ಸುರತ್ಕಲ್: ಮನಪಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಹಿಂದೆ ಸಿದ್ದರಾಮಯ್ಯ ಸರಕಾರ ಇದ್ದಾಗ ಕೂಡ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಂತೆ ಸರಕಾರ ನಡೆದಿದ್ದು ನಿಮಗೆಲ್ಲ ತಿಳಿದಿರಬಹುದು. ಆದ್ದರಿಂದ ಈ ಬಾರಿ ಮನಪಾ ಚುನಾವಣೆಯಲ್ಲಿ ಕಾಂಗ್ರೇಸ್ ಬಹುಮತ ಪಡೆದು ಅಧಿಕಾರಕ್ಕೇರಿದಲ್ಲಿ ನುಡಿದಂತೆ ನಡೆಯುತ್ತದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ಅವರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತಾಡಿದರು.
ಈಗಿನ ಸರಕಾರ ಮತ್ತು ಸ್ಥಳೀಯ ಜನಪ್ರತಿನಿಧಿಯ ಆಳ್ವಿಕೆಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಹಿಂದಿನ ಶಾಶಕ ಬಾವ ಮತ್ತು ಸರಕಾರದ ಆಡಳಿತ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನೇ ತಮ್ಮದೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರು ಮಾಡಿದ್ದ ಕಾಮಗಾರಿಗಳನ್ನು ಇವರು ಉದ್ಘಾಟನೆ ಮಾಡುತ್ತಿದ್ದಾರೆಯೇ ಹೊರತು ಹೊಸ ಯೋಜನೆಗಳು ಜಾರಿಗೆ ಬರುತ್ತಿಲ್ಲ. ಜಿಲ್ಲೆಯಲ್ಲಿ 7 ಮಂದಿ ಹಾಗೂ ಉಡುಪಿಯಲ್ಲಿ 5 ಮಂದಿ ಶಾಸಕರು ಇದ್ದರೂ ಓರ್ವರನ್ನು ಮಂತ್ರಿ ಮಾಡಲು ತಾಕತ್ತಿಲ್ಲದ ಇವರಿಂದ ಇನ್ನೇನು ತಾನೇ ಮಾಡಲು ಸಾಧ್ಯ ಎಂದು ರೈ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರಕಾರವಿದ್ದಾಗ ಓರ್ವರನ್ನು ನಗರಾಭಿವೃದ್ಧಿ ಸಚಿವರನ್ನಾಗಿ ಮಾಡಿದ್ದಲ್ಲದೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇವೆ ಎಂದು ರೈ ಹೇಳಿದ್ದಾರೆ.
ಜಿಲ್ಲೆಯಲ್ಲಿ ತೀರಾ ಹದಗೆಟ್ಟ ರಾ.ಹೆ. ಯನ್ನು ಸುಸ್ಥಿತಿಗೆ ತರಲು ಹೆದ್ದಾರಿ ಪ್ರಾಧಿಕಾರದಿಂದ ಸಾಧ್ಯವಾಗಿಲ್ಲ. ಮನಪಾ ಪ್ರತೀ ವಾರ್ಡಿನ ರಸ್ತೆ ಉತ್ತಮ ಗುಣಮಟ್ಟದಿಂದ ಕೂಡಿದ್ದು ಇದು ಕಾಂಗ್ರೆಸ್ ಆಡಳಿತದ ಕೊಡುಗೆ. ಆದ್ದರಿಂದ ಉತ್ತಮ, ಸುವ್ಯವಸ್ಥಿತ ಮಂಗಳೂರಿಗೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದು ಅಗತ್ಯವಾಗಿದೆ. 60 ವಾರ್ಡಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನಗರದ ಅಭಿವೃದ್ಧಿಗೆ ಮತದಾರರು ಕೊಡುಗೆ ನೀಡಬೇಕು ಎಂದರು.
ಮೀನುಗಾರರಿಗೆ ಸುಳ್ಳು ಹೇಳಿದ ಯಡಿಯೂರಪ್ಪ
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಮೀನುಗಾರರಿಗೆ ಘೋಷಣೆ ಮಾಡಿರುವ ಹಣ ಇನ್ನೂ ತಲುಪಿಲ್ಲ. ಸುಳ್ಳು ಹೇಳುತ್ತಾ ಬಂದಿರುವ ಯಡಿಯೂರಪ್ಪಗೆ ಮುಂದಿನ ದಿನಗಳಲ್ಲಿ ಮತದಾರರು ಬುದ್ಧಿ ಕಲಿಸಲಿದ್ದಾರೆ ಎಂದು ರಮಾನಾಥ ರೈ ಹೇಳಿದ್ದಾರೆ.
ಟೋಲ್ ಸಂಗ್ರಹ ಸಂಸದರು ಗಮನಿಸಬೇಕು
ಹೆದ್ದಾರಿ ಸರಿಯಿಲ್ಲದಿದ್ದರೂ ಎನ್ ಐ ಟಿಕೆಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೆದ್ದಾರಿ ಅವ್ಯವಸ್ಥೆಯಿಂದ ಕೂಡಿದ್ದು ಅದನ್ನು ಸರಿಪಡಿಸುವ ಬದಲು ಜನರಿಂದ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಸಂಸದರು ಗಮನಿಸಬೇಕು ಎಂದು ರೈ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.