ಮಂಗಳೂರು : ಕೇಂದ್ರ ಸರಕಾರವು ಕಾಶ್ಮೀರದಲ್ಲಿ 370ನೇ ವಿಧಿ ರದ್ಧತಿಯ ನೆಪದಲ್ಲಿ ಅಲ್ಲಿನ ವಿಧಾನಸಭೆಯನ್ನು ರದ್ದುಗೊಳಿಸಿ, ರಾಜ್ಯ ನಾಯಕರನ್ನು ಬಂಧನದಲ್ಲಿರಿಸಿ ಜನತೆಯನ್ನು ಗೊಂದಲದಲ್ಲಿ ಸಿಲುಕಿಸಿ ಸಂಸತ್ತಿನಲ್ಲಿ ಚರ್ಚೆಗೂ ಅವಕಾಶ ಮಾಡಿಕೊಡದೆ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ. ಆ ಮೂಲಕ ಕಾಶ್ಮೀರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್‍ರವರು ಹೇಳಿದರು.

ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ ದ.ಕ ಜಿಲ್ಲಾ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ರಾಜ್ಯ ಮಂತ್ರಿಮಂಡಲವನ್ನು ರಚಿಸದೆ ನೆರೆ ಪರಿಹಾರ ಕಾರ್ಯ ಕೈಗೊಳ್ಳದೆ ಜನರನ್ನು ವಂಚಿಸುತ್ತಿರುವ ರಾಜ್ಯ ಸರಕಾರ ಜನರ ಸಮಸ್ಯೆಗಳನ್ನು ಕಡೆಗಣಿಸಿವೆ. ದಿನೇ ದಿನೇ ಕುಸಿಯುತ್ತಿರುವ ದೇಶದ ಆರ್ಥಿಕ ಪರಿಸ್ಥಿತಿಗೆ ಯಾವುದೇ ಸುಧಾರಣಾ ಕ್ರಮಕೈಗೊಳ್ಳುವ ಬದಲು ಕೇಂದ್ರ ಸರಕಾರವು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು.

ಮಾಜಿ ಸಚಿವರಾದ ರಮಾನಾಥ ರೈಯವರು ಮಾತನಾಡುತ್ತಾ, ಸಮ್ಮಿಶ್ರ ಸರಕಾರ ಪತನದ ಹಿಂದಿರುವ ಸಂಚು ಹಾಗೂ ಕೇಂದ್ರದಲ್ಲಿ ಆರ್ಥಿಕ ದುಃಸ್ಥಿತಿಯನ್ನು ಅರಿತಿರುವ ಮತದಾರರು ಈಗೀಗ ಕಾಂಗ್ರೆಸ್‍ನ್ನು ಬಯಸುತ್ತಿರುವುದು ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದೆ. ಹಿಂದಿನ ಸೋಲಿಗೆ ಧೃತಿಗೆಡದೆ ತಳಮಟ್ಟದಿಂದಲೇ ದುಡಿದು ಪಕ್ಷದ ವರ್ಚಸ್ಸನ್ನು ಮರಳಿ ಪಡೆಯಬೇಕು. ಮಾತ್ರವಲ್ಲದೆ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಲು ಹೊರಟರೆ ಅದರ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.