ಹಿಂದಿನಿಂದ ಇಂದಿನವರೆಗೂ ಪರಿಸರ ಪೂರಕ, ಅಭಿವೃದ್ಧಿ ಪರ, ಕ್ರಿಮಿ ಕೀಟ, ರೋಗ-ರುಜಿನ ಪರಿಹಾರಕ ಸಗಣಿ, ಗಂಜಲಗಳು ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಾಲಿನ್ಯಕಾರಿಯೇ? ಏಕೆಂದರೆ ಇತ್ತೀಚೆಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಂತಹದೊಂದು ಆಲೋಚನೆಯನ್ನು ಹೊಂದಿರುವ ಬಗೆಗೆ ತಿಳಿದುಬಂದಿದೆ. ಇದು ಬಹಳ ಅಚ್ಚರಿಯ ಸಂಗತಿಯಾಗಿದೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿ ಇಂತಹ ಉಪಕ್ರಮ ಕೈಗೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ.

ದೇಶದ ಶಾಖೋತ್ಪನ್ನ ವಿದ್ಯುತ್ ಉತ್ಪಾದಕಗಳು, ಕಚ್ಚಾ ತೈಲ ವಿಂಗಡಿಸುವ ಕಾರ್ಖಾನೆಗಳು, ಪ್ಲಾಸ್ಟಿಕ್ ಉತ್ಪಾದಕ ಕಾರ್ಖಾನೆಗಳು, ಬಣ್ಣ ಇತ್ಯಾದಿ ಎಲ್ಲಾ ಉತ್ಪಾದಕ ಕಾರ್ಖಾನೆಗಳು ಹೊರ ಸೂಸುವ ಹೊಗೆ, ಬಿಡುವ ಮಾಲಿನ್ಯಕಾರಕಗಳು, ರಾಸಾಯನಿಕ ತ್ಯಾಜ್ಯಗಳು ಕುದಿನೀರಿನೊಂದಿಗೆ ನೇರವಾಗಿ ನದಿ, ತೊರೆ, ಕಾಲುವೆಗಳಿಗೆ, ಸಮುದ್ರಕ್ಕೆ ಬಿಡುತ್ತಿರುವುದು ಮಾಲಿನ್ಯ ರಹಿತವೇ? ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿಜವಾಗಿ ಎದೆಗಾರಿಕೆ ಇದ್ದರೆ ಮೇಲ್ಕಾಣಿಸಿದ ಎಲ್ಲಾ ಕಾರ್ಖಾನೆಗಳ ನೈಜ ಪರಿಸ್ಥಿತಿಯನ್ನು ಸಮರ್ಪಕವಾಗಿ ಅಧ್ಯಯನ ಗೈದು ಜನರ ಮುಂದಿಡಲಿ. 

ಹೆಚ್ಚಿನ ಕಾರ್ಖಾನೆಗಳು ಘನ ತ್ಯಾಜ್ಯ ನಿರ್ವಹಣೆ ಜಲ ಕಾಯಿದೆ-1974 ಹಾಗೂ ವಾಯು ಸಂರಕ್ಷಣಾ,ಮಾಲಿನ್ಯ ನಿಯಂತ್ರಣ ಕಾಯಿದೆ-1981 ನ್ನು ಸಾರಾಸಗಟು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿವೆ. ಕಾರ್ಖಾನೆ ಅನುಮತಿ ಸಿಗುವಾಗ ಮಾಡಿಕೊಂಡ ಯಾವುದೇ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಾಪಾಡದೆ, ನಿರ್ವಹಿಸದೇ ಇದ್ದ ಪರಿಣಾಮ ಇಂದು ಪರಿಸರ ಮಾಲಿನ್ಯ ಮೇರೆ ಮೀರಿ ಹೋಗಿದ್ದು ಕೊರೊನಾದ ಸಂದರ್ಭದ ಲಾಕ್ ಡೌನ್ ನಿಂದಾಗಿ ಎಲ್ಲವೂ ತಹಬಂದಿಗೆ ಬಂದಿತ್ತು. ಇದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಹೀಗಾಗಿ ಎಲ್ಲ ಕಾರ್ಖಾನೆಗಳೂ ತಮ್ಮ ಹಂತದಲ್ಲಿಯೇ ಮಾಲಿನ್ಯಕಾರಕ ರಾಸಾಯನಿಕ, ಇತರೆ ಎಲ್ಲಾ ವಸ್ತುಗಳನ್ನೂ ವಿಂಗಡಿಸಿ ಅಲ್ಲಿಯೇ ವಿಲೇ ಮಾಡುವಂತೆ ನಿರ್ದಿಷ್ಟ ಪಡಿಸಬೇಕು. ಯಾವುದೇ ಅಂಶವನ್ನೂ ಜಲ, ಗಾಳಿ, ನೆಲಕ್ಕೆ ಬಿಡದಂತೆ ನಿರ್ಬಂಧಿಸಬೇಕು. ಕೆಲವಾರು ಕಡೆಗಳಲ್ಲಿ ಕಾರ್ಖಾನೆಯ ಬಿಸಿ ನೀರನ್ನು ಯಥಾವತ್ ಜಲ ಮೂಲಗಳಿಗೆ ಬಿಟ್ಟು ಜಲಚರಗಳ ಸಾವಿಗೆ ಕಾರಣವಾಗುತ್ತಿವೆ.

ರಾಷ್ಟ್ರಮಟ್ಟದಲ್ಲಿ ಆಗಬೇಕಾದ ಮೇಲ್ಕಂಡ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಮತ್ತು ಆ ಕಾರ್ಖಾನೆಗಳ ಕಾರ್ಮಿಕರಿಗೆ ಸೂಕ್ತ ಸೂರು, ಇತ್ಯಾದಿ ಒದಗಿಸದಿರುವುದರಿಂದ ದೆಹಲಿ, ಧಾರಾವಿ, ಸೂರತ್, ಕಲ್ಕತ್ತಾ ಇತ್ಯಾದಿ ಹಲವಾರು ನಗರಗಳ ವಾಸ, ವಾಸನೆ, ಮಾಲಿನ್ಯಗಳು ಮಿತಿ ಮೀರಿದ್ದು ಅಲ್ಲಿರುವ ಕಾರ್ಖಾನೆಗಳ ಮಾಲಿನ್ಯ ನಿಯಂತ್ರಣ ಕ್ರಮ ಕೈಗೊಳ್ಳಲು ಸೂಚಿಸುವ ಬದಲು ರೈತಾಪಿ ಅತ್ಯಂತ ಉತ್ತೇಜಕರ ಅಂಶಗಳಿಗೆ ನಿಯಂತ್ರಣ ಕೈಗೊಳ್ಳ ಹೊರಟಿರುವುದು ಯಾವುರ ದ್ಯೋತಕ?

ಹಳ್ಳಿಗಳು, ಗ್ರಾಮಗಳು, ಅರೆ ಪಟ್ಟಣ, ನಗರಗಳಲ್ಲಿ ಇಂದಿಗೂ ಕೂಡಾ ಜನರು ತಮ್ಮ ಮನೆಯ ಎದುರಿನ ಅಂಗಳ ಇತ್ಯಾದಿಗಳನ್ನು ಗೋಮಾತೆಯ ಸಗಣಿ, ಗಂಜಲಗಳನ್ನು ಸಾರಿಸಿ ಕ್ರಿಮಿ, ದೋಷ ಮುಕ್ತಗೊಳಿಸಿಕೊಂಡು ಹಲವಾರು ಖಾಯಿಲೆಗಳನ್ನು ದೂರವಿರಿಸಿ ಕೊಳ್ಳುತ್ತಿದ್ದಾರೆ. ಗೋಮಾತೆಯ ಸಗಣಿ, ಗಂಜಲಗಳನ್ನು ಸೂಕ್ತ ಏರ್ಪಾಢಿನೊಂದಿಗೆ ಸಂಸ್ಕರಿಸಿ ಹಲವಾರು ಖಾಯಿಲೆಯ ಮದ್ದು-ಇತ್ಯಾದಿಗಳನ್ನು ತಯಾರಿಸಿ ಸೇವಿಸುವುದರ ಮೂಲಕ ಯಾವದರಿಂದಲೂ ವಾಸಿಯಾಗದ ಖಾಯಿಲೆ-ಕಸಾಲೆಗಳು ನಿಯಂತ್ರಣಕ್ಕೆ ಬಂದ ಹಲವಾರು ಉದಾಹರಣೆಗಳಿವೆ. ಯಾವುದೇ ಪಾಶ್ಚಾತ್ಯ ಪದ್ಧತಿಯಿಂದ ತಹಬಂದಿಗೆ ಬರದ ರೋಗ ರುಜಿನಗಳು ಸಗಣಿ, ಗಂಜಲದ ಕೇವಲ ಸ್ನಾನದಿಂದ ನಿಯಂತ್ರಿಸಿದ ಉದಾಹರಣೆ ಆಯುರ್ವೇದದಲ್ಲಿದೆ. ಆಹಾರವನ್ನು ಉತ್ಪಾದಿಸಲು ಗದ್ದೆ-ತೋಟಗಳಿಗೆ ಸಾವಯವ ಸಗಣಿಯ ಗೊಬ್ಬರವನ್ನು ಹಾಕುತ್ತಿಲ್ಲವೇ? ಕ್ರಿಮಿ-ಕೀಟಗಳ ನಿಯಂತ್ರಣಕ್ಕೆ ಗಂಜಲವನ್ನು ಉಪಯೋಗಿಸುತ್ತಿರುವುದು ಗೊತ್ತಿಲ್ಲವೇ? ಗೊತ್ತಿಲ್ಲದಿದ್ದರೆ ಸಾವಯವ ಕೃಷಿಕರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಲಿ.

ಅನಗತ್ಯ ವಿಚಾರಗಳ ಬಗೆಗೆ ಮತ್ತು ಕೃಷಿ, ತೋಟ ಅಭಿವೃದ್ಧಿ ಪೂರಕ ಸಗಣಿ, ಗಂಜಲಕ್ಕೆ ನಿಯಂತ್ರಣ ಹೇರುವ ಮೊದಲು ನೈಜ ಕೃಷಿಕರ ಸಲಹೆ-ಸೂಚನೆ, ಅಭಿಪ್ರಾಯಗಳಿಗೆ ಮನ್ನಣೆ ನೀಡಲಿ. ಅಭಿವೃದ್ಧಿಯ ಹೆಸರಲ್ಲಿ ನೆಲ, ಜಲ, ವಾಯು ಮಾಲಿನ್ಯವನ್ನು ಹೆಚ್ಚಿಸುತ್ತಿರುವ ಮತ್ತು ಎಲ್ಲಾ ಸಲಹೆ, ಸೂಚನೆ, ನಿಯಮ, ನಿಬಂಧನೆಗಳನ್ನೂ ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವರ್ತಿಸುತ್ತಿರುವ ಎಲ್ಲಾ ರಾಷ್ಟ್ರವ್ಯಾಪಿ ಕಾರ್ಖಾನೆಗಳಿಗೂ ಮೂಗುದಾರ ತೊಡಿಸಿ ಸಮರ್ಪಕಗೊಳಿಸಲಿ. ದೇಶಧ ಅಭಿವೃದ್ಧಿಗೆ ಕಾಣಿಕೆ ನೀಡಲಿ.

ನಮ್ಮ ದೇಶದಲ್ಲಿ ಹಲವಾರು ಉತ್ತಮ ಕಾಯಿದೆಗಳಿವೆ ಆದರೆ ಅದನ್ನು ಅನುಷ್ಠಾನಗೊಳಿಸುವಲ್ಲಿ ಮಾತ್ರ ನಾವು ಎಡವುತ್ತಿದ್ದೇವೆ. ಅದಕ್ಕೆ ಹಲವಾರು ಕಾರಣಗಳಾದ ಲಂಚ, ರುಷುವತ್ತು, ನಗಣ್ಯತೆ, ಇತ್ಯಾದಿಗಳೆಲ್ಲವೂ ಕಾರಣವಾಗಿರಬಹುದು. ಅಧಿಕಾರಿಗಳ ಕೃಪೆಯಿಂದ 1. ಜಲ ಮೂಲಗಳ ಬಳಿಯೇ ಕಾರ್ಖಾನೆಗಳು ತೆರೆಯಲ್ಪಡುತ್ತವೆ. 2. ಹಳ್ಳಿ, ನಗರ ಪಟ್ಟಣಗಳ ಸರಹದ್ದಿನಿಂದ ಬಹಳ ದೂರದ ಬದಲು ಮಧ್ಯದಲ್ಲಿಯೇ ಕಾರ್ಖಾನೆಗಳು ಸ್ಥಾಪಿಸಲ್ಪಡುತ್ತಿವೆ. 3. ರಾಷ್ಟ್ರೀಯ, ಹಾಗೂ ರಾಜ್ಯ ಹೆದ್ದಾರಿಯಿಂದ ಬಹಳ ದೂರ ಇರಬೇಕೆಂದಿದೆ ಆದರೆ ಹೆಚ್ಚಿನವು ರಸ್ತೆ ಬದಿಯೇ ಇವೆ. 4. ಅತ್ಯಂತ ಹೆಚ್ಚು ದುರ್ವಾಸನೆ ಬೀರುವ ಕೋಳಿಫಾರ್ಮ, ಹಂದಿ ಫಾರ್ಮ ಇತ್ಯಾದಿಗಳಿಗೆ ಹಳ್ಳಿ, ಗ್ರಾಮ, ಪಟ್ಟಣ, ಮನೆ, ಸಮುದಾಯಗಳ ನಡುವೆಯೇ ಅವಕಾಶವನ್ನು ನೀಡಲಾಗುತ್ತಿದೆ. ಆದರೆ ತಲ-ತಲಾಂತರದಿಂದ ಬಹಳ ಉತ್ತಮ ರೀತಿಯಲ್ಲಿ ಗೋವುಗಳನ್ನು ಸಾಕಿ ಹಾಲಿನ ಮೂಲಕ ಜನರ ಆರೋಗ್ಯವನ್ನು ಕಾಪಾಡಿ ಜೀವ-ಜಲಕ್ಕೆ ಪ್ರೇರಕವಾದ ಗೋವುಗಳನ್ನು ಜನರಿಂದ ದೂರವಿಡಬೇಕೆನ್ನುವವರಿಗೆ ಏನೆನ್ನಬೇಕು?  ಶಾಸ್ತ್ರೋಕ್ತವಾಗಿ ಬಹಳ ಪ್ರಯೋಜನಕಾರಿಯಾಗಿ ಗೊಬ್ಬರವನ್ನು ನೀಡಿ ಬೆಳೆಯನ್ನು ಹೆಚ್ಚಿಸುತ್ತಿರುವ ಗೋವುಗಳು ಜನ-ಸಮುದಾಯದಿಂದ ದೂರವಿರಬೇಕೇ? ದೇವತಾ ಕಾರ್ಯಗಳಲ್ಲಿ ಸದಾ ಉಪಯೋಗಿಸುವ, ಕ್ರಿಮಿನಾಶಕ ಸಗಣಿ, ಗಂಜಲಗಳು ಇಲ್ಲದಿದ್ದರೆ, ಗೋವುಗಳು ಇಲ್ಲದಿದ್ದರೆ ಹಾಲು, ಬೆಣ್ಣೆ, ತುಪ್ಪ ಎಲ್ಲಿಂದ ಬರಬೇಕು?

ಮಾಲಿನ್ಯ ನಿಯಂತ್ರಣ ಮಂಡಳಿಯ ಮಂದಿಗೆ ಸೂಕ್ತ ತರಬೇತಿ, ಸಲಹೆ-ಸೂಚನೆಗಳನ್ನು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಅನಿಸುತ್ತೆ. ಇನ್ನಾದರೂ ಮಂಡಳಿಯ ಮಂದಿ ಭಾರತೀಯ ಪದ್ಧತಿ, ಬದುಕಿನ ರೀತಿ-ನೀತಿ-ಕ್ರಮಗಳನ್ನು ಅರ್ಥಮಾಡಿಕೊಂಡು ವ್ಯವಹರಿಸಲಿ. ವಿದೇಶೀಯರೇ ಭಾರತೀಯ ರೀತಿ, ನೀತಿ, ಕ್ರಮಗಳಿಗೆ ಮಾರು ಹೋಗಿ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುತ್ತಿರುವಾಗ, ಅನುಸರಿಸುತ್ತಿರುವಾಗ, ಅದರಲ್ಲಿರುವ ಪ್ರಯೋಜನಗಳನ್ನು ಸ್ವತಹ ಕಂಡುಕೊಂಡಿರುವಾಗ ಇವರಿಗೆ ಅದಿನ್ನೂ ಅರ್ಥವಾಗಿಲ್ಲವೇ? ಭಾರತೀಯತೆಯನ್ನು ಬೆಳಗಿಸಲಿ ಎಂದು ಹಾರೈಸೋಣ.


-By ರಾಯೀ ರಾಜ ಕುಮಾರ್, ಮೂಡುಬಿದಿರೆ