ಮುಂಬಯಿ, ಡಿ. 11:  ಐಲೇಸಾ -ದಿ ವಾಯ್ಸ್ ಆಫ್ ಓಷನ್ (ರಿ) ಪ್ರತೀ ವರ್ಷ ಕಲೆ ಸಂಸ್ಕೃತಿ ಸಾಹಿತ್ಯ ವಿಭಾಗದಲ್ಲಿ ಎಲೆ ಮರೆಯ ಹಿರಿಯ ಸಾಧಕರನ್ನು ಗುರುತಿಸಿ ಪುರಸ್ಕರಿಸುವ ವಯೋಸಮ್ಮಾನ ಗೌರವಕ್ಕೆ ತುಳು ಚಿತ್ರರಂಗದ ಮೊದಲ ಚಿತ್ರ ಎನ್ನತಂಗಡಿ ಸಿನಿಮಾದ ಗೀತೆ ರಚನೆಕಾರ ಬೊಕ್ಕಪಟ್ಣ ಭೋಜ ಸುವರ್ಣ ಇವರನ್ನು ಆಯ್ಕೆ ಮಾಡಿದೆ . 

85 ವರ್ಷ ವಯಸ್ಸಿನ ಭೋಜ ಸುವರ್ಣ  4  ತುಳು ಸಿನಿಮಾಗಳಿಗೆ ಹತ್ತು ಹಾಡುಗಳನ್ನು ರಚನೆ ಮಾಡಿದ್ದು ಅವುಗಳಲ್ಲಿ  ಯಾನ್ಸನ್ಯಾಸಿಆಪೆ  ಚಿತ್ರದ  ಇಂಪು ತಂಪು ಜಾಗೆ ಉಂದು ಸ್ವರ್ಗಯಾ , ಓಡಾರಿಡೀರಿ ಡೆನ್ನಾ, ರಾಧಾರಾಧಾ ಒಡೆಪೋಪ ಎನನ್ಬುಡ್ದು ಸೀದಾ, ಸಾವಿರೊಡೊರ್ತಿ ಸಾವಿತ್ರಿ  ಚಿತ್ರದ ಇರೆ ಪ್ರೀತಿದಾದಿನ ಕಾತೆ, ರಾಜರಾಜಮಹಾರಾಜಾ, ಕಣ್ಣಿತ್ತ್ದ್ಕೈಯಿತ್ತ್ದ್ಕಲ್ಲಾಯನ  ಹಾಗೂ ಕಾಸದಾಯೆ ಕಂಡನೆ ಚಿತ್ರದ ಈ ಜಗತೇ ಜಗದೀಶನ, ಕಣ್ಣ್ಕಟ್ಟುದ ಕತೆನೀಬುಡ್ಲಾ ಚಿತ್ರಗೀತೆಗಳು ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿವೆ.   

19 ಫೆಬ್ರವರಿ  1971ರಲ್ಲಿ ಮಂಗಳೂರು ಸೆಂಟ್ರಲ್ ಚಿತ್ರಮಂದಿರದಲ್ಲಿ ಬಿಡುಗಡೆಯಾದ ತುಳುವಿನ ಮೊದಲ ಚಿತ್ರ ಹೆಗ್ಗಳಿಕೆಯ ಎನ್ನತಂಗಡಿಯ ಎರಡು ಹಾಡುಗಳಲ್ಲಿ ಇವರು ಬರೆದ  ಮನಸ್ಸಿನ ನಿರ್ಮಲದಿಂದ  ಬಂದು ಕುಂಡ ಅವ್ವೆ ಒಂಜಿ ಮಂದಿರಾ  ತಾಂತ್ರಿಕ ಕಾರಣಗಳಿಂದ ಇಂದು ಲಭ್ಯವಿಲ್ಲ. ಚಿತ್ರದ ಎರಡು ಹಾಡುಗಳಲ್ಲಿ ಮತ್ತೊಂದನ್ನು ಬನ್ನಂಜೆ ಗೋವಿಂದ ಆಚಾರ್ಯರು ಬರೆದಿದ್ದರು.  ಬಡತನದ ನಡುವೆಯೂ , ಗ್ಯಾರೇಜಿನಲ್ಲಿ ದುಡಿಯುತ್ತಾ ತನ್ನ ಹದಿನೆಂಟನೆ ವರ್ಷದಿಂದ ಆರಂಭಿಸಿ ನಾಟಕ ಮತ್ತು ಚಲನಚಿತ್ರಗಳಿಗೆ ಸುಮಾರು ಮೂರು ಸಾವಿರ ಹಾಡುಗಳನ್ನು ಬರೆದಿರುವ ಭೋಜ ಸುವರ್ಣ ಅವರು  24 ನಾಟಕಗಳನ್ನು ಬರೆದು, ನಿರ್ದೇಶಿಸಿ, ಅಭಿನಯಿಸಿ ಕಲಾ ಸೇವೆ ಮಾಡಿದವರು. ಎಂಬತ್ತೈದು ವರ್ಷದ ಇಳಿ ವಯಸ್ಸಿನಲ್ಲಿ ಇಂದಿಗೂ ಬೊಕ್ಕಪಟ್ಣದ ವಿಠೋಭ ಭಜನಾ ಮಂದಿರದಲ್ಲಿ ಮಕ್ಕಳಿಗೆ ಭಜನೆ ಕಲಿಸುವ ಮೂಲಕ ತಾನು ಅತ್ಯಂತ ಪ್ರೀತಿಸುವ ಕಲಾದೇವಿಯ ಆರಾಧನೆಯನ್ನು ಮಾಡುತ್ತಾ ಅಮಿತ ಜೀವನೋತ್ಸಾಹವನ್ನು ತೋರಿ ಆದರ್ಶರಾದವರು. 

ಐಲೇಸಾ ತನ್ನ ಜನ್ಮ ಸಂಭ್ರಮದ ನಾಲ್ಕನೇ ವರ್ಷದ ಪ್ರಯುಕ್ತ ನೀಡಲಾಗುವ ವಯೋಸಮ್ಮಾನ ಪುರಸ್ಕಾರ ಪ್ರದಾನವು ಸಾಧಕರ ವಯಸ್ಸಿನಷ್ಟೇ ಅಂದರೆ ಎಂಬತ್ತೈದು ಸಾವಿರ ನಗದು ಮತ್ತು ಸಾಧಕರು ಅತ್ಯಂತ ಇಷ್ಟ ಪಡುವ ಗಾಯನ, ಭಜನೆ, ಅಭಿನಯ ತುಣುಕುಗಳ ಜೊತೆಗೆ ಅವರು ಪ್ರೀತಿಸು ಉಡುಗೊರೆಗಳೊಂದಿಗೆ ನಡೆಯಲಿದೆ.     

ಈ ಸರಳ ಸಮಾರಂಭದಲ್ಲಿ ಅಬುದಾಬಿಯ ಸರ್ವೋತ್ತಮಶೆಟ್ಟಿ, ಕತಾರಿನ ಮೂಡಂಬೈಲು ರವಿ ಶೆಟ್ಟಿ,  ಸೌದಿ ಅರೇಬಿಯಾದ ನರೇಂದ್ರ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭೋಜ ಸುವರ್ಣರ ಜೊತೆಯಲ್ಲಿ ದುಡಿದ ಸಂಗೀತ ನಿರ್ದೇಶಕ ಅಶೋಕ ಚರಣ್, ನಟಿ ಸರೋಜಿನಿ ಶೆಟ್ಟಿ, ಸಂಗೀತ ನಿರ್ದೇಶ ಕವಿ ಮನೋಹರ್, ಗಾಯಕ ರಮೇಶ್ಚಂದ್ರ ವಿಶೇಷ ಅತಿಥಿಗಳಾಗಿ ಬಿ ಭೋಜ ಸುವರ್ಣ ಅವರಿಗೆ ಶುಭ ಕೋರಲಿದ್ದಾರೆ. 

ಕಾರ್ಯಕ್ರಮ ಇದೇ ಬರುವ ಡಿ. 21ರ ಶನಿವಾರ ಸಂಜೆ ಮೂರು ಗಂಟೆಯಿಂದ ಏಳು ಗಂಟೆಯವರೆಗೆ ಮಂಗಳೂರು ಪಾಂಡೇಶ್ವರದ ನಾಸಿಕ್ಬಿ ಹೆಚ್ಬಂಗೇರ ಸಭಾಭವನದ ನಾರ್ಣಪ್ಪ ಕಲಾಮಂಟಪ ಇಲ್ಲಿ ನಡೆಯಲಿದ್ದು ಐಲೇಸಾದ ಖ್ಯಾತಗಾಯಕರು ಬಿ ಭೋಜ ಸುವರ್ಣ ಅವರ ಮತ್ತು ಐಲೇಸಾದ ತುಳುಹಾಡುಗಳನ್ನು ಹಾಡಿ ರಂಜಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭೋಜ ಸುವರ್ಣ ಅಭಿಮಾನಿಗಳೆಲ್ಲರೂ ಭಾಗವಹಿಸಬೇಕೆಂದು ಐಲೇಸಾ ಸಂಸ್ಥೆಯ ಮುಂಬಯಿ ಮಾಧ್ಯಮ ಸಂಚಾಲಕ ಸೂರಿ ಮಾರ್ನಾಡು ತಿಳಿಸಿದ್ದಾರೆ.