ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.) ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್ ಇವರ ಸಹಯೋಗದಲ್ಲಿ ದಿನಾಂಕ _27-01-2020 ರಂದು ಮಂಗಳೂರಿನ ತುಳುಭವನದಲ್ಲಿ ತುಳು ಭಾಷೆ ಮತ್ತು ತುಳು ಲಿಪಿಯಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ. ಜಿ. ಕತ್ತಲ್‌ಸಾರ್‌ ಅವರು ವಹಿಸಿಕೊಂಡು ತುಳು ಲಿಪಿಯ ಸಂವಿಧಾನದ ಪೀಠಿಕೆಯನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಮಾತಾಡಿದ ಅಧ್ಯಕ್ಷರು ತುಳು ಪರವಾಗಿ ದುಡಿಯುತ್ತಿರುವ ಸಂಘಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಸಂಘಟನೆಗಳಿಗೆ ಸರ್ವ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದರು. ಅಷ್ಟು ಮಾತ್ರವಲ್ಲದೇ ತುಳು ಸಂಸ್ಕೃತಿಯ ಉಳಿವಿಗಾಗಿ ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳಲಾಗುವುದು ಎಂಬ ಭರವಸೆಯನ್ನು ನೀಡಿದರು. "ತುಳು ಭಾಷೆಯಲ್ಲಿ ಸಂವಿಧಾನದ ಬಿಡುಗಡೆ ಬಹುಕಾಲದ ಹಿಂದೆಯೇ ನಡೆಯಬೇಕಿದ್ದ ಕಾರ್ಯವಾಗಿತ್ತು, ಈ ದಿನ ಸಂವಿಧಾನದ ಪೀಠಿಕೆಯನ್ನು ತುಳು ಭಾಷೆ ಮತ್ತು ತುಳು ಲಿಪಿಯಲ್ಲಿ ರಚಿಸಲಾಗಿದೆ ಇನ್ನು ಮುಂದೆ ಸಂಪೂರ್ಣ ಸಂವಿಧಾನವನ್ನೇ ತುಳು ಭಾಷೆಯಲ್ಲಿ ನಿರ್ಮಿಸುವ ಅಗತ್ಯವಿದೆ. ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಆಕಾಶ್ ರಾಜ್ ಜೈನ್ ರವರು ಅಭಿಪ್ರಾಯಪಟ್ಟರು.

ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಲೀಲಾಕ್ಷ ಕರ್ಕೇರ, ನಿಟ್ಟೆ ಶಶಿಧರ ಶೆಟ್ಟಿ, ಸಿದ್ದಕಟ್ಟೆ ಮಲ್ಲಿಕಾ ಅಜಿತ್‌ ಶೆಟ್ಟಿ, ಅಕಾಡೆಮಿಯ ರಿಜಿಸ್ಟಾರ್ ರಾಜೇಶ್, ಜಿ ರವರು ಜೈ ತುಳುನಾಡ್ ಸಂಘ ಮತ್ತು ಬೆಂಗಳೂರು ತುಳುವಾಸ್ ಕೌನ್ಸಿಲ್‌ನ ಸದಸ್ಯರು ಉಪಸ್ಥಿತರಿದ್ದರು.