ಮಂಗಳೂರು (ಸೆಪ್ಟೆಂಬರ್ 05):- ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿ ಜಿಲ್ಲೆಯಲ್ಲಿರುವ ಎಲ್ಲಾ ಸ್ಕ್ಯಾನಿಂಗ್ ಸೆಂಟರ್, ಕ್ಲಿನಿಕ್‍ಗಳನ್ನು  ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ಹೇಳಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಗರ್ಭ ಪೂರ್ವ ಮತ್ತು ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆ 1994 ಮತ್ತು ನಿಯಮ 1996 ರ ಅನುಷ್ಠಾನಕ್ಕೆ ಸಂಬಂಧಿಸಿದ ದ.ಕ. ಜಿಲ್ಲೆಯ ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

   ಜಿಲ್ಲಾ ತಪಾಸಣಾ ಮತ್ತು ಮೇಲ್ವಿಚಾರಣಾ ಸಮಿತಿಯು ಸರ್ಕಾರಿ ವೈದ್ಯರು ಹಾಗೂ ರೇಡಿಯಾಲಾಜಿಸ್ಟ್‍ಗಳನ್ನು ಒಳಗೊಂಡ ತಂಡವನ್ನು ರಚಿಸಿ ಎಲ್ಲಾ ಆಸ್ಪತ್ರೆಗಳ ಸ್ಕ್ಯಾನಿಂಗ್ ಸೆಂಟರ್, ಕ್ಲಿನಿಕ್‍ಗಳಿಗೆ ಭೇಟಿ ನೀಡಿ ಫಾರಂ ಬಿ ಜೊತೆಗೆ ಇನ್ನಿತರ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

    ಕಳೆದ 10 ವರ್ಷದಲ್ಲಿ ಜನಿಸಿದ ಗಂಡು, ಹೆಣ್ಣು ಮಕ್ಕಳ ಸರಾಸರಿ ಲಿಂಗಾನುಪಾತವನ್ನು ಸಭೆಯಲ್ಲಿ ಪರಶೀಲಿಸಲಾಯಿತು. ಅತೀ ಕಡಿಮೆ ಲಿಂಗಾನುಪಾತ ಹೊಂದಿರುವ ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.

   ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಸಲ್ಲಿಸಿದ ಅರ್ಜಿಗಳನ್ನು ಹಾಗೂ ಹೊಸದಾಗಿ ನೊಂದಾವಣೆಗೊಳ್ಳಬೇಕಾದ ಸಂಸ್ಥೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

   ಸಭೆಯಲ್ಲಿ ಜಿಲ್ಲಾ ಕುಂಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್,  ಸೆಂಟರ್ ಫರ್ ಡೆವಲಪ್‍ಮೆಂಟ್ ಸ್ಟಡೀಸ್ & ಏಜುಕೇಶನ್ ನಿರ್ದೇಶಕಿ ಡಾ. ರೀಟಾ ನೊರೆನ್ಹಾ,  ವೆನ್ಲಾಕ್ ಆಸ್ಪತ್ರೆಯ ರೇಡಿಯಾಲಾಜಿಸ್ಟ್ ಡಾ. ಅನಿತಾರಾಜ್ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ಧರು.