ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಕಡಬ ತಾಲ್ಲೂಕು ಜಡೆಮನೆ ಕುಟುಂಬಕ್ಕೆ ಸೇರಿದ ನಾಗಬನ ಪ್ರದೇಶದಲ್ಲಿ 2013ರ ಸೆಪ್ಟೆಂಬರ್ 15ರಂದು ಭಗ್ನಗೊಂಡಿರುವ ಶಿಲಾಮಯ ಪಾದವು ಲಭ್ಯವಾಗಿತ್ತು. 2014 ಮೇ 23 ರಂದು ಇರಿಸಲಾದ ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಂತೆ ಸುಮಾರು 700 ವರ್ಷಗಳ ಹಿಂದೆ ರಾಜರಿಂದ ದೇವಾಲಯವು ಇಲ್ಲಿ ಸ್ಥಾಪಿಸಲ್ಪಟ್ಟಿತು ಹಾಗೂ ಉತ್ಸವದಿ ಪೂಜಾ ಪುನಸ್ಕಾರಗಳು ವಿಜೃಂಭಣೆಯಿಂದ ನಡೆಯುತ್ತಿದ್ದವು. ಪ್ರವೇಶ ದ್ವಾರದಲ್ಲಿ ದ್ವಾರ ಗಣಪತಿಯು ಇದ್ದುದು ಇಲ್ಲಿಯ ವಿಶೇಷತೆ ಎಂದು ತಿಳಿದುಬಂದಿತ್ತು. ಆ ಪ್ರಕಾರ 2014ರ ಡಿಸೆಂಬರ್ ಹತ್ತರಂದು ಬಾಲಾಲಯ ಶಿಲನ್ಯಾಸ ಇತ್ಯಾದಿ ಕಾರ್ಯಕ್ರಮ ಜರಗಿತು. 2015 ಫೆಬ್ರವರಿ 7ರಂದು ಬಾಲಾಲಯ ಪ್ರತಿಷ್ಠೆ ನಡೆದು ದೇವಾಲಯದ ಕೆಲಸ ಮುಂದುವರೆದು 2015 ಮೇ 11ರಂದು ಷಢಾಧಾರ ಪ್ರತಿಷ್ಠೆ ನೆರವೇರಿತು.

ವರ್ಷಂಪತಿ ನವರಾತ್ರಿ, ಚಂಡಿಕಾಯಾಗ, ದೀಪೋತ್ಸವ, ಲಕ್ಷ ಪುಷ್ಪಾರ್ಚನೆ ಇತ್ಯಾದಿ ಕಾರ್ಯಕ್ರಮಗಳು ನಿರಂತರ ನಡೆಯುತ್ತಿತ್ತು. ಇದೀಗ ಎಲ್ಲಾ ಕಾರ್ಯಕ್ರಮಗಳು ಸಂಪನ್ನಗೊಂಡು 2024ರ ಏಪ್ರಿಲ್ 26ರಂದು ಜಗದ್ಗುರು ಶೃಂಗೇರಿ ಶ್ರೀಗಳು ದೇವಾಲಯದ ಬಳಿಯ ಸಭಾಭವನವನ್ನು ಉದ್ಘಾಟಿಸಿದ್ದರು. ಜಗದ್ಗುರುಗಳ ಆದೇಶದಂತೆ ಇದೇ ಬರುವ ಏಪ್ರಿಲ್ 16 ರಿಂದ 21ರ ತನಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಏಪ್ರಿಲ್ 21ರಂದು ಪ್ರತಿಷ್ಠಾ ಕುಂಭಾಭಿಷೇಕ ನೆರವೇರಲಿದೆ. ವಾಸ್ತುಶಿಲ್ಪಿ ಎಂ ಪ್ರಸಾದ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಗರ್ಭಗುಡಿ, ತೀರ್ಥ ಮಂಟಪ ಶಿಲಾಮಯಗೊಂಡಿರುತ್ತದೆ. ತಾಮ್ರದ ಹೊದಿಕೆ ಕೂಡ ಪೂರ್ಣಗೊಂಡಿರುತ್ತದೆ. ಶ್ರೀ ಜಯದುರ್ಗಪರಮೇಶ್ವರಿಯ ನೂತನ ಕೃಷ್ಣಶಿಲಾಬಿಂಬವು ಪೂರ್ಣಗೊಂಡು ಒಟ್ಟು ಸುಮಾರು 1.3 ಕೋಟಿ ಖರ್ಚು ಆಗಿರುತ್ತದೆ. ಸುತ್ತು ಹೋಳಿಯ ಕಾರ್ಯವು ಮುಗಿದಿದ್ದು ಬ್ರಹ್ಮಕಲಶೋತ್ಸವದ ಸಿದ್ಧತೆ ನಡೆಯುತ್ತಿದೆ ಎಂದು ಜಗದ್ಗುರು ಅಭಿವಂದನ ಸಮಿತಿಯ ಗೌರವಾಧ್ಯಕ್ಷ ರೆಂಜಿ ಲಾಡು ಬೀಡಿನ ಅರಸ ಯಶೋಧರ ಯಾನೆ ತಮ್ಮಯ್ಯ ಬಲ್ಲಾಳ, ಅಧ್ಯಕ್ಷ ಕಡಬ ಕೃಷ್ಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀಕೃಷ್ಣ ಎಂಆರ್ ಹೊಸನಗರ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮಂಗಳೂರು ಸುರೇಶ್ ರಾವ್, ಅಧ್ಯಕ್ಷ ಅರುಣ್ ಕುಮಾರ್ ಜಡೆಮನೆ, ಉಪಾಧ್ಯಕ್ಷ ಅನೀಶ್ ಎಂ ಯು ಹೈದರಾಬಾದ್, ಕಾರ್ಯದರ್ಶಿ ಸೋಮಪ್ಪ ನಾಯ್ಕ ತಿಳಿಸಿದ್ದಾರೆ.