ಸೃಷ್ಟಿಯಾ ಚರಾಚರಗಳಲ್ಲಿ ಮಾನವ ಜನ್ಮವೇ ಅತ್ಯಂತ ಶ್ರೇಷ್ಠವಾದದ್ದು. ಮಾನವನ ಜೀವನದಲ್ಲಿ ಬಾಲ್ಯ, ಕಾಮರ್ಯ,ಯವ್ವನ, ಮುದಿತನ ಎಂಬಂತಹ ನಾಲ್ಕು ಹಂತಗಳಿವೆ. ಇವೆಲ್ಲದರಲ್ಲಿ ಬಾಲ್ಯದ ಸಮಯವೇ ಅತ್ಯಂತ ಸಂತೋಷದ ಸುಂದರವಾದ ಕಾಲ. ಏಕೆಂದರೆ ಅದು ಪ್ರಪಂಚದ ಅರಿವಿಲ್ಲದ ಮುಗ್ಧ ಕಾಲ.

ಮಗುವು ಮೊದಲ ಅಳುವಿನ ಮೂಲಕ ಪ್ರಪಂಚಕ್ಕೆ ತನ್ನ ಹುಟ್ಟನ್ನು ತಿಳಿಸುತ್ತದೆ. ನಂತರ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಪ್ರಪಂಚ ಜ್ಞಾನವೇ ಇಲ್ಲದ ಮಗು ಪ್ರಕೃತಿಯನ್ನು ವೀಕ್ಷಿಸಲು ಪ್ರಾರಂಭಿಸುತ್ತದೆ. ಬಾಲ್ಯದಲ್ಲಿ ಮಗುವು ದಿನೇ ದಿನೇ ಹೊಸತನವನ್ನು ಕಾಣುವ ಮನೋಭಾವವನ್ನು ಹೊಂದಿರುತ್ತದೆ. ಯಾವನೇ ಒಬ್ಬ ಮನುಷ್ಯನು ಒಂದು ವಸ್ತು ಸಿಕ್ಕಿದರೆ ಅದರಿಂದ ತಾನು ಯಾವ ರೀತಿ ಲಾಭ ಪಡೆಯಬಹುದು ಎಂಬುದನ್ನು ಯೋಚಿಸುತ್ತಾನೆ. ಆದರೆ ಮಗು ಒಂದು ಸಾಮಾನ್ಯ ವಸ್ತು ಸಿಕ್ಕಿದರೂ ಅದರಲ್ಲಿ ಅತ್ಯಂತ ಆನಂದವನ್ನು ಪಡೆಯುತ್ತದೆ. ಬಾಲ್ಯದಲ್ಲಿ ಹೆತ್ತವರ ಮೂಲಕ ಮಗು ಪ್ರಪಂಚದ ಜ್ಞಾನವನ್ನು ಅರಿಯತೊಡಗುತ್ತದೆ. ಬಾಲ್ಯದಲಿ ಮಗುವಿಗೆ ತಾಯಿಯೇ ಮೊದಲ ಗುರು. ತಂದೆ ಹಾಗೂ ಕುಟುಂಬದ ಅರಿವನ್ನು ತಾಯಿ ಮೂಡಿಸುತ್ತಾಳೆ.

ಬಾಲ್ಯದಲ್ಲಿ ನಮಗೆ ಆಟ ಊಟದ್ದೇ ಧ್ಯಾನವಾಗಿರುತ್ತದೆ,  ಜಾತಿ ಮತ ಭೇದವಿಲ್ಲದೆ ಎಲ್ಲಾ ಕೂಡಿ ಆಡಿ ಬೆಳೆಯುತ್ತೇವೆ. ಬಡತನ ಸಿರಿತನದ ಅಂತರವನ್ನೇ ಕಾಣುವುದಿಲ್ಲ,  ಬಾಲ್ಯದ ಕೊನೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣದ ಹಂತವನ್ನು ತಲುಪುತ್ತಾರೆ. ಈ ಹಂತದಲ್ಲಿ ಆಟದ ಮೂಲಕ ಅರಿವಿನ ಶಿಕ್ಷಣವು ದೊರೆಯುತ್ತದೆ.

ಆಹಾ ಬಾಲ್ಯ ಜೀವನ ಎಷ್ಟೊಂದು ಸುಂದರ, ನಮ್ಮದೇ ಒಂದು  ಸುಂದರವಾದ ಲೋಕ. ಜಾತಿ ಮತಗಳ ಗಲಭೆ ಇಲ್ಲ, ಎಲ್ಲರೊಂದಿಗೆ ಬೆರೆತುಕೊಂಡು ಒಂದೇ ತಾಯಿಯ ಮಕ್ಕಳು ಎನ್ನುವ ಭಾವನೆಯೊಂದಿಗೆ ಎಲ್ಲರೊಂದಿಗೆ  ಸೇರುತ್ತೇವೆ. ಆಟ ಮತ್ತು ಊಟದ ಚಿಂತೆ ಒಂದೇ ನಮ್ಮದಾಗಿರುತ್ತದೆ, ಎಲ್ಲಾ ಸವಿನೆನಪುಗಳೇ  ಬಾಲ್ಯದಲ್ಲಿ ಕಾಣಸಿಗುತ್ತದೆ.

ಬಾಲ್ಯ ಜೀವನ ಹಿಂತಿರುಗಿ ಮತ್ತೆ ಬರುವುದಿಲ್ಲ, ಅದು ಬಾಲ್ಯದಲ್ಲಿ ಮಾತ್ರ ಕಾಣಲು ಚಂದ, ದೊಡ್ಡವರಾದ ಮೇಲೆ ಅಂದರೆ ಯವ್ವನದ ಸಮಯದಲ್ಲಿ ನಾವು ಬಾಲ್ಯ ಜೀವನವನ್ನು ಕಾಣಲು ಸಾಧ್ಯವಿಲ್ಲ.

Article By

ಮಾಲತಿ

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು