ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅವರ ನೇತೃತ್ವದ ನಿಯೋಗವು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ವಿಧಾನಸೌಧದ ಮುಖ್ಯ ಮಂತ್ರಿಯವರ ಕಚೇರಿಯಲ್ಲಿ ಗುರುವಾರ ಸಂಜೆ ಭೇಟಿ ಮಾಡಿ ಪಿ.ಯು.ಸಿ.ತರಗತಿಯಲ್ಲಿ ಐಚಿಕ್ಕ. ಪಠ್ಯ ವಿಷಯವಾಗಿ ತುಳುವನ್ನು ಸೇರ್ಪಡೆ ಮಾಡುವ ವಿಚಾರವಾಗಿ ಮಾತುಕತೆ ನಡೆಸಿ ಮನವಿ ಸಲ್ಲಿಸಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಮುಖ್ಯಮಂತ್ರಿಗಳ ಜೊತೆ  ಈ ಮಾತುಕತೆಯನ್ನು ಆಯೋಜಿಸಿದ್ದರು.

ತುಳು ಪಠ್ಯ ವನ್ನು ಈಗಾಗಲೇ ಪ್ರೌಢ ಶಾಲೆಯಲ್ಲಿ,  , ಪದವಿ ಶಿಕ್ಷಣದಲ್ಲಿ ಮತ್ತು ಸ್ನಾತಕೋತ್ತರ ಪದವಿ ತರಗತಿಯಲ್ಲಿ ಅಳವಡಿಸಿಕೊಳ್ಳಾಗಿದೆ. ಪಿ.ಯು.ಸಿ.ತರಗತಿಯಲ್ಲಿ ಮಾತ್ರ ತುಳು ಪಠ್ಯ ಜಾರಿಗೆ ಬರಲು ಬಾಕಿ ಇದೆ ಎಂಬ ವಿಚಾರವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಯಿತು. ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಮುಂಚಿತವಾಗಿ ಪಿ.ಯು.ಸಿ.ತರಗತಿಗಳಿಗೆ ಕೂಡ ತುಳು ಪಠ್ಯವನ್ನು ಐಚ್ಛಿಕ ವಿಷಯವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಯಿತು.  ತಕ್ಷಣವೇ ಪಿ.ಯು.ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಯವರು ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ  ಸೂಚಿಸಿದರು.  ಪಿ.ಯು.ಸಿ.ಯಲ್ಲಿ ತುಳು ಪಠ್ಯ ಜಾರಿಯ ಬಗ್ಗೆ  ಶೀಘ್ರವಾಗಿ ನಿರ್ಧಾರಕ್ಕೆ ಬರಲಾಗುವುದೆಂದು  ಮುಖ್ಯಮಂತ್ರಿಯವರು ನಿಯೋಗಕ್ಕೆ ಭರವಸೆ ನೀಡಿದರು.

ಇದೇ ವೇಳೆ ತುಳು ಅಕಾಡೆಮಿಯ ತುಳು ಭವನದ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಲು ಬೇಕಾದ 3.6 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೂಡ ಅಧ್ಯಕ್ಷ ಎ.ಸಿ.ಭಂಡಾರಿಯವರು ಮುಖ್ಯಮಂತ್ರಿಯವರ ಗಮನ ಸೆಳೆದರು. ಈ ಬಗ್ಗೆ ಕೂಡ ಸ್ಪಂದಿಸುವುದಾಗಿ ಮುಖ್ಯಮಂತ್ರಿವರು ಭರವಸೆ ನೀಡಿದರು.

ತುಳು ಅಕಾಡೆಮಿಯ ಚಟುವಟಿಕೆಗಳ ಬಗ್ಗೆ ಮತ್ತು ಬೇಡಿಕೆಗಳ ಬಗ್ಗೆ  ಮುಖ್ಯಮಂತ್ರಿಯರೊಂದಿಗೆ ಮಾತುಕತೆ ನಡೆಸಲಾದ ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್,  ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್,  ಮಾಜಿ ಸಚಿವ ಗಂಗಾಧರ ಗೌಡ,  ಮಾಜಿ ಶಾಸಕ ವಸಂತ ಬಂಗೇರಾ,  ಅಕಾಡೆಮಿ ಸದಸ್ಯರಾದ ತಾರಾನಾಥ್ ಗಟ್ಟಿ ಕಾಪಿಕಾಡ್,  ಬೆನೆಟ್ ಅಮ್ಮನ್ನ ಉಪಸ್ಥಿತರಿದ್ದರು.  

ಬಳಿಕ ಇದೇ ವಿಚಾರವಾಗಿ ಜಲಸಂಪನ್ಮೂಲ ಹಾಗೂ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಲಾಯಿತು.