ಮಂಗಳೂರು: ಭಾರತೀಯ ಜನತಾ ಪಕ್ಷದ ಪ್ರಣಾಳಿಕೆಯನ್ನು ಪ್ರಜಾ ಪ್ರಣಾಳಿಕೆಯಾಗಿ ಸಿದ್ಧಪಡಿಸಲಾಗಿದೆ. ಬೂತ್ ಮಟ್ಟದಿಂದ ತಳಸ್ಪರ್ಶಿಯಾಗಿ ಕಾರ್ಯಕರ್ತರು ಮತ್ತು ಸಾಮಾನ್ಯ ಜನರಿಂದ 6 ಲಕ್ಷಕ್ಕೂ ಹೆಚ್ಚಿನ ಸಲಹೆ ಸೂಚನೆಗಳನ್ನು ಪಡೆದು ಅವುಗಳನ್ನು ತಜ್ಞರ ಜತೆ ಚರ್ಚಿಸಿ ಬಳಿಕ ಪಕ್ಷದ ಪ್ರಣಾಳಿಕೆ ಸಮಿತಿಯಲ್ಲಿ ಚರ್ಚಿಸಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಪಕ್ಷದ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.
ನಗರದ ವಿಭಾಗ ಮಾಧ್ಯಮ ಕೇಂದ್ರದಲ್ಲಿ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಣಾಳಿಕೆ ಕುರಿತು ವಿವರವಾದ ಮಾಹಿತಿ ನೀಡಿದರು.
ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಕಳೆದ ಮೂರೂವರೆ ವರ್ಷದಲ್ಲಿ ರಾಜ್ಯದ ಬಿಜೆಪಿ ಸರಕಾರ ಮಾಡಿದ ಸಾಧನೆಗಳ ಪಟ್ಟಿ ಹಾಗೂ ಮುಂದಿನ ಅವಧಿಯಲ್ಲಿ ಮಾಡಲಿರುವ ಕಾರ್ಯಗಳ ಭರವಸೆಗಳ ಪಟ್ಟಿಯನ್ನು ನೀಡಲಾಗಿದೆ. ಅನ್ನ, ಅಭಯ, ಅಕ್ಷರ,. ಆರೋಗ್ಯ, ಅಭಿವೃದ್ಧಿ ಮತ್ತು ಆದಾಯ- ಇವು ಪಕ್ಷದ ಮೂಲ ಚಿಂತನೆಗಳಾಗಿದ್ದು, ಇವುಗಳ ಆಧಾರದಲ್ಲಿಯೇ ಒಟ್ಟು 16 ಪ್ರಮುಖ ವಿಷಯಗಳು ಹಾಗೂ 103 ಭರವಸೆಗಳ ಪಟ್ಟಿಯನ್ನು ಪ್ರಣಾಳಿಕೆಯಲ್ಲಿ ಜನತೆಯ ಮುಂದಿಡಲಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಹೇಳಿದರು.
ಬಿಜೆಪಿ ಪ್ರಣಾಳಿಕೆಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಮೇ 1ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದರು.
2031ಕ್ಕೆ ಕರ್ನಾಟಕ ರಾಜ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ. ಆ ಸಂದರ್ಭಕ್ಕೆ ಕರ್ನಾಟಕ ರಾಜ್ಯದ ಆರ್ಥಿಕ ಸ್ಥಿತಿ 1 ಟ್ರಿಲಿಯನ್ ದಾಟಬೇಕು ಎಂಬ ಕಲ್ಪನೆ ಬಿಜೆಪಿಯದ್ದು. ಅದಕ್ಕೆ ಪೂರಕವಾಗಿ, ಭಾರತದ ಬೆಳವಣಿಗೆಯ ಚಾಲಕ ಶಕ್ತಿಗೆ (ಗ್ರೋಥ್ ಎಂಜಿನ್) ಕರ್ನಾಟಕವೇ ಎಂಜಿನ್ ಆಗಬೇಕು ಎಂಬ ಕಲ್ಪನೆ ನಮ್ಮದು. ಆ ನಿಟ್ಟಿನಲ್ಲಿ ಅನೇಕ ಆಯಾಮಗಳಿಂದ ಚಚಿfಸಿ ಪಕ್ಷದ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ತಿಳಿಸಿದರು.
ಕರ್ನಾಟಕವು ಐಟಿ, ಎಐ (ಆರ್ಟಿಫಿಶಿಯಲ್ ಇಮಟೆಲಿಜೆನ್ಸ್) ಸೆಮಿ ಕಂಡಕ್ಟರ್, ಹಾಗೂ ಕೃಷಿ ಕ್ಷೇತ್ರಗಳಲ್ಲಿ ನಂ.1 ಆಗಬೇಕು ಎಂಬುದು ನಮ್ಮ ಮಹತ್ವಾಕಾಂಕ್ಷೆ. ಪ್ರಧಾನಿ ನರೇಂದ್ರ ಮೋದಿಯವರು ಸಹ ಇದನ್ನೇ ನಮ್ಮ ಮುಂದಿಟ್ಟಿದ್ದಾರೆ. ಭಾರತೀಯ ಜನತಾ ಪಕ್ಷದ ಸಂಸ್ಥಾಪಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ನೀಡಿರುವ ಅಂತ್ಯೋದಯದ ಕಲ್ಪನೆಯಂತೆ ಅಭಿವೃದ್ಧಿಯ ನಿಜವಾದ ಲಾಭ ಅರ್ಹರಿಗೆ ಮತ್ತು ಅಭಿವೃದ್ಧಿಯ ಆಯಾಮಗಳಿಂದ ವಂಚಿತರಾದವರಿಗೆ ದೊರಕಿಸಿಕೊಡುವ ಪ್ರಾಮಾಣಿಕ ಕಲ್ಪನೆಯನ್ನು ಜನತೆಗೆ ತಲುಪಿಸುತ್ತೇವೆ ಎಂದು ಅವರು ನುಡಿದರು.
ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಕಾಂಗ್ರೆಸ್ ಅದೇ ಹಳೆಯ 'ಗರೀಬಿ ಹಟಾವೋ' ಸವಕಲು ನಾಣ್ಯವನ್ನೇ ಮತ್ತೆ ಮತ್ತೆ ಪ್ರಯೋಗಿಸುತ್ತಿದೆ. ಸ್ವತಂತ್ರ ಭಾರತದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಮಾಡಿದ್ದಾದರೂ ಏನು? ಎಂದು ಕ್ಯಾಪ್ಟನ್ ಕಾರ್ಣಿಕ್ ಪ್ರಶ್ನಿಸಿದರು.
ಸಬ್ ಕಾ ಸಾಥ್- ಸಬ್‌ಕಾ ವಿಕಾಸ್ ಎಂಬುದು ಬಿಜೆಪಿಯ ಧ್ಯೇಯವಾಕ್ಯ. ಆ ನಿಟ್ಟಿನಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರಕಾರಗಳು ಕೆಲಸ ಮಾಡುತ್ತವೆ. 2022ರಲ್ಲಿ ನಡೆದ ಗ್ಲೋಬಲ್ ಇನ್‌ವೆಸ್ಟರ್ ಮೀಟ್‌ನಲ್ಲಿ 10 ಲಕ್ಷ ಕೋಟಿಗೂ ಮೀರಿ ಬಂಡವಾಳ ಹೂಡಿಕೆ ಪ್ರಸ್ತಾವಗಳು ಸ್ವೀಕೃತವಾಗಿವೆ. ಇಡೀ ದೇಶದ ಎಫ್‌ಡಿಐನಲ್ಲಿ ಶೇ. 38ರ ಪಾಲು ಪಡೆದು ಕರ್ನಾಟಕ ನಂ 1 ಆಗಿದೆ. ಕಳೆದ 2-3 ವರ್ಷಗಳಲ್ಲಿ ಕರ್ನಾಟಕದ ಎಫ್‌ಡಿಐನಲ್ಲಿ ಮೊದಲನೆ ಸ್ಥಾನದಲ್ಲಿದೆ. ಸುಲಲಿತ ವ್ಯವಹಾರದ (ಈಸ್ ಆಫ್ ಡುಯಿಂಗ್ ಬಿಸಿನೆಸ್) ಕಲ್ಪನೆ ಕರ್ನಾಟಕದಲ್ಲಿ ಸಮರ್ಥವಾಗಿ ಜಾರಿಯಾಗಿದೆ. ಕಳೆದ ತಿಂಗಳು ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದ್ದು, ಕರ್ನಾಟಕ ನಂ.2 ಸ್ಥಾನದಲ್ಲಿದೆ. ಹಲವು ತಿಂಗಳಿನಿಂದ ರಾಜ್ಯ ನಿರಂತರವಾಗಿ ಈ ಸಾಧನೆ ಮಾಡುತ್ತಿದೆ.
ಇಡೀ ದೇಶದಲ್ಲಿ 145 ಯುನಿಕಾರ್ನ್ ಗಳು ಸ್ಥಾಪನೆಯಾಗಿದ್ದು, ಅವುಗಳ ಪೈಕಿ ಅತ್ಯಧಿಕ ಬೆಂಗಳೂರಿನಲ್ಲಿವೆ. 1 ಬಿಲಿಯನ್ ಡಾಲರ್ ಮೀರುವ ಆರ್ತಿಕ ವ್ಯವಹಾರ ಹೊಂದಿರುವ ಸ್ಟಾರ್ಟಪ್‌ಗಳನ್ನು ಯುನಿಕಾರ್ನ್ ಎಂದು ಗುರುತಿಸಲಾಗುತ್ತಿದೆ. ಇವುಗಳ ಸ್ಥಾಪನೆಯಲ್ಲಿ ಕರ್ನಾಟಕ ನಂ.1 ಆಗಿದೆ. ಬಿಬಿಎಂಪಿ ಡಿಜಿಟಲ್ ಇನ್ನೊವೇಶನ್ ಹಬ್ ಆಗಬೇಕು ಎಂದು ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ದೇಶದಲ್ಲಿ ಮೊದಲ ಬಾರಿಗೆ ದೆಹಲಿಯನ್ನು ಎನ್‌ಸಿಆರ್ ಮಾಡಿದ ರೀತಿ ಬೆಂಗಳೂರನ್ನು ಎಸ್‌ಸಿಆರ್ (ಸ್ಟೇಟ್ ಕ್ಯಾಪಿಟಲ್ ರೀಜನ್) ಮಾಡಿ ಅಭಿವೃದ್ಧಿ ಪಡಿಸುತ್ತೇವೆ. ಬೆಂಗಳೂರಿನಲ್ಲಿ ಇರುವ ಕೊರತೆಗಳನ್ನು ನೀಗಿಸಿ ಇನ್ನಷ್ಟು ಅಭಿವೃದ್ಧಿಪಡಿಸಲು ಎಸ್‌ಸಿಆರ್ ಮಾಡುವುದರಿಂದ ಸಾಧ್ಯವಾಗುತ್ತದೆ. ದೇಶದ ಅತಿದೊಡ್ಡ ಮೆಟ್ರೋ ರೈಲು ಕರ್ನಾಟಕದಲ್ಲಿದೆ ಎಎಂದು ಕ್ಯಾಪ್ಟನ್ ಕಾರ್ಣಿಕ್ ವಿವರಿಸಿದರು.
-ಬಾಕ್ಸ್-
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ವೈರುಧ್ಯ:
ಇದಕ್ಕೆ ಭಿನ್ನವಾಗಿ ಮೇ 2ರಂದು ಕಾಂಗ್ರೆಸ್ ಬಿಡುಗಡೆ ಮಾಡಿದ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಪ್ರಣಾಳಿಕೆಯನ್ನು ಗಮನಿಸಿದರೆ ಸಾಕಷ್ಟು ವೈರುಧ್ಯಗಳು ಕಾಣುತ್ತವೆ. ಅನ್ನಭಾಗ್ಯ ಯೋಜನೆಯನ್ನು ಎಲ್ಲರಿಗೂ ನಿಡುವುದಾಗಿ ಕನ್ನಡದ ಪ್ರಣಾಳಿಕೆಯಲ್ಲಿ ಹೇಳಿದ್ದರೆ, ಇಂಗ್ಲಿಷ್ ಪ್ರಣಾಳೀಕೆಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಎಂದು ಉಲ್ಲೇಖಿಸಲಾಗಿದೆ. ಇದೇ ರೀತಿ ಹಲವು ವೈರುಧ್ಯದ ಅಂಶಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ. ಕಾಂಗ್ರೆಸ್ ಜನರಿಗೆ ಯಾವ ರೀತಿ ಮೋಸ ಮಾಡುತ್ತದೆ ಎಂಬುದಕ್ಕೆ ಇದೇ ಉದಾಹರಣೆ.
ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಲಿಂಗಾಯತ ಸಮುದಾಯಕ್ಕೆ ಮಾಡಿದ ಅವಮಾನ. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿಗಳಾಗಿದ್ದ ಲಿಂಗಾಯತ ನಾಯಕರು. ಸಿದ್ದರಾಮಯ್ಯ ಹೇಳಿಕೆ ಪ್ರಕಾರ ಅವರೂ ಭ್ರಷ್ಟರೇ? ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟೀಕರಣ ಕೊಡಬೇಕು ಎಂದು ಕ್ಯಾಪ್ಟನ್ ಕಾರ್ಣಿಕ್ ಆಗ್ರಹಿಸಿದರು.
ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಎಂದಿಗೂ ಇಂತಹ ವಿಪರೀತ ಸನ್ನಿವೇಶವನ್ನು ನೋಡಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದೆ. ಅಂದರೆ ಅವರ ಅನಿಯಂತ್ರಿತ ಭ್ರಷ್ಟಾಚಾರವನ್ನು ಅವರೇ ಒಪ್ಪಿಕೊಂಡಿದ್ದಾರೆ. ಅಧಿಕಾರದ ಗದ್ದುಗೆ ಏರುವುದೇ ಕಾಂಗ್ರೆಸ್ ಗುರಿಯಲ್ಲ ಎನ್ನುವ ಮಾತು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ. ಈ ಪ್ರಣಾಳಿಕೆ ಭರವಸೆಗಳ ಕೈಪಿಡಿಯಲ್ಲ ಎಂದು ಕಾಂಗ್ರೆಸಿಗರೇ ಹೇಳಿದ್ದಾರೆ. ಅಂದರೆ ಅವರು ನೀಡುತ್ತಿರುವ 'ಗ್ಯಾರಂಟಿ'ಗಳು ಬರೀ ಘೋಷಣೆ ಮಾತ್ರ ಎಂದು ಒಪ್ಪಿಕೊಂಡಂತಾಗಿದೆ ಎಂದು ಕ್ಯಾಪ್ಟನ್ ಕಾರ್ಣಿಕ್ ಟೀಕಿಸಿದರು.