ಸುಳ್ಯ :  ಧನಾತ್ಮಕ ದೃಷ್ಟಿಕೋನದ ಪತ್ರಿಕೋದ್ಯಮದಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ ಎಂದು ಹೊಸದಿಗಂತ ಪತ್ರಿಕೆಯ ಸ್ಥಾನೀಯ ಸಂಪಾದಕ ಪ್ರಕಾಶ್ ಇಳಂತಿಲ ಹೇಳಿದ್ದಾರೆ.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯದ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ 'ಮಾಧ್ಯಮ ಮತ್ತು ಪ್ರಚಲಿತ ವಿದ್ಯಮಾನ' ಎಂಬ ವಿಷಯದಲ್ಲಿ ಅವರು ಉಪನ್ಯಾಸ ನೀಡಿದರು. ನಮ್ಮ ಸಂಸ್ಕೃತಿ, ಪರಂಪರೆಯ ‌ನೆಲೆಗಟ್ಟನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಲು ಮಾಧ್ಯಮಗಳು ಸೇತುವೆಯಾಗಿ ಕಾರ್ಯ ನಿರ್ವಹಿಸುತಿವೆ. ಸ್ವಾತಂತ್ರ್ಯವನ್ನೂ ಪ್ರಜಾಪ್ರಭುತ್ವವನ್ನೂ ಜನರು ಸರಿಯಾಗಿ ಉಪಯೋಗಿಸದಿದ್ದರೆ ವ್ಯವಸ್ಥೆಗೆ ತುಕ್ಕು ಹಿಡಿಯಬಹುದು ಎಂದ ಅವರು ನಮ್ಮ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸಗಳನ್ನು ಮಾಧ್ಯಮಗಳು ಮಾಡುತ್ತಿವೆ. ಆದರೆ ಇಂದು ಮಾಧ್ಯಮಗಳು ಸ್ವಯಂ ಅವಲೋಕನ ಮಾಡುವುದರ ಜೊತೆಗೆ ಧನಾತ್ಮಕ ಸುದ್ದಿಗಳನ್ನು ಹುಡುಕಬೇಕಾದ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

'ಮಾದಕ ವಸ್ತು ತಡೆ ಜಾಗೃತಿಯಲ್ಲಿ ಸಮಾಜದ ಪಾತ್ರ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ನಮ್ಮ ಹಿರಿಯರು ಬದುಕಿದಂತೆ ಇಂದಿನ ಯುವಜನತೆಗೆ ಯಾಕೆ ಬದುಕಲು ಸಾಧ್ಯವಾಗುತ್ತಿಲ್ಲ ಎಂಬ ದೊಡ್ಡ ಪ್ರಶ್ನೆ ನಮ್ಮ ಮುಂದಿದೆ. ಶೆ.56 ರಷ್ಟು ಯುವ ಜನತೆಯನ್ನು ಹೊಂದಿದ ನಮ್ಮ  ದೇಶಕ್ಕೆ ಯುವಜನರ ಮೇಲೆ ದೊಡ್ಡ ನಿರೀಕ್ಷೆ ಇದೆ‌. ಮಾದಕ ವಸ್ತುಗಳ ಜಾಲಕ್ಕೆ ಯುವ ಜನತೆ ಬಲಿಯಾಗುತ್ತಿರುವ ದುರಂತ ಇಂದು ವ್ಯಾಪಕವಾಗುತಿದೆ. ಯುವ ಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಬಲಿಯಾಗದಂತೆ ತಡೆಯಲು ಸಮಾಜದ ಜೊತೆಗೆ ಪೋಷಕರ ಪಾತ್ರ ಬಲು ಮುಖ್ಯ. ಮಕ್ಕಳನ್ನು ಸಾಂಪ್ರದಾಯಿಕವಾಗಿ ಬೆಳೆಸಲು ಪೋಷಕರು ಪ್ರಯತ್ನ ನಡೆಸಬೇಕು ಎಂದರು.

ಸಮಾಭವನ್ನು ಉದ್ಘಾಟಿಸಿ, ಸನ್ಮಾನ ನೆರವೇರಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ  ಪಿ.ಸಿ.ಜಯರಾಮ  ಪತ್ರಿಕೋದ್ಯಮ ಇಂದು ಅಗಾಧವಾಗಿ ಬೆಳೆದಿದೆ ಜೊತೆಗೆ ಸವಾಲುಗಳು ಹೆಚ್ಚಿದೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಪತ್ರಿಕಾರಂಗ ಇನ್ನಷ್ಟು ಕ್ರಿಯಾಶೀಲರಾಗಬೇಕು ಎಂದರು.