ನವೆಂಬರ್ 1 ಮಾತ್ರ ನಮ್ಮ ನಾಡನ್ನು, ನುಡಿಯನ್ನು ಸಂಭ್ರಮಿಸುವ ದಿನವ.? ಭಾರತದ ಗಣರಾಜ್ಯದ ನಂತರ ಭಾಷಾವಾರು ಪ್ರಾಂತ್ಯಗಳನ್ನು ರಾಜ್ಯಗಳಾಗಿ ವಿಂಗಡಿಸಲಾಯಿತು. ಕನ್ನಡ ಮಾತನಾಡುವ ಪ್ರಾಂತ್ಯಗಳೆಲ್ಲವನ್ನು ಸೇರಿಸಿ, ೧೯೫೬ ರ ನವೆಂಬರ್ ೧ ರಂದು 'ಮೈಸೂರು ರಾಜ್ಯ'ವೆಂದು ಘೋಷಿಸಲಾಯಿತು. ಕಾಲಾನಂತರ ರಾಜ್ಯದ ಹೆಸರು ನವೆಂಬರ್ 1, 1973 ರಂದು "ಕರ್ನಾಟಕ" ಎಂದು ಬದಲಾಯಿಸಲಾಯಿತು. ಇದರ ಸವಿ ನೆನಪಿಗಾಗಿ ನವೆಂಬರ್ ಒಂದನೇ ತಾರೀಕು ನಾಡ ಹಬ್ಬವಾಗಿ ಆಚರಣೆಗೆ ಬಂತು. ಈ ನಾಡು ರೂಪುಗೊಳ್ಳುವುದರ ಹಿಂದೆ ಸಾಕಷ್ಟು ಮಹನೀಯರ ಕೊಡುಗೆ, ಮತ್ತು ಚಳುವಳಿಗಳ ಬಿಸಿಯಿದೆ. ಭಾಷೆ ಬಳಸಿ, ಉಳಿಸಿ, ಬೆಳೆಸಿದವರ ತಂಪೂ ಇದೆ. ವಿಶ್ವ ಲಿಪಿಗಳ ರಾಣಿ ಎಂಬ ಹೆಗ್ಗಳಿಕೆಯಿದೆ. ಕನ್ನಡವು ಯಾವುದೇ ಭಾರತೀಯ ಭಾಷೆಗಳಿಗಿಂತ ಹೆಚ್ಚು ಜ್ಞಾನಪೀಠ ಸಾಹಿತ್ಯ ಪ್ರಶಸ್ತಿಗಳನ್ನು ಪಡೆದಿದೆ. ಶಾಸ್ತ್ರೀಯ ಸ್ಥಾನಮಾನ ಪಡೆದ ಭಾರತೀಯ 8 ಭಾಷೆಗಳಲ್ಲಿ ಕನ್ನಡವೂ ಒಂದು. ಭಾರತದ ಪುರಾತನ ಭಾಷೆಗಳಲ್ಲಿ ಒಂದಾದ ಇದಕ್ಕೆ ಎರಡು ಸಹಸ್ರನಾಮಕ್ಕೂ ಅಧಿಕ ಹಿಂದಿನ ಇತಿಹಾಸವಿದೆ.
ನಾವೆಷ್ಟೇ ಭಾಷೆಗಳ ಕಲಿತರು, ಹೃದಯದಲ್ಲಿ ಹುಟ್ಟುವ ಭಾವನೆಗಳು ನಮ್ಮ ಮಾತೃ ಭಾಷೆಯೇ ಅಲ್ಲವೇ. ಆದರೆ ನಾವು ಇತ್ತೀಚಿಗೆ ನಮ್ಮ ಹೃದಯದ ಮಾತುಗಳನ್ನು ಕೇಳುವುದ ಮರೆತುಬಿಟ್ಟಿದ್ದೇವೆ..! ಹೊರಗೆ ವ್ಯವಹಾರಕ್ಕಾಗಿ ಬಳಸುವ ಬೇರೆ ಬೇರೆ ಭಾಷೆಗಳು ಮನೆಯೊಳಗೂ ಲಗ್ಗೆಯಿಟ್ಟು ಮೂಲ ಭಾಷೆಯನ್ನೇ ತೆರೆಮರೆಗೆ ಸರಿಸುತ್ತಿರುವುದು ಅಪಾಯಕಾರಿ ಸಂಗತಿ. ಪರ ಭಾಷೆಗಳ ಹೇರಿಕೆ ಮತ್ತು ಬಳಕೆ ಸದ್ದೇ ಇಲ್ಲದಂತೆ ಅತಿಕ್ರಮಿಸಿ ಕುಳಿತು, ಮಾತೃ ಭಾಷೆಯ ಉಸಿರು ಕಟ್ಟಿಸುತ್ತಿವೆ. ಇದು ಹೀಗೆ ಮುಂದುವರೆದರೆ ಕನ್ನಡ ಇಂಚಿಂಚು ತನ್ನ ಅಸ್ತಿತ್ವ ಕಳೆದುಕೊಳ್ಳುವುದು ಖಚಿತ.
ಸಾಮಾಜಿಕ ಜಾಲತಾಣಗಳಲ್ಲಿ ತಾನು ಕನ್ನಡಿಗ ಎಂದು ಬಾವುಟ ಹಿಡಿದು ನವೆಂಬರ್ ನಲ್ಲಿ ಒಂದಿನ ಹಾರಾಡುವುದರಿಂದ ಭಾಷೆ ಬೆಳೆಯುವುದಿಲ್ಲ. ಉಳಿಯುವುದಿಲ್ಲ. ಅಥವಾ ಬರೀ ಇಲ್ಲಿ ಹುಟ್ಟಿ ಬೆಳೆದರಷ್ಟೇ ಕನ್ನಡಿಗರಾಗಲು ಸಾಧ್ಯವಿಲ್ಲ. ವಿದೇಶ ಅಥವಾ ಬೇರೆ ಬೇರೆ ನೆಲಗಳಿಂದ ಬಂದು ಕರುನಾಡಲ್ಲಿ ಬದುಕು ರೂಪಿಸಿಕೊಂಡು, ಉದಾರವಾಗಿ ಕನ್ನಡ ಭಾಷೆಯನ್ನ ಕಲಿತು, ಆರಾಧಿಸುತ್ತ ಇಲ್ಲಿಯವರೇ ಆಗಿ ಹೋಗಿರುವ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ನಮ್ಮ ಮಾತೃ ಭಾಷೆಯನ್ನ ಬರೀ ಯಾವುದೊ ಒಂದು ದಿನ ಅಥವಾ ತಿಂಗಳಿಗೆ ಸೀಮಿತಗೊಳಿಸದೇ ಪ್ರತೀ ದಿನ, ಕ್ಷಣವೂ ಆಡಿ, ಆಸ್ವಾದಿಸಿ, ಆರಾಧಿಸುತ್ತ ಬಳಸಬೇಕಿರುವುದು ಸದ್ಯದ ಜರೂರತ್ತು. ಆಗ ಅದು ತಾನಾಗಿಯೇ ಬೆಳೆಯುತ್ತದೆ. ಉಳಿಯುತ್ತದೆ.
" ಎಲ್ಲಾದರು ಇರು, ಎಂತಾದರು ಇರು... ಎಂದೆಂದಿಗೂ ನೀ ಕನ್ನಡವಾಗಿರು " ಎಂಬ ರಾಷ್ಟ್ರ ಕವಿ ಕುವೆಂಪು ಅವರ ಮಾತಿನಂತೆ ಬಾಳಿ ಬದುಕೋಣ.
ರಾಜ್ಯೋತ್ಸವದ ಶುಭಾಶಯಗಳು..
_ಪಲ್ಲವಿ ಚೆನ್ನಬಸಪ್ಪ ✍️