ಸುರತ್ಕಲ್: ಮಹಾನಗರ ಪಾಲಿಕೆ ಚುನಾವಣೆ ಇನ್ನೇನು ನಡೆಯಲಿದ್ದು ಈ ಭಾಗದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಮಾಜಿ ಶಾಸಕ ಮೊಯಿದೀನ್ ಬಾವ ಹೇಳಿದ್ದಾರೆ. ಅವರು ಮಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತಾಡಿದರು.
ಸುರತ್ಕಲ್ ಭಾಗದಲ್ಲಿ ಉತ್ತಮ ಗುಣಮಟ್ಟದ ರಸ್ತೆ, ಬಸ್ ನಿಲ್ದಾಣ, ಸುಸಜ್ಜಿತ ಪಾರ್ಕ್ ಇತ್ಯಾದಿ ಸೌಲಭ್ಯಗಳು ನಿರ್ಮಾಣವಾಗಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿದ್ದಾಗ ಮಾತ್ರ. ನಾನು ಈ ಭಾಗದ ಶಾಸಕ ಆಗಿದ್ದಾಗ ಜನರ ಸಮಸ್ಯೆಗೆ ಶೀಘ್ರವೇ ಸ್ಪಂದಿಸಿ ಅವನ್ನು ಬಗೆಹರಿಸುತ್ತಿದ್ದೆ. ಆದರೆ ಈಗ ಅಭಿವೃದ್ಧಿ ಕಾರ್ಯಗಳು ನಿಂತಿದ್ದು ಜನರ ಬಳಿ ಹಿಂದಿನ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಯನ್ನೇ ತಮ್ಮದೆಂದು ಹೇಳಿಕೊಂಡು ಮೋಸ ಮಾಡಲಾಗುತ್ತಿದೆ. ನಾನು ಮನಪಾದ ಈ ವಾರ್ಡಿನ 23 ವಾರ್ಡ್ ಗಳಿಗೂ ವಿವಿಧ ಯೋಜನೆ, ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಹೀಗಾಗಿ ಜನರು ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ನಿಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಗಿನ ಶಾಸಕರು ಬರೀ ಉದ್ಘಾಟನೆಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಯಾರೋ ಮಾಡಿದ ಕೆಲಸವನ್ನು ತಾವು ತಮ್ಮದೆಂದು ಹೇಳಿಕೊಳ್ಳುತ್ತಿದ್ದಾರೆ. 100 ದಿನದ ಅವಧಿಯಲ್ಲಿ ಏನೂ ಕೆಲಸ ಮಾಡದ ಇವರು ನನ್ನನ್ನೇ ಸುಳ್ಳು ಹೇಳುತ್ತಿದ್ದೇನೆ ಎನ್ನುತ್ತಿದ್ದಾರೆ ಎಂದು ಮೊಯಿದೀನ್ ಬಾವ ಹೇಳಿದರು.
ನಾನು ದಿನದ 24 ಗಂಟೆಯೂ ಜನರ ಕೈಗೆ ಸಿಗುತ್ತಿದ್ದೆ. ನಾನು ಜನರ ಸೇವೆ ಮಾಡಿದ್ದು ಹೌದಾದರೆ ಜನರು ಈ ಬಾರಿಯ ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಬಾವ ಕರೆ ನೀಡಿದರು. ಮನಪಾ ಚುನಾವಣೆಯಲ್ಲಿ ಜನಪರ ಕಾಳಜಿಯನ್ನು ಮೆಚ್ಚಿ ಮತದಾರರು ಹರಸಿ ಆಶೀರ್ವದಿಸಬೇಕು ಎಂದು ಬಾವಾ ಹೇಳಿದರು.