ ಸುರತ್ಕಲ್ ಟೋಲ್ ಕೇಂದ್ರವು ಕಳೆದ ನಾಲ್ಕು ವರ್ಷಗಳಿಂದ ಅಕ್ರಮವಾಗಿ ನಡೆಯುತ್ತಿದೆ. ಗುತ್ತಿಗೆ ಮುಗಿದರೂ, ಪದೇ ಪದೇ ನವೀಕರಿಸಿ ಪಟ್ಟಭದ್ರರಿಗೆ ಹಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ಸ್ಥಳೀಯರು ನಿರಂತರವಾಗಿ ಸ್ಥಳೀಯ ಸಂಸದರಿಗೆ ಮತ್ತು ಶಾಸಕರಿಗೆ ಒತ್ತಾಯ ಮಾಡುತ್ತಿದ್ದರೂ, ಕೇವಲ ಆಶ್ವಾಸನೆ ಸಿಗುತ್ತಿದೆಯೇ ಹೊರತು ಇನ್ನೇನೂ ಆಗುತ್ತಿಲ್ಲ. ಇಷ್ಟು ಅಕ್ರಮವಾಗಿ ನಡೆಯುತ್ತಿರುವುದನ್ನು ನೋಡಿಯೂ ಏನೂ ಮಾಡದ ಸಂಸದರ ನಡೆ ಸಂಶಯಾಸ್ಪದವಾಗಿದೆ, ಪದೇ ಪದೇ ಗುತ್ತಿಗೆ ವಿಸ್ತರಿಸುತ್ತಿರುವ NHAI, ಯಾರ ಉದ್ಧಾರಕ್ಕಾಗಿ ಮತ್ತು ಯಾರ ಅಣತಿಯಂತೆ ಈ ರೀತಿ ಮಾಡುತ್ತಿದೆ ಹಾಗೂ ರಸ್ತೆ ನಿರ್ಮಾಣಕ್ಕೆ ಕಳೆದ ಐದು ವರ್ಷದಲ್ಲಿ ಎಷ್ಟು ಖರ್ಚಾಗಿದೆ, ಯಾವ ಯಾವ ಸುಂಕ ಸಂಗ್ರಹ ಕೇಂದ್ರದಿಂದ ಎಷ್ಟೆಷ್ಟು ಶುಲ್ಕ ಸಂಗ್ರಹವಾಗಿದೆ ಎಂಬ ಮಾಹಿತಿಯನ್ನು ಬಹಿರಂಗ ಮಾಡಬೇಕು. 

     ಈ ಅಕ್ರಮ ತಕ್ಷಣವೇ ನಿಲ್ಲಬೇಕು, ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರ ಮುಚ್ಚಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಒತ್ತಾಯಿಸುತ್ತದೆ. ಅತೀ ಕೆಟ್ಟದಾಗಿ ನಿರ್ವಹಿಸುತ್ತಿರುವ ಈ ಸುಂಕ ಸಂಗ್ರಹ ಕೇಂದ್ರ ಮತ್ತು ರಸ್ತೆಗಳಿಂದ ಯಾತಕ್ಕಾಗಿ ಇಷ್ಟೊಂದು ದುಬಾರಿ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಹೆಜ್ಯಾಡಿ ಮತ್ತು ಅದರ ಮುಂದಿನ ಸುಂಕ ಸಂಗ್ರಹ ಕೇಂದ್ರ ( ಕುಂದಾಪುರದ ಸಾಲಿಗ್ರಾಮ) ನಡುವೆ 48 ಕೀ. ಮೀ. ಇದ್ದು, ಕೇವಲ 35 ರೂಪಾಯಿ ಸುಂಕ ವಿಧಿಸಲಾಗುತ್ತಿದೆ, ಅಂದರೆ ಒಂದು ಕಿ. ಮೀ. ಗೆ 73 ಪೈಸೆ, ಆದರೆ ಸುರತ್ಕಲ್ ನಿಂದ ಹೆಲ್ಮಾಡಿ ನಡುವೆ ಕೇವಲ 16 ಕಿ. ಮೀ. ಅಂತರವಿದು ಆಗ 55 ರೂಪಾಯಿ ವಸೂಲಿ ಮಾಡಲಾಗುತ್ತಿದೆ, ಅಂದರೆ ಒಂದು ಕಿ.ಮೀ. ಗೆ 3.43 ರೂಪಾಯಿ. ಹೋಗಲಿ ಮಂಗಳೂರು ನಗರದಿಂದ ಸುರತ್ಕಲ್ನ 12 ಕಿಲೋಮೀಟರ್ ಸೇರಿಸಿ ಯಾವ ಲೆಕ್ಕ ಹಾಕಿದರು ಇದು ದುಬಾರಿ ಮತ್ತು ಅಕ್ರಮ ಶುಲ್ಕ ಸಂಗ್ರಹವಾಗಿದೆ.

  ಇಂತಹ ಸಮಸ್ಯೆಗಳ ಮತ್ತು ವಿಚಾರಗಳ ಬಗ್ಗೆ ನಮ್ಮ ಸಂಸದರು ಸಂಸತ್ತಿನಲ್ಲಿ ಎಂದು ಮಾತನಾಡಿಯೇ ಇಲ್ಲ. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಇಂತಹ ವಿಚಾರಗಳ ಬಗ್ಗೆ ನಿರಂತರವಾಗಿ ಹೋರಾಟ ಮಾಡುತ್ತದೆ ಮತ್ತು ಪ್ರಾದೇಶಿಕ ಸಮಾನತೆ ತರಲು ಶ್ರಮಿಸುತ್ತದೆ. 

ಅಮೃತ್ ಶೆಣೈ (ರಾಜ್ಯ ಉಪಾಧ್ಯಕ್ಷರು), ಅಲೆಕ್ಸಾಂಡರ್ ಡಿಸೋಜ (ಜಿಲ್ಲಾಧ್ಯಕ್ಷರು ದ.ಕ.ಜಿಲ್ಲೆ), ದೇವಿಪ್ರಸಾದ್ ಬಜಲಕೇರಿ (ಪ್ರಧಾನ ಕಾರ್ಯದರ್ಶಿ ದ.ಕ.ಜಿಲ್ಲೆ) ಇವರುಗಳು ಉಪಸ್ಥಿತರಿದ್ದರು.