ಬಂಟ್ವಾಳ: ಶುಕ್ರವಾರ ಕಾವಳ ಮೂಡೂರು ಗ್ರಾ.ಪಂ.ಸಭಾಂಗಣದಲ್ಲಿ ದ.ಕ.ಜಿ.ಪಂ. ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ), ಕಾವಳ ಮೂಡೂರು ಗ್ರಾ.ಪಂ., ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಸ್ವಚ್ಛತಾ ಸೇವಾ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸಿದವರಿಗೆ ಅಕ್ಕಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಅದರಂತೆ ಒಟ್ಟು 43 ಗ್ರಾಮಸ್ಥರು 26 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹಿಸಿ ಕಾರ್ಯಕ್ರಮದ ಸಂದರ್ಭ ನೀಡಿದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಿತ ಪಂಚಾಯಿತಿ ಸದಸ್ಯರೂ ಈ ಅಭಿಯಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅವರಿಗೆ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ನೇತೃತ್ವದಲ್ಲಿ 260 ಕೆಜಿ ಅಕ್ಕಿ ವಿತರಿಸಲಾಯಿತು. ಇದೊಂದು ಉತ್ತಮ ಕಾರ್ಯ ಎಂದು ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸಿಇಒ ಕುಮಾರ್ ಶ್ಲಾಘಿಸಿ, ಪ್ಲಾಸ್ಟಿಕ್ ಸಂಗ್ರಹಿಸುವ ಕುರಿತು ಯೋಚನೆಯನ್ನು ಮಾಡುವಂತೆ ಈ ಕಾರ್ಯಕ್ರಮ ಪ್ರೇರೇಪಿಸುತ್ತಿದ್ದು, ಕೇವಲ ಘೋಷಣೆ, ಬರವಣಿಗೆ, ಭಾಷಣವಷ್ಟೇ ಅಲ್ಲ, ಅನುಷ್ಠಾನವನ್ನೂ ಮಾಡಲು ಸಾಧ್ಯ ಎಂಬುದನ್ನು ಇದು ನಿರೂಪಿಸುತ್ತದೆ, ಇದು ಎಲ್ಲರಿಗೂ ಮಾದರಿಯಾಗಲಿ ಎಂದು ಕುಮಾರ್ ಹೇಳಿದರು.
