“ನಾವು ಕೊಂಕಣಿಗರು ಮಾತೃ ಭಾಷೆಗಾಗಿ ಏನು ಮಾಡುತ್ತಿದ್ದೇವೆ ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ” - ವೆಂಕಟೇಶ ಬಾಳಿಗಾ

ಮಂಗಳೂರು: “ಕೊಂಕಣಿ ಭಾಷೆ ಒಂದು ಸ್ವತಂತ್ರ ಭಾಷೆ. ಗೋವಾ ರಾಜ್ಯದ ರಾಜ್ಯ ಭಾಷೆ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಮಾನ್ಯತೆ ಪಡೆದ ಭಾಷೆ, ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ಪಡೆದ ಭಾಷೆ, ಕರ್ನಾಟಕದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪಡೆದ ಭಾಷೆ, ಶಾಲೆಗಳಲ್ಲಿ 6 ರಿಂದ 10 ನೇ ತರಗತಿ ವರೆಗೆ ಐಚ್ಛಿಕ ಭಾಷೆಯಾಗಿ ಕಲಿಯಲು ಅವಕಾಶ ಪಡೆದ ಭಾಷೆ, ಪದವಿ ಕಾಲೇಜುಗಳಲ್ಲಿ ಭಾಷೆಯಾಗಿ ಕಲಿಯಲು ಅವಕಾಶ, ಸ್ನಾತ್ತಕೋತ್ತರ ಮಟ್ಟದಲ್ಲಿ ಅಧ್ಯಯನ ಮಾಡಲು ಅವಕಾಶ ಪಡೆದ ಭಾಷೆ ಹೀಗೆ ಎಲ್ಲಾ ರೀತಿಯ ಮಾನ್ಯತೆಗಳನ್ನು ಸರಕಾರಗಳು ನಮ್ಮ ಮಾತೃ ಭಾಷೆ ಕೊಂಕಣಿಗೆ ನೀಡಿದೆ. ಇಂದು ನಾವು ನಮ್ಮ ಮಾತೃ ಭಾಷೆಗಾಗಿ ಏನು ಮಾಡುತ್ತಿದ್ದೆವೆ ಎಂದು ನಮ್ಮನ್ನು ನಾವೇ ಪ್ರಶ್ನಿಸುವ ಕಾಲ ಬಂದಿದೆ” ಎಂದು ಕೊಡಿಯಾಲ ಖಬರ ಸಂಪಾದಕ ವೆಂಕಟೇಶ ಬಾಳಿಗಾ ಮಾವಿನಕುರ್ವೆ ನೆನಮಿಸಿದ್ದಾರೆ. ಕಳೆದ 38 ವರ್ಷಗಳಿಂದ ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಯ ಸೇವೆ ಮಾಡುತ್ತಿರುವ ಕೊಂಕಣಿ ಸಾಂಸ್ಕೃತಿಕ ಸಂಘದ ವತಿಯಿಂದ ಆಚರಿಸಲ್ಪಟ್ಟ “ಕೊಂಕಣಿ ಮಾನ್ಯತಾ ದೀವಸ” ಸಮಾರಂಭದಲ್ಲಿ ಮಾನ್ಯತಾ ದಿನದ ಸಂದೇಶವನ್ನು ನೀಡುತ್ತಾ ಅವರು ಹೀಗೆ ಹೇಳಿದರು. ಆಗಸ್ಟ 20, 1992 ರಂದು ನಮ್ಮ ಮಾತೃಭಾಷೆ ಕೊಂಕಣಿ ದೇಶದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿತು ಎಂದು ಹೇಳಿದ ಅವರು ಇದಕ್ಕಾಗಿ ಹೋರಾಡಿದ, ಜೀವ ನೀಡಿದ ಎಲ್ಲಾ ಹೋರಾಟಗಾರರನ್ನು ಅವರು ಸ್ಮರಿಸಿದರು.

ಈ ಸಮಾರಂಭದಲ್ಲಿ ಕೊಂಕಣಿ ಸಾಹಿತಿ ಕೋಣಿ ಶೇಷಗಿರಿ ನಾಯಕ ಅವರಿಗೆ ಎಂ. ರಘುನಾಥ ಶೇಟ ಸ್ವಾರಕ, “ಕೊಂಕಣಿ ಸಾಂಸ್ಕøತಿಕ ರಾಯಬಾರಿ” ಹಾಗೂ ಸಾಧಕಿ ಗೀತಾ ಸಿ. ಕಿಣಿ ಅವರಿಗೆ “ಕೊಂಕಣಿ ಸಾಂಸ್ಕೃತಿಕ ಸಾಧನಾ ರಾಯಬಾರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಕೊಂಕಣಿ ಎಂ. ಎ ಸ್ನಾತ್ತಕೋತ್ತರ ಪದವಿ ಪ್ರಾಪ್ತ ಮಾಡಿದ ವಿದ್ಯಾ ವಿ. ಬಾಳಿಗಾ ಹಾಗೂ ಬಿಂದು ಮಾದವ ಶೆಣೈ ಅವರಿಗೆ “ಕೊಂಕಣಿ ಸಾಂಸ್ಕೃತಿಕ ವಿದ್ಯಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಲ ಕಲಾವಿದರಾದ ಸಮರ್ಥ ಶೆಣೈ (ಕೊಳಲು ವಾದಕ) ಆನೀ ಶ್ರೇಯಸ್ ಪ್ರಭು (ಡ್ರಮ್ಸ್ ವಾದಕ) ಇವರಿಗೆ “ಕೊಂಕಣಿ ಸಾಂಸ್ಕøತೀಕ ಕಲಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಇದೇ ಕಾರ್ಯಕ್ರಮದಲ್ಲಿ ಸಂಘದ ಸ್ಥಾಪಕ ಜಿ. ಜಿ. ವಾಸುದೇವ ಪ್ರಭು ಅವರ ಸಂಸ್ಮರಣೆ ಜರಗಿತು. ಅತಿಥಿಗಳು ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಶ್ರದ್ದಾಂಜಲಿ ನೀಡಿದರು. ಸಂಘದ ಮಾಜಿ ಅಧ್ಯಕ್ಷ ಗೋವಿಂದರಾಯ ಪ್ರಭು ಸ್ಥಾಪಕರ ಗುಣಗಾನ ಮಾಡಿ ಸಂಘ ನಡೆದು ಬಂದ ದಾರಿಯನ್ನು ವಿವರಿಸಿದರು.

ಮುಖ್ಯ ಅತಿಥಿ ಎಸ್. ಎಲ್. ಶೇಟ ಜ್ಯುವೆಲ್ಲರ್ಸ್ ಎಂಡ್ ಡೈಮಂಡ್ ಹೌಸನ ಪ್ರಶಾಂತ ಶೇಟ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮ ಪ್ರೋತ್ಸಾಹ ನಿರಂತರ ಇದೆ ಎಂದು ಹೇಳಿದರು.ಗೌರವಾನ್ವಿತ ಅತಿಥಿಗಳಾದ ಜಿ. ಜಿ. ಮೋಹನದಾಸ ಪ್ರಭು ಅವರು ಶುಭ ಕೋರಿದರು. “ನಿನಾಸಂ ನಂತಹ ನಾಟಕ ತರಬೇತಿ ಘಟಕ ಸ್ಥಾಪಿಸುವ ಕನಸು ಸಂಸ್ಥಾಪಕ ಜಿ. ಜಿ. ವಾಸುದೇವ ಪ್ರಭುಗಳು ಕಂಡಿದ್ದರು. ನಾವೆಲ್ಲರು ಸೇರಿ ಅದನ್ನು ನನಸಾಗಿಸುವ ಪ್ರಯತ್ನ ಮಾಡಬೇಕು” ಎಂದು ಅವರು ಹೇಳಿದರು. ಸಂಘದ ಅಧ್ಯಕ್ಷ ಪಿ. ಸಂತೋಷ ಶೆಣೈ ಸ್ಬಾಗತಿಸಿ ಕಾರ್ಯದರ್ಶಿ ಪ್ರಭಾ ಭಟ್ ವಂದಿಸಿದರು. ಸುಚೇತಾ ಜಗನ್ನಾಥ ಕಾಮತ, ಖಜಾಂಜಿ ಗೀತಾ ಭಟ್ ಹಾಗೂ ಕಾರ್ಯಕ್ರಮದ ಸಂಚಾಲಕ ಉಮೇಶ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರತ್ನಾಕರ ಕುಡ್ವ ಮತ್ತು ವಿದ್ಯಾ ಬಾಳಿಗಾ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಖ್ಯಾತ ಸಂಗೀತಗಾರ ಕೊಂಚಾಡಿ ಮುರಳಿಧರ ಕಾಮತ ಅವರ ನೇತೃತ್ವದಲ್ಲಿ “ಕೊಂಕಣಿ ಗಾನ ಸುಧಾ” ಕಾರ್ಯಕ್ರಮ ನೆರವೇರಿತು.