ಕರ್ನಾಟಕದಲ್ಲಿ ವಿದ್ಯುತ್ ಸರಬರಾಜು ಮಾಡುವ ಹೊಣೆಯನ್ನು ಪ್ರಾದೇಶಿಕವಾರು ಮೆಸ್ಕಾಂ, ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಇತ್ಯಾದಿಯಾಗಿ ವಿಭಾಗಿಸಿ ಕೆಲವೊಂದು ಜಿಲ್ಲೆಗಳನ್ನು ಸೇರಿಸಿ ಪ್ರಾದೇಶಿಕವಾರು ವಿಭಾಗಿಸಿದೆ.ಇದು ಬಹಳ ಉತ್ತಮ ಕ್ರಮವಾಗಿದೆ. ಇದರಿಂದಾಗಿ ಪ್ರಾದೇಶಿಕ ವಿಭಾಗಗಳೇ ಆಯಾ ಪ್ರದೇಶದ ವಿದ್ಯುತ್ ಸರಬರಾಜಿನ ಹೊಣೆಯನ್ನು ಹೊತ್ತಿವೆ ಮತ್ತುಗ್ರಾಹಕರ ದೂರುಗಳಿಗೆ ತಕ್ಷಣ ಸ್ಪಂದಿಸುತ್ತಿರುವುದು ಸಂತಸದ ಸಂಗತಿ. ಈ ರೀತಿ ಶಿವಮೊಗ್ಗ, ದಕ್ಷಿಣಕನ್ನಡ, ಉಡುಪಿ ಇತ್ಯಾದಿ ಜಿಲ್ಲೆಗಳು ಮೆಸ್ಕಾಂ ವ್ಯಾಪ್ತಿಗೆ ಬರುತ್ತದೆ. ಯಾವ ವಿಭಾಗದ ವ್ಯಾಪ್ತಿಗೆಯಾವುದೇ ಪ್ರದೇಶ ಒಳಗಾದರೂ ಕೂಡಾ ವಿದ್ಯುತ್ ಸರಬರಾಜಾಗುವುದು, ವಿದ್ಯುತ್  ಕಂಬಗಳಲ್ಲಿ ಹಾಕಲಾಗುವ ತಂತಿಗಳ ಮೂಲಕವೇ. ಇಂತಹ ತಂತಿಗಳು ಯಾವುದೇ ಹೊರ ಪದರ / ಕವರನ್ನು ಹೊಂದಿರುವುದಿಲ್ಲವಾದುದರಿಂದ ಜೀವಂತ ವಸ್ತುಗಳು, ಲೋಹಗಳು ಈ ತಂತಿಗೆ ತಾಗಿದಾಕ್ಷಣ ಅದರಲ್ಲೂ  ವಿದ್ಯುತ್ ಪ್ರವಹಿಸಿ ಜೀವಂತ ವ್ಯಕ್ತಿಗಳು ಮುಟ್ಟಿದಾಕ್ಷಣ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ.ಅಂತಹ ಸಾಕಷ್ಟು ಪ್ರಾಣಹಾನಿಗಳು ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ.

ಇಂತಹ ಪ್ರಾಣಹಾನಿಗಳು ಆಗಿ ಸಾಕಷ್ಟು ಬಾರಿ ವಿದ್ಯತ್ ಕಂಪೆನಿಗಳು ಸಾಕಷ್ಟು ದಂಡದ ಮೊತ್ತವನ್ನು ಪಾವತಿಸಿದ್ದರೂ ಕೂಡಾ ಅಂತಹ ಪ್ರಾಣಹಾನಿ ಆಗದಂತೆ ತಡೆಯುವಲ್ಲಿ ಮುಂದಾಗದಿರುವುದು ವಿಪರ್ಯಾಸವೇ ಸರಿ. ಇಷ್ಟು ಮಾತ್ರವಲ್ಲ ಪ್ರಾಣ ಹಾನಿ ಇನ್ನೂ ಕೆಲವಾರು ವಿಧದಲ್ಲಿ ನಡೆದುದು ಪತ್ರಿಕೆಗಳ ಮೂಲಕ ಹಲವಾರು ಬಾರಿ ವರದಿಯಾಗಿದೆ. ಅದುವೇ ವಿದ್ಯುತ್ ಕಂಬದ ಮೂಲಕ ಜೋಡಿಸಲ್ಪಟ್ಟ ಡಿಶ್ ಕೇಬಲ್ ವಯರ್ ಗಳು ತುಂಡಾದ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಬಂದು ಮನೆಯ ಟಿ.ವಿ., ಬೇರೆ ಸಂಪರ್ಕ ಇತ್ಯಾದಿಗಳು ಹಾಳುಗೊಂಡು ಪ್ರಾಣ ಹಾನಿಯೂ ಆಗಿರುವುದು. ಇಂತಹ ಸಾಧ್ಯತೆಗಳು ಇರುವದರಿಂದಲೇ ಯಾವುದೇ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ತಂತಿ ಹೊರತು ಪಡಿಸಿ ಬೇರಾವುದೇ ಇತರ ತಂತಿ, ಕೇಬಲ್, ವಯರ್ ಗಳನ್ನು ಹಾಕಬಾರದೆಂದು ವಿದ್ಯುತ್ ವಿತರಕ ಸಂಸ್ಥೆ ನಿಯಮ ಹೊಂದಿವೆ. ಇಂತಹ ನಿಯಮ ಇದ್ದೂ ಕೂಡಾ ಅನಧಿಕೃತವಾಗಿ ಹಲವಾರು ಖಾಸಗೀ ಸಂಸ್ಥೆಗಳು ವಿದ್ಯುತ್ ವಿತರಕ ಸಂಸ್ಥೆಗಳಿಂದ ಒಪ್ಪಿಗೆಯನ್ನೂ ಪಡೆಯದೇ, ಕೇಳುವವರಿಲ್ಲ ಎಂದು ಬೇಕಾ ಬಿಟ್ಟಿಯಾಗಿ ವಿದ್ಯುತ್ ಕಂಬವನ್ನು ಮಾಧ್ಯಮವಾಗಿ ಬಳಸಿಕೊಂಡಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.

ವಿದ್ಯುತ್ ವಿತರಕ ಕಂಪೆನಿಗಳಲ್ಲಿ ಕೆಲಸ ಮಾಡುವ ಹೆಸರಾಂತ ಅಧಿಕಾರಿಗಳು ಈ ಎಲ್ಲ ಅನಧಿಕೃತ ಜೋಡಣೆಗಳನ್ನು ಕಾಣುತ್ತಿದ್ದರೂ, ತಿಳಿದಿದ್ದರೂ,, ಬಿಲ್ಲು ಕಟ್ಟದಿದ್ದಲ್ಲಿ ತಕ್ಷಣ ಆಗಮಿಸಿ ವಿದ್ಯುತ್ ಸಂಪರ್ಕವನ್ನೇ ತೆಗೆದು ಬಡವರನ್ನು ಕತ್ತಲಲ್ಲಿ ಇರಿಸುವ ಕಾರ್ಯಕರ್ತರನ್ನು ಹೊಂದಿರುವ ವಿದ್ಯುತ್ ವಿತರಕ ಕಂಪೆನಿ ತಮ್ಮಕಣ್ಣೆದುರೇ ನಡೆಯುತ್ತಿರುವ ಇಂತಹ ಅನಧಿಕೃತ ಕಾರ್ಯಗಳಿಗೆ ಸುಮ್ಮನಿರುವುದೇಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ವಿದ್ಯುತ್ ಗ್ರಾಹಕರ ವಿಚಾರದಲ್ಲಿ ಬಹಳ ಶೀಘ್ರ ಸ್ಪಂದಿಸುವ ಈ ವಿತರಕ ಕಂಪೆನಿಗಳು ಈ ವಿಷಯದಲ್ಲೇಕೆ ಮೌನವಾಗಿವೆ? ಎಂದೂ ವಿಧವಿಧವಾಗಿ ಆಡಿಕೊಳ್ಳುತ್ತಿದ್ದಾರೆ.

ಒಂದು ವೇಳೆ ವಿದ್ಯುತ್ ವಿತರರಣಾ ಮಾರ್ಗದ ತೆರೆದ ತಂತಿ ತುಂಡಾಗಿ ಅಲ್ಲಲ್ಲಿ ಅದೇ ಕಂಬದ ಮಧ್ಯದಲ್ಲಿ ಹಾಕಿರುವ ಕೇಬಲ್, ಸಮೂಹ ಸಂಪರ್ಕದ ಕೇಬಲ್ ವಯರ್, ವೈಫೈ ವಯರ್ ಗಳ ಮೇಲೆ ಬಿದ್ದು ತನ್ಮೂಲಕ ಸಾರ್ವಜನಿಕ ಪ್ರದೇಶ ಹಾಗೂ ಮನೆಯ ಕೇಬಲ್, ವೈಫೈ ವಯರ್ ಮುಟ್ಟಿ ಸಾವು ಸಂಭವಿಸಿದರೆ ಯಾವ ವಿದ್ಯುತ್ ವಿತರಣಾ ಸಂಸ್ಥೆ ಹೊಣೆ ಹೊತ್ತುಕೊಳ್ಳುತ್ತದೆ? ಯಾವ ಖಾಸಗೀ ಕೇಬಲ್, ವೈಫೈ ಸಂಸ್ಥೆಗಳು ಹೊಣೆ ಹೊತ್ತುಕೊಳ್ಳುತ್ತವೆ? ಅಂತಹ ಸಂದರ್ಭದಲ್ಲಿ ತಮ್ಮ ನಿಯಮದ ಸಂಖ್ಯೆಯನ್ನು ಹೇಳುವ ವಿತರಕ ಸಂಸ್ಥೆ, ಅಂತಹ ಸಾಧ್ಯತೆಗೆ ಮೊದಲೇ ಅನಧಿಕೃತ ಎಲ್ಲಾ ಸಂಪರ್ಕಗಳನ್ನೂ ಕಂಬದಿಂದ ನಿವಾರಿಸುತ್ತಿಲ್ಲ ಏಕೆ?ತಮ್ಮ ನಿಯಮದ ಪ್ರತಿಯನ್ನು ಕಂಬದಲ್ಲಿ ಕೇಬಲ್ ಅಳವಡಿಸಿರುವ ಕೇಬಲ್, ವೈಫೈ ಸಂಸ್ಥೆಗಳಿಗೆ ಶೋಕಾಸ್ ನೋಟೀಸ್ ನೀಡುವ ಮೂಲಕ ಕಾನೂನಾತ್ಮಕವಾಗಿ ಜಾರಿಗೊಳಿಸುತ್ತಿಲ್ಲವೇಕೆ? ಸಾರ್ವಜನಿಕರು ಸಾಯಬೇಕೆಂದು ಕಾಯಲಾಗುತ್ತಿದೆಯೇ? ನೀವೇನಂತೀರಿ?.


- By ರಾಯೀರಾಜಕುಮಾರ್,ಮೂಡುಬಿದಿರೆ