ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಅಕಾಡೆಮಿ ಸಭಾಂಗಣದಲ್ಲಿ ಮಾರ್ಚ್ 07, 2025ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ 'ಆಬೊಲಿಂ' ಶೀರ್ಷಿಕೆಯಡಿ ಮಹಿಳಾ ಕವಿಗೋಷ್ಟಿಯನ್ನು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಜೋಕಿಂ ಜ್ಞಾನಿ ಆಲ್ವಾರಿಸ್ ರವರು ವಹಿಸಿ, ನೆರೆದಿರುವ ಎಲ್ಲಾ ಅತಿಥಿ ಗಣ್ಯರನ್ನು ಸ್ವಾಗತಿಸಿದರು. 

ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅವಿರತ ಸಾಧನೆಗಾಗಿ ಡೊ. ಗ್ರೇಸ್ ನೊರೊನ್ಹಾರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ. ಡೊ. ಗ್ರೇಸ್ ನೊರೊನ್ಹಾರವರು, 'ಗೌರವ ಸ್ವೀಕರಿಸಿ, ಈ ಗೌರವವು ನನಗೆ ಖುಶಿ ಕೊಟ್ಟಿದೆ. ಶಿಕ್ಷಣ ಕ್ಷೇತ್ರದಲ್ಲಿ ನನ್ನ ಜವಾಬ್ದಾರಿಯು ಹೆಚ್ಚಾಗಿದೆ. ನನ್ನ ಸಾಧನೆಯನ್ನು ಪರಿಗಣಿಸಿ, ನನ್ನನ್ನು ಸನ್ಮಾನಿಸಿದ್ದಕ್ಕಾಗಿ ಕೊಂಕಣಿ ಅಕಾಡೆಮಿಗೆ ನಾನು ಚಿರಋಣಿ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ನಟಿ ಮತ್ತು ಮಂಗಳೂರಿನ 'ರತ್ನಾಸ್ ವೈನ್ ಗೇಟ್' ಮಾಲಕಿ ಹಾಗೂ ಸಮಾಜ ಸೇವಕಿಯಾದ ಶ್ರೀಮತಿ ಸುಚಿತ್ರಾ ನಾಯಕ್‌ರವರು, 'ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಎಲ್ಲಾ ದಿನವೂ ಸಂತೋಷದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಬೇಕು. ಮಹಿಳೆಯರಿಗೆ ಸಮಾನತೆ, ನ್ಯಾಯವನ್ನು ಒದಗಿಸಿ ನಾರಿಶಕ್ತಿ, ಮಹಿಳೆಯರ ಅಸ್ಮಿತೆಯನ್ನು ಸಮಾಜಕ್ಕೆ ಪರಿಚಯಿಸಬೇಕು' ಎಂದರು. ಕಾರ್ಯಕ್ರಮದ ಪ್ರಮುಖ ಉಪನ್ಯಾಸಕಿಯಾದ, ಸಂತ ಅಲೋಶಿಯಸ್ ಕಾಲೇಜಿನ ಮಾಜಿ ಉಪಪ್ರಾಂಶುಪಾಲರು ಹಾಗೂ ಆಪ್ತ ಸಮಾಲೋಚಕಿಯಾದ ಡೊ. ಜೂಡಿ ಪಿಂಟೊರವರು ಮಹಿಳಾ ದಿನಾಚರಣೆ ಇತಿಹಾಸ, ಹಿಂದಿನ ಮತ್ತು ಪ್ರಸ್ತುತ ಮಹಿಳೆಯರ ಸ್ಥಿತಿಗತಿ ಬಗ್ಗೆ ವಿಷಯ ಮಂಡಿಸಿದರು.

ಕಾರ್ಯಕ್ರಮದಲ್ಲಿ ಡಾ. ಅನ್ನಿ ಡಿಂಪಲ್ ಕ್ಯಾಸ್ತೆಲಿನೊ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ವಿತಾಶಾ ರಿಯಾ ರೊಡ್ರಿಗಸ್, ಸಿ। ಸಿಲ್ವಿಯಾ ಸುವಾರಿಸ್ ಎ.ಸಿ,  ಚಂದ್ರಿಕಾ ಮಲ್ಯ, ಫೆಲ್ಸಿ ಲೋಬೊ, ಪ್ರತಿಮಾ ಕ್ಲಾರಾ ಪ್ರಭು, ಪ್ಲಾವಿಯಾ ಅಲ್ಬುಕರ್ಕ್, ಎಸ್ ಜಯಶ್ರೀ ಶೆಣೈ, ಅಸುಂತಾ ಡಿಸೋಜ, ಡಾ| ಫ್ಲಾವಿಯಾ ಕ್ಯಾಸ್ತೆಲಿನೊ, ಲಿಡಿಯಾ ಡಿಕೋಸ್ತ, ಜ್ಯೂಲಿಯೆಟ್ ಫೆರ್ನಾಂಡಿಸ್, ಲವಿ ಗಂಜಿಮಠ ಮುಂತಾದವರು ತಮ್ಮ ಕವಿತೆಗಳನ್ನು ವಾಚಿಸಿದರು.

ಅಕಾಡೆಮಿ ಸದಸ್ಯೆ ಹಾಗೂ ಈ ಕಾರ್ಯಕ್ರಮದ ಸದಸ್ಯ ಸಂಚಾಲಕಿಯಾದ ಸಪ್ನಾ ಮೇ ಕ್ರಾಸ್ತಾರವರು ವಂದಿಸಿದರು. ಮೆಲ್ವಿರಾ ರೊಡ್ರಿಗಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಅಕಾಡೆಮಿ ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ, ಸಮರ್ಥ್ ಭಟ್,  ದಯಾನಂದ ಮಡೇಕರ್, ಅಕಾಡೆಮಿಯ ರಿಜಿಸ್ಟ್ರಾರ್ ಆದ ರಾಜೇಶ್ ಜಿ.ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂಧರ್ಭದಲ್ಲಿ ಕವಿಗಳಿಗೆ ಹೂವು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.