ಚಿತ್ರ / ವರದಿ: ರೋನ್ಸ್ ಬಂಟ್ವಾಳ್
ಮುಂಬಯಿ: ಮುಂಬಯಿ ವಿಶ್ವವಿದ್ಯಾಲಯದಲ್ಲಿ 32ಗಳ ವರ್ಷಗಳ ಹಿಂದೆ ಎಂ.ಎ ವಿದ್ಯಾರ್ಥಿ ಆಗಿದ್ದು ಜಿ.ಎನ್ ಉಪಾಧ್ಯ ನನ್ನ ಗುರುಗಳಾಗಿದ್ದರು. ಅಂದು ಶಿಷ್ಯನಾಗಿದ್ದು ಇಂದು ಗುರುಗಳೊಡನೆ ವೇದಿಕೆ ಹಂಚಿಕೊಳ್ಳುವುದು ನನ್ನ ಸುಯೋಗವಾಗಿದೆ.
ನಾನು ವಿವಿಯಲ್ಲಿ ಇರುವಾಗ ಇಲ್ಲಿ ಅನೇಕ ಸಾಹಿತಿಗಳು ಬರುತ್ತಿದ್ದು, ಆವಾಗ ನಾನು ಸ್ವಯಂ ಸೇವಕವಾಗಿ ಕೆಲಸ ಮಾಡಿತ್ತಿದ್ದೆ. ಅವರಿಗೆ ಸಿಗುವ ಗೌರವ ನೋಡಿ ನನಗೆ ಇಂತಹ ಗೌರವ ಯಾವಾಗ ಎಂದು ಮನಸ್ಸಿನಲ್ಲಿತ್ತು. ಅಂತಹ ಗೌರವ ಇಂದು ಸಿಕ್ಕಿದ್ದು ಸಂತೋಷವಾಗುತ್ತದೆ. ಇಂದು ತವರು ಮನೆಗೆ ಬಂದ ಸಂತಸವಾಗಿದೆ. ಮುಂಬಯಿ ವಿವಿ ಕನ್ನಡ ವಿಭಾಗ ಒಂದು ಮಾದರಿ ವಿಭಾಗವಾಗಿದೆ. ನಾವು ಬಾಷಿಕ ಮತ್ತು ಭೌಗೋಳಿಕವಾಗಿ ಬೇರೆಬೇರೆ ಆದರೂ ಮಾನಸಿಕವಾಗಿ ಒಂದೇ ಎಂಬುವ ಬಾವನೆಯಿದೆ. ಸಾಹಿತ್ಯ ಎಲ್ಲಾ ಸ್ತರರನ್ನೂ ಊರನ್ನು ಒಂದು ಮಾಡುತ್ತದೆ. ಸಾಹಿತ್ಯದ ಮೂಲಕದ ಹಿತ ಸಂದೇಶಗಳನ್ನು ಕೃತಿಗಳು ಮಾಡುತ್ತಿರುವುದು ಅಭಿನಂದನೀಯ. ಡಾ| ಸುರೇಶ್ ರಾವ್ ಅವರಿಗೆ ಗೋಕುಲದ ಮೇಲೆ ಇರುವ ಆಸಕ್ತಿ ನೋಡಿ ಆಶ್ಚರ್ಯವಾಗುತಿತ್ತು. ನಿನ್ನೆ ಗೋಕುಲಕ್ಕೆ ಬೇಟಿ ನೀಡಿದಾಗ ಅಲ್ಲಿನ ಭವ್ಯ ಕಟ್ಟಡದ ಸೊಬಗು, ಮರದ ಕೆತ್ತನೆ ನೋಡಿ ಸಂತೋಷವಾಯಿತು. ಇದು ಭಾರತಿಯರೆಲ್ಲರೂ ನೋಡುವಂತಹ ಗೋಕುಲ ಮುಂಬಾಯಿಯಲ್ಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಪ್ರೊ. ಡಾ| ಎಂ.ಪಿ. ಶ್ರೀನಾಥ್ ತಿಳಿಸಿದರು.
ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ವರ್ಷವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಇಂದಿಲ್ಲಿ ಶನಿವಾರ ಸಾಂತಾಕ್ರೂಜ್ ಪೂರ್ವದ ಕಲೀನಾ ಇಲ್ಲಿನ ವಿದ್ಯಾನಗರಿಯ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನ ಸಭಾಗೃಹದಲ್ಲಿ ಆಯೋಜಿಸಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರೊ| ಶ್ರೀನಾಥ್ ಮಾತನಾಡಿದರು.
ಬಿಎಸ್‌ಕೆಬಿ ಅಸೋಸಿಯೇಶನ್ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಅಧ್ಯಕ್ಷತೆ ಮತ್ತು ಮುಂಬಯಿ ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ. ಎನ್ ಉಪಾಧ್ಯ ಉಪಸ್ಥಿತಿಯಲ್ಲಿ ಜರುಗಿದ ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಸಿದ್ಧ ನಾಟಕಕಾರ, ರಂಗ ಭೂಮಿಯಲ್ಲಿ ಮಹತ್ವದ ಸಾಧನೆ ಮಾಡಿದ ಕಲಾವಿದ, ರಂಗತಜ್ಞ ಡಾ| ಶ್ರೀಪಾದ್ ಭಟ್, ಬಿಎಸ್‌ಕೆಬಿ ಅಸೋಸಿಯೇಶನ್ ಉಪಾಧ್ಯಕ್ಷ ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಖಜಾಂಚಿ ಸಿಎ| ಹರಿದಾಸ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಗೋಕುಲದ ನೂರು ವರ್ಷಗಳ ಇತಿಹಾಸದ ಡಾ| ಜಿ. ಎನ್ ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಭಾಗ ಅಧ್ಯಯನ ವಿದ್ಯಾಥಿsನಿ ಪ್ರತಿಭಾ ರಾವ್ ರಚಿತ "ಶತಮಾನದ ಯಾನ" ಕನ್ನಡ ಆವೃತ್ತಿ, ಸೆಂಟೆನಿಯಲ್ ಒಡಿಸ್ಸಿ ( (Centennial Odyssey) ಇಂಗ್ಲಿಷ್ ಆವೃತ್ತಿ ಅಂತೆಯೇ ಡಾ| ಸುಧಾ ಮೂರ್ತಿ ಅವರ ಸಾಹಿತ್ಯ ಸಂಪದ ಜೀವನ್ಮುಖಿ ಕೃತಿಗಳನ್ನು ಲೋಕಾರ್ಪಣೆ ಗೈದರು.
ಶ್ರೀಪಾದ್ ಭಟ್ ಮಾತನಾಡಿ ಪುತಿನಾ ಅವರು ಗೋಕುಲ ನಿರ್ಗಮದ ಕುರಿತು ನಾಟಕ ಬರೆದಿದ್ದಾರೆ. ಈ ಭೂಲೋಕದಿಂದ ಗೋಕುಲವೇ ನಿರ್ಗಮನವಾಗುತ್ತದೆ ಅನಿಸುತ್ತದೆ. ಎಚ್.ಎಸ್ ಮೂರ್ತಿ ಅವರ ಕಂಸಯಾನದಂತೆ ನಿರ್ಗಮನದಿಂದ ಶುರುವಾಗುತ್ತದೆ. ಅಂತೆಯೇ ಕವಿ ಹೇಳುವಂತೆ ಎಲ್ಲಿ ಯಾವುದು ಇಲ್ಲವೂ ಅದು ಇರಬೇಕು ಎಂದಾರ್ಥ. ಕೃಷ್ಣ ನಿರ್ಗಮನದಲ್ಲಿ ಕೃಷ್ಣ ಕೊಳಲನ್ನು ಬಿಟ್ಟು ಹೋಗುತ್ತಾನೆ. ಕಂಸಯಾನದಲ್ಲಿ ಇನ್ನೂ ದೊಡ್ಡ ಕೊಳಲನ್ನು ತಗೊಂಡು ಹೋಗುತ್ತಾನೆ. ಯಾಕೆಂದರೆ ಕೊಳಲಿನ ಅಗತ್ಯವಿದೆ. ಹಾಗೆಯೇ ಇವತ್ತು ಮಹಾನಗರಗಳಿಗೂ ಕೊಳಲಿನ ಮತ್ತು ಗೋಕುಲ ಅವಶ್ಯವಿದೆ. ಇಂದು ಜಾಗತಿಕವಾಗಿ ಸಾಹಿತ್ಯ ಮತ್ತು ಅಕ್ಷರ ಪೂರ್ಣವಾಗಿ ನಾಶದ ಅಂಚಿನಲ್ಲಿರುವ ಕಾಲಘಟ್ಟದಲ್ಲಿ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಸಾಗುವುದೂ ಕಷ್ಟಕರ.ಈ ಮಧ್ಯೆಯೂ ನಿಷ್ಠಾವಂತಾರಾಗಿ ಸೇವೆ ನಿರ್ವಾಹಿಸುವ ಗೋಕುಲದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಅಭಿನಂದನೀಯ ಎಂದರು.
ಡಾ| ಜಿ. ಎನ್ ಉಪಾಧ್ಯ ಮಾತನಾಡಿ ಗೋಕುಲ ಎಂದ ತಕ್ಷಣ ಶ್ರೀಕೃಷ್ಣನ ನೆನಪಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೃಷ್ಣನ ಬಾಲಲೀಲೆಯನ್ನು ವರ್ಣನೆ ಮಾಡಿದ ಒಬ್ಬನೇ ಒಬ್ಬ ಕೀರ್ತನಾಕಾರ ಪುರಂದರದಾಸ. ಇಂತಹ ಕೃಷ್ಣ ಇದೀಗಳು ಮುಂಬಯಿಯಲ್ಲೇ ದರ್ಶನಕ್ಕಿದ್ದಾನೆ. ಮೊನ್ನೆ ಕಾಂದಿವಿಲಿಗೆ, ಚೆಂಬೂರಿಗೆ, ಇಂದು ಕಲೀನಾ ಕ್ಯಾಂಪಸ್‌ಗೆ ಬಂದಿದ್ದಾನೆ. ಸುರೇಶ್ ರಾವ್ ನೇತೃತ್ವದಲ್ಲಿ ಕಲೀನಾ ಕ್ಯಾಂಪಸ್‌ನಲ್ಲಿ ಕೃಷ್ಣನ ದರ್ಶನ ಆಗಿರುವುದು ನಮ್ಮ ಭಾಗ್ಯವಾಗಿದೆ. ಕೃಷ್ಣನ ಸಾರಥ್ಯದಲ್ಲೇ ಸುರೇಶ್ ರಾವ್ ಕಟ್ಟುನಿಟ್ಟಾಗಿನ ಸೇವಾ ಕೈಂಕರ್ಯಗಳನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಕಾಲಿಗೆ ಚಕ್ರ ಕಟ್ಟಿ ಇಡೀ ಮುಂಬಯಿ ಓಡಾಡಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಎಲ್ಲರನ್ನೂ ಸಂಘಟಿಸುತ್ತಿದ್ದಾರೆ. ಇಂತಹ ಸಹೃದಯಿ ವ್ಯಕ್ತಿಗಳ ಜೊತೆಗೂಡಿ ಸಂಘ ಸಂಸ್ಥೆಗಳು ಸೇವಾ ಭಾರವನ್ನು ಇಳಿಸುವಂತಹ ಕೆಲಸ ಮಾಡಬೇಕು ಎಂದರು.
ಕಳೆದ ಅರ್ಧ ಶತಕದಿಂದ ಮುಂಬಯಿಯಲ್ಲಿದ್ದರೂ ಈ ವಿಶ್ವವಿದ್ಯಾಲಯಕ್ಕೆ ಬಂದವನಲ್ಲ. ಇಲ್ಲಿ ಇಂತಹ ಕಾರ್ಯಕ್ರಮಗಳ ವ್ಯವಸ್ಥೆಯಿದೆ ಎಂದೂ ನಮಗೆ ಮಾಹಿತಿಯಿಲ್ಲ. ಆದರೆ ಜಿ.ಎನ್ ಉಪಾಧ್ಯ ಅವರು ನಾವು ಯಾವ ರೀತಿಯಲ್ಲಿ ಇಲ್ಲಿನ ವ್ಯವಸ್ಥೆಗಳನ್ನು ಉಪಯೋಗಿಸಬಹುದು ಎಂದು ನಮಗೆ ತೋರಿಸಿಕೊಟ್ಟಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಆಗಬೇಕಾದ ಕಾರ್ಯಕ್ರಮ ಆದರೆ ಶತಮಾನದ ಯಾನದಲ್ಲಿ ಓರ್ವ ಪ್ರಯಾಣಿಕನಾಗಿ ಗೋಕುಲದಿಂದ ಹುಟ್ಟಿ ಬಂದ ಕಾರಣ ನನಗೆ ಅಧ್ಯಕ್ಷತೆ ಕರುಣಿಸಿದ ತಮಗೆ ಧನ್ಯವಾದಗಳು. ಶತಮಾನದ ಯಾನ ಪುಸ್ತಕದಿಂದ ನಮಗೆ ಗೋಕುಲ ಶತಮಾನದ ಹಾದಿಯ ಬಗ್ಗೆ ಮಾಹಿತಿ ದೊರಕಲಿದ್ದು, ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಈ ಹೊತ್ತಿಗೆ ಬಿಡುಗಡೆ ಗೊಂಡಿರುವುದು ಸಂತೊಷದ ವಿಷಯ. ಪ್ರತಿಭಾ ರಾವ್ ಬರವಣಿಗೆ ಮತ್ತು ವಿಶ್ವವಿದ್ಯಾಲಯದಿಂದ ಸಿದ್ಧವಾದ ಈ ಪುಸ್ತಕ ಮುಂದೆ ಇನ್ನೂ ಒಳ್ಳೆಯದಾಗಿ, ಓದಲು ಆಸಕ್ತಿ ಬರುವಂತಹ ಪುಸ್ತಕವಾಗಲಿದೆ ಅನ್ನುವ ಆಶಯ ನಮ್ಮದಾಗಿದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಡಾ. ಸುರೇಶ್ ರಾವ್ ತಿಳಿಸಿದರು.
ಈ ಸಂದರ್ಭದಲ್ಲಿ ಡಾ| ಸುರೇಶ್ ಎಸ್.ರಾವ್ ಅವರು ಗೋಕುಲ ಶತಮಾನೋತ್ಸವ ಸ್ಮರಣಾರ್ಥ ಪ್ರಶಸ್ತಿ ಸ್ಥಾಪನೆಯ ಘೋಷಣೆಯನ್ನು ಮಾಡಿದರು. ಇದೇ ಸಂದರ್ಭದಲ್ಲಿ ಗೋಕುಲ ಶತಮಾನೋತ್ಸವ ಸಂಭ್ರಮದ ಸಲುವಾಗಿ ವಿಶೇಷ ಸಾಧಕರಾದ ಯಕ್ಷಗಾನ ಕಲಾವಿದ ಪ್ರಕಾಶ್ ಪಣಿಯೂರು, ಅಶೋಕ್ ಪಕ್ಕಳ, ಮಿತ್ರಾ ವೆಂಕಟ್ರಾಜ್, ಜಗದೀಶ್ ಆಚಾರ್ಯ, ಮಧುಸೂದನ ರಾವ್, ಶ್ರೀನಿವಾಸ ಜೋಕಟ್ಟೆ ಹಾಗೂ ಪಾಠ ಪ್ರವಚನದಲ್ಲಿ ಸಹಕರಿಸಿದ ಎಲ್ಲರಿಗೂ ಗೌರವಿಸಿ ಅಭಿನಂದಿಸಿದರು. ವಿಶೇಷವಾಗಿ ಡಾ| ಜಿ. ಎನ್ ಉಪಾಧ್ಯ ಮತ್ತು ಪ್ರತಿಭಾ ರಾವ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮವಾಗಿಸಿ ಡಾ| ಶ್ರೀಪಾದ್ ಭಟ್ ಅವರ ನಿರ್ದೇಶನದಲ್ಲಿ ಪಂಡಿತ್ ವಿಶ್ವನಾಥ ಹಿರೇಮಠ, ಸಂದೇಶ್ ಹಿರೇಮಠ, ಶ್ರವಣ ಕುಲಕರ್ಣಿ ಸಂಗೀತದ, ಕಾವ್ಯರಂಗ (ಕನ್ನಡ ಸಾಹಿತ್ಯದ ಕಾವ್ಯಮಾರ್ಗದ ವರ್ಷದ ಆಖ್ಯಾನ, ವ್ಯಾಖ್ಯಾನ) ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಎಸ್‌ಕೆಬಿಎ ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಮತ್ತು ವೈ.ಮೋಹನ್‌ರಾಜ್, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಶಾಂತ್ ಹೆರ್ಲೆ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಕಲಾ ವೃಂದ ವಿಭಾಗಧ್ಯಕ್ಷೆ ವಿನೋದಿನಿ ರಾವ್, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್, ಕೃಷ್ಣ ಮಂಜರಬೆಟ್ಟು, ದೀಪಕ್ ಶಿವತ್ತಾಯ, ಗೋಪಾಲಕೃಷ್ಣ ಟ್ರಸ್ಟ್‌ನ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಜಗದೀಶ್ ಚಂದ್ರಕುಮಾರ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತದ್ದರು.
ರಾಮವಿಠಲ ಕಲ್ಲೂರಾಯ ಮತ್ತು ಗಣೇಶ್ ಭಟ್ ವೇದಗೋಷ ಕೋರಿದರು. ಶೈಲಿನಿ ರಾವ್, ಸಹನಾ ಪೋತಿ, ಕಲಾ ಭಾಗವತ್. ವಿನಯ ಆನಂತಕೃಷ್ಣ, ಸುಶೀಲಾ ದೇವಾಡಿಗ ಪ್ರಾರ್ಥನೆಯನ್ನಾಡಿದರು. ಹಿರಿಯ ಸಾಹಿತಿ ಮಿತ್ರಾ ವೆಂಕಟ್ರಾಜ್ ಸ್ವಾಗತಿಸಿದರು. ಶೈಲಿನಿ ಎ.ರಾವ್ ಬಿಎಸ್‌ಕೆಬಿಎ(ಗೋಕುಲ) ನೂರು ವರ್ಷ ನಡೆದು ಬಂದ ಹಾದಿಯನ್ನು ವಿವರಿಸಿದರು. ನಳಿನಾ ಪ್ರಸಾದ ಮತ್ತು ವಿಕ್ರಂ ಜೋಶಿ ಕ್ರಮವಾಗಿ ಕೃತಿಗಳನ್ನು ಪರಿಚಯಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಿಎ| ಹರಿದಾಸ ಭಟ್ ವಂದಿಸಿದರು.