ಮಂಗಳೂರು: ಕೋವಿಡ್ 19 ರಾಷ್ಟ್ರೀಯ ವಿಪತ್ತನ ಬಾದಕಗಳನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕರಾದ ಜೆ.ಆರ್ ಲೋಬೋರವರು ಇಂದು ಪತ್ರಿಕಾ ಹೇಳಿಕೆಯಲ್ಲಿ ನೀಡಿದ ಸಂದರ್ಭದಲ್ಲಿ ಪಾಲಿಕೆಯ ವಿರೋಧ ಪಕ್ಷ ನಾಯಕ ಅಬ್ಲುಲ್ ರವೂಫ್ ಬಜಾಲ್, ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ಹಾಗೂ ಟಾಸ್ಕ್ ಫೋರ್ಸನ ಇನ್ನೋರ್ವ ಅಧ್ಯಕ್ಷ ಸುಭೋಧಯ ಆಳ್ವ, ಉಪಸ್ಥಿತರಿದ್ದರು.

ಜನಸಾಮಾನ್ಯರ ನೆಮ್ಮದಿಯ ಬದುಕಿಗಾಗಿ ಆಡಳಿತ ಪಕ್ಷವು ಸಕಾಲಿಕವಾಗಿ ತೆಗೆದು ಕೊಳ್ಳ ಬೇಕಾಗಿರುವ ನಿರ್ಧಾರವನ್ನು ಮತ್ತೆ ನೆನಪಿಸುವ ಮೂಲಕ ಮಾತಾಡಿದ ಲೋಬೋರವರು ಮಂಗಳೂರು ಮಹಾ ನಗರ ಪಾಲಿಕೆಯಂತಹ ಚುನಾಯಿತ ಸಂಸ್ಥೆಯಲ್ಲಿ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ನಡೆಯುತ್ತಿರುವಂತಹ ನಿರ್ಧಾರಗಳನ್ನು ಅವರು ಟೀಕಿಸಿದರು.

ಸ್ಮಾರ್ಟ್ ಸಿಟಿಯಲ್ಲಿ ಕೇಂದ್ರ ಮಾರುಕಟ್ಟೆಯಲ್ಲಿದ್ದವರಿಗೆ ಅಂಗಡಿ ಮಳಿಗೆ ನೀಡ ಬೇಕೆಂಬ ನಿರ್ಧಾರವನ್ನು ಕೈ ಗೊಳ್ಳದೆ , ದೂರದ ಎಪಿಯಂಸಿ ಯಾರ್ಡಿಗೆ ಸೆಂಟ್ರಲ್ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿರುವುದು ಸರಿಯಾದ ಕ್ರಮವಲ್ಲ.

ಹಸಿದ ಹೊಟ್ಟೆಗೆ ತುತ್ತಿನ ವ್ಯವಸ್ಥೆಯನ್ನು ಮಾಡುವ ಬದಲು ಬಿಜೆಪಿ ನಾಯಕರು ಮನೆಮನೆಗೆ ಹೋಗಿ ಪಕ್ಷದ ಧ್ವಜವನ್ನು ನೀಡುತ್ತಾ ದೇಣಿಗೆ ಸಂಗ್ರಹಿಸುತ್ತಿರುವ ಆಡಳಿತ ಪಕ್ಷವು ರಾಷ್ಟ್ರೀಯ ವಿಪತ್ತನ್ನು ರಾಜಕೀಯ ದಾಳವಾಗಿ ಬಳಸಿ ಕೊಂಡಿದೆ.

ಮುಸ್ಲಿಂ ಭಾಂದವರಿಗೆ ಗ್ರಾಮ ಪ್ರವೇಶಕ್ಕೆ ಬಹಿಷ್ಕಾರ ಹಾಕಿ ಭಿತ್ತಿ ಪತ್ರಗಳನ್ನು ಹಚ್ಚುತ್ತಾ ಜಾತಿ, ಧರ್ಮಗಳ ನಡುವೆ ಕಂದಕಗಳನ್ನು ನಿರ್ಮಿಸಲು ಹೊರಟಿರುವುದನ್ನು ತೀರ್ವವಾಗಿ ಖಂಡಿಸಿದರು.

ಉತ್ತರ ಕನ್ನಡ ಲೋಕಸಭಾ ಸದಸ್ಯ ಅನಂತ್ ಕುಮಾರ್ ಹೆಗ್ಡೆ ಮತ್ತು ಶಾಸಕ ರೇಣುಕಾಚಾರ್ಯರಂತಹ ಜವಾಬ್ದಾರಿಯುಳ್ಳ ನಾಯಕರು ತಬ್ಲಿಘೆಯಲ್ಲಿ ಭಾಗವಹಿಸುವವರಿಗೆ, ಗುಂಡೇಟು ಹೊಡೆಯ ಬೇಕೇನ್ನುವ ಮೂಲಕ ಪ್ರಚೋದನಾತ್ಮಕವಾಗಿ ಮಾತಾಡುತ್ತಾರೆ. ಇಷ್ಟರವರೆಗೆ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ತಬ್ಲಿಘೆಯಲ್ಲಿ ಸಮಾವೇಶ ನಡೆಸಲು ಹಾಗೂ ವಿದೇಶದಿಂದ ಬರುವವರಿಗೆ ಅವಕಾಶ ಮಾಡಿ ಕೊಟ್ಟಿರುವುದು ಅವರದೇ ಆಡಳಿತವಿರುವ ಕೇಂದ್ರ ಸರ್ಕಾರ ಎಂಬ ಕನಿಷ್ಟ ಜ್ಣಾನ ಇವರಿಗಿಲ್ಲವೇ ಎಂದು ಟೀಕಿಸಿದರು.

ಇಂದು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದುಬಾರಿ ಬೆಲೆ ನೀಡಿ ಜೀವನವಾಶ್ಯಕ ವಸ್ತುಗಳು, ತರಕಾರಿಗಳನ್ನು ಖರೀದಿಸಲು ಸಾಧ್ಯವಿಲ್ಲ. ಶಿವಮೊಗ್ಗ , ರಾಯಚೂರು ಮುಂತಾದ ಕಡೆಗಳಲ್ಲಿ ಅಕ್ಕಿ ಗಿರಣಿಗಳು ಕದ ಮುಚ್ಚುವ ಮೂಲಕ ಬರಗಾಲಕ್ಕೆ ಮುನ್ನುಡಿ ಬರೆಯಲಿದೆ. ಆದರೆ ಸರಕಾರ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

ಲಾಕ್ ಡಾನ್ 14 ರಂದು ಕೊನೆಗೊಳ್ಳಲಿದೆ ಇದನ್ನು ಮುಂದುವರಿಸುತ್ತಾರೋ ಇಲ್ಲವೋ ಎಂಬ ಗೊಂದಲ ಜನಸಾಮಾನ್ಯರಲ್ಲಿದೆ. ಮತ್ತೆ ಮಧ್ಯರಾತ್ರಿಯಲ್ಲಿ ಪ್ರಕಟಿಸದೆ ಜನರಿಗೆ ಸರಿಯಾದ ಮಾಹಿತಿ ನೀಡ ಬೇಕಾಗಿದೆ ಎಂದರು.

ಪಾಲಿಕೆಯ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್ ರವರು ಕೊರೊನಾ ವೈರಸ್‍ನ ನಿರ್ಮೂಲನೆಗೆ ಆಡಳಿತ ಪಕ್ಷಕ್ಕೆ ಸರ್ವ ಸಮ್ಮತ ಸಹಕಾರ ನೀಡಲು ನಾವು ಕಟಿ ಬದ್ಧರಾಗಿದ್ದೇವೆ. ಇಡೀ ದೇಶವೇ ವಿಪತ್ತನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪಾಲಿಕೆಯ ಆಡಳಿತ ಪಕ್ಷವು ಮಂಗಳೂರು ಸೆಂಟ್ರಲ್ ಮಾರ್ಕೆಟನ್ನು ಎಪಿಯಂಸಿ ಯಾರ್ಡಿಗೆ ಸ್ಥಳಾಂತರ ಮಾಡಲು ಹೊರಟಿದೆ. ಈ ವಿಚಾರವನ್ನು ಪಾಲಿಕೆಯ ಪರಿಷತ್ ಸಭೆಯ ಗಮನಕ್ಕೂ ತಾರದೆ , ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿರುವುದು ಪ್ರಶ್ನಾರ್ಹವಾಗಿದೆ ಎಂದರು.