ಮಂಗಳೂರು:- ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‍ ಕೋರೊನದಿಂದ ಎಚ್ಚರವಿರಬೇಕಾದ ಈ ಸಂದರ್ಭದಲ್ಲಿ ಡಿಜಿಟಲ್ ಹಾಗೂ ಆನ್ ಲೈನ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸುವಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.

ವಿಶೇಷತೆ: ಇತರ ಬ್ಯಾಂಕ್ ಖಾತೆಗಳಿಗೆ ಹಾಗೂ ಖಾತೆಗಳಿಂದ ತಕ್ಷಣ ಹಣ ವರ್ಗಾವಣೆ, ನೆಫ್ಟ್,  ಮೊಬೈಲ್‍ರಿಚಾರ್ಜ್, ಡಿ.ಟಿ.ಎಚ್‍ರಿಚಾರ್ಜ್, ಆನ್ ಲೈನ್ ಮೂಲಕ ಅಂಚೆ ಕಛೇರಿಯ ಆರ್.ಡಿ,  ಪಿ.ಪಿ.ಎಫ್, ಸುಕನ್ಯಾ ಸಮೃದ್ಧಿ  ಖಾತೆಗಳಿಗೆ ಹಣಜಮಾ ಮಾಡುವುದು. ಹೀಗೆ ಹತ್ತು ಹಲವು ವಿಶೇಷತೆಗಳು ಐ.ಪಿ.ಪಿ.ಬಿಯಲ್ಲಿವೆ.

ವಿಧವಾವೇತನ, ವೃದ್ಧಾಪ್ಯವೇತನ, ಸಂಧ್ಯಾ ಸುರಕ್ಷಾ ವಿಕಲಾಚೇತನ ವೇತನ, ವಿದ್ಯಾರ್ಥಿಗಳಿಗೆ ಸರಕಾರದ ಸ್ಕಾಲರ್ ಶಿಪ್, ಕಿಸಾನ್ ಸಮ್ಮಾನ್, ಗ್ಯಾಸ್ ಸಬ್ಸಡಿ  ಹೀಗೆ ಸರಕಾರದ ಹಲವಾರು ಯೋಜನೆಗಳ ಪ್ರಯೋಜನ ಪಡೆಯಲು ಐ.ಪಿ.ಪಿ.ಬಿ ಖಾತೆ ಒಂದು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಇನ್ನೊಂದು ವಿಶಿಷ್ಟ ಸೇವೆಯೆಂದರೆ  ಏ.ಇ.ಪಿ.ಎಸ್(AEPS). ಇದರ ಮೂಲಕ ಆಧಾರ್‍ಜೋಡಣೆಗೊಂಡ ಯಾವುದೇ ಬ್ಯಾಂಕ್‍ ಖಾತೆಯಿಂದ ಅಂಚೆ ಕಛೇರಿಯಲ್ಲಿ ಅಥವಾ ಅಂಚೆಯಣ್ಣನ ಮೂಲಕ ಮನೆಬಾಗಿಲಿನಲ್ಲಿ ಹಣವನ್ನು ಪಡೆಯಬಹುದು. ಚೆಕ್,  ಎ. ಟಿ. ಎಂ ಯಾವುದೂ ಬೇಡ.  ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಹೊಂದಿರಬೇಕು. ಐ.ಪಿ.ಪಿ.ಬಿ ಖಾತೆಗಳಲ್ಲಿ ಕನಿಷ್ಠ ಶುಲ್ಕ ವೆಚ್ಚವನ್ನುಕೂಡ ವಿಧಿಸುವುದಿಲ್ಲ.

ಖಾತೆ ಮಾಡಿಸುವುದು: ಆಧಾರ್ ಸಂಖ್ಯೆ, ಮೊಬೈಲ್ ಹಾಗೂ ಕೇವಲ ರೂಪಾಯಿ 100  ಹಣದೊಂದಿಗೆ ಸಮೀಪದ ಯಾವುದೇ ಅಂಚೆ ಕಚೇರಿಗೆ ಅಥವಾ ಪೋಸ್ಟ್ ಮ್ಯಾನ್‍ನನ್ನು ಭೇಟಿಯಾಗಿ ಖಾತೆ ತೆರೆದು ಬ್ಯಾಂಕಿಂಗ್ ಸೇವೆಯ ಅಸೀಮಿತ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು.

ಮಂಗಳೂರು ವಿಭಾಗದ ಎಲ್ಲಾ ಗ್ರಾಮಾಂತರ ಹಾಗೂ ನಗರ ಪ್ರದೇಶದ ಸಾರ್ವಜನಿಕರು  ಅಂಚೆ ಕಚೇರಿಗೆ  ಭೇಟಿ ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ಅಂಚೆ ಕಛೇರಿಯಲ್ಲಿ ನೂಕು ನುಗ್ಗಲು ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಅಂತರದ ಮೂಲಕ ಕೋವಿಡ್19  ಸುರಕ್ಷಾ ನಿಯಮಗಳ ಪಾಲನೆಯೊಂದಿಗೆ ಅಂಚೆ ಕಛೇರಿಯಲ್ಲಿ ಐ.ಪಿ.ಪಿ.ಬಿ  ಖಾತೆತೆರೆಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಮಂಗಳೂರು ವಿಭಾಗ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀಹರ್ಷ ಪ್ರಕಟಣೆ ತಿಳಿಸಿದೆ.