ಮೂಡುಬಿದಿರೆ:  ಮೈಸೂರಿನ ಜೆಎಸ್‍ಎಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ವಿವಿಯಲ್ಲಿ ನಡೆದ 37ನೇ  ಅಂತರ್ ವಿವಿ  ಆಗ್ನೇಯ ವಲಯದ ಯುವ ಉತ್ಸವ- ‘ಯುವ ಬಿಂಬದಲ್ಲಿ’ ಮಂಗಳೂರು ವಿವಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಏಕಾಂಕ ನಾಟಕ- ಏಕದಶಾನನದಲ್ಲಿ ಪ್ರಥಮ, ಪ್ರಹಸನದಲ್ಲಿ  ಪ್ರಥಮ, ಜನಪದ ವಾದ್ಯ ಮೇಳ ಪ್ರಥಮ, ಸ್ವರ ವಾದ್ಯದಲ್ಲಿ ದ್ವಿತೀಯ, ಶಾಸ್ತ್ರೀಯ ಪಕ್ಕವಾದ್ಯ ಐದನೇ ಸ್ಥಾನ,  ಜನಪದ ನೃತ್ಯದಲ್ಲಿ  ಐದನೇ  ಸ್ಥಾನ,  ಸಮೂಹ ಹಾಡಿನಲ್ಲಿ ಐದನೇ ಸ್ಥಾನ ಪಡೆದು ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು. ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಏಕಾಂಕ ನಾಟಕ,  ಕಿರು ಪ್ರಹಸನ ಹಾಗೂ ಜನಪದ ವಾದ್ಯ ಮೇಳ, ಸ್ವರ ವಾದ್ಯದ ವಿದ್ಯಾರ್ಥಿಗಳು ಪಂಜಾಬ್‍ನಲ್ಲಿ ಜರುಗುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ. 

ಆಳ್ವಾಸ್ ವಿದ್ಯಾರ್ಥಿಗಳ ಸಾಧನೆ

ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಶಶಿರಾಜ್ ಕಾವೂರು ರಚಿಸಿ, ಡಾ ಜೀವನ ರಾಮ್ ಸುಳ್ಯ ನಿರ್ದೇಶನದ ‘ಏಕದಶಾನನ’ ಏಕಾಂಕ ನಾಟಕ, ಜನಪದ ವಾದ್ಯ ಮೇಳ,  ದ್ವಿತೀಯ ಸ್ಥಾನ ಪಡೆದ ಸ್ವರ ವಾದ್ಯ ಹಾಗೂ  ಐದನೇ  ಸ್ಥಾನ ಪಡೆದ ಶಾಸ್ತ್ರೀಯ ಪಕ್ಕವಾದ್ಯಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಬಹುಮಾನ ಪಡೆದ ಸ್ಪರ್ಧೆಗಳು. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಅಭಿನಂದಿಸಿದ್ದಾರೆ.