ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಪುರಸಭೆಯ 23, 24, 25 ನೇ ಸಾಲಿನ ಹಣಕಾಸು ಯೋಜನೆಯ ಅನುದಾನ, ನಗರೋತ್ಥಾನ, ಎಸ್ ಎಫ್ ಸಿ ಮುಕ್ತ ನಿಧಿ, ಪುರಸಭಾ ನಿಧಿ ಇತ್ಯಾದಿ ಅನುದಾನಗಳ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮ ಡಿಸೆಂಬರ 7 ರಂದು ಮೂಡುಬಿದರೆಯ ಜ್ಯೋತಿ ನಗರದಲ್ಲಿ ನಡೆಯಿತು. 

ಒಟ್ಟು 5ಕೋಟಿ 12 ವರೆ ಲಕ್ಷ ರೂಪಾಯಿಗಳ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ, ಭೂಮಿ ಪೂಜೆ ನಡೆಯಿತು. ಜ್ಯೋತಿ ನಗರದಲ್ಲಿ ಭೂಮಿ ಪೂಜೆಯ ತರುವಾಯ ಪುರಸಭೆಯಲ್ಲಿ ನಡೆದ ಶಿಲಾನ್ಯಾಸ ನೆರವೇರಿಸಿ ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಲೇಬರ್ ಶಾಲಾ ಪ್ರದೇಶದಲ್ಲಿ ಲಿಫ್ಟ್, ಪಾರ್ಕಿಂಗ್, ಹೊಂದಿರುವ ಉತ್ತಮ ಗುಣಮಟ್ಟದ ಒಂದು ಕೋಟಿ 25 ಲಕ್ಷದ ವಾಣಿಜ್ಯ ಸಂಕೀರ್ಣಕ್ಕೆ, ಬಸ್ಸು ನಿಲ್ದಾಣದ ಅಭಿವೃದ್ಧಿಗೆ, ರಸ್ತೆ ಚರಂಡಿಯ ಪುನರ್ನವೀಕರಣಕ್ಕೆ, ಎಂ ಆರ್ ಎಫ್ ಘಟಕದ ಅಭಿವೃದ್ಧಿಗೆ ಇತ್ಯಾದಿ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಯನ್ನು ನೀಡುತ್ತಿದ್ದೇನೆ. ಪುರಸಭೆಯ ಎಲ್ಲ ಸದಸ್ಯರು, ಅಧಿಕಾರಿಗಳು ಮುತುವರ್ಜಿಯಿಂದ ಗುಣಮಟ್ಟದ ಕಾಮಗಾರಿ ನಡೆಯುವಂತೆ ಸದಾ ಎಚ್ಚರಿಕೆಯಿಂದ ಉಸ್ತುವಾರಿ ವಹಿಸಲು ಕೇಳಿಕೊಂಡರು. ಒಟ್ಟಾರೆ ಮೂಡುಬಿದಿರೆಯ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ದೃಷ್ಟಿಯಿಂದ ಸುಬ್ರಹ್ಮಣ್ಯ ಷಷ್ಟಿಯ ಈ ಸುಸಂದರ್ಭದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ ಎಂದು ನುಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಮಾತನಾಡಿ ಶಾಸಕರ ಸದಾಶಯ ಆದಷ್ಟು ಬೇಗ ಕೈಗೂಡಲಿ ಎಂದು ಹಾರೈಸಿದರು. ಪುರಸಭಾ ಮುಖ್ಯ ಅಧಿಕಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.

ಅಲಂಗಾರು ಸುಬ್ರಹ್ಮಣ್ಯ ಭಟ್ ಭೂಮಿ ಪೂಜೆಯನ್ನು ನೆರವೇರಿಸಿದರು. ವೇದಿಕೆಯಲ್ಲಿ ಕಾಮಗಾರಿಯ ಯೋಜನಾಧಿಕಾರಿ, ಸಹಾಯಕ ಕಾರ್ಯಪಾಲಕ ಅಧಿಕಾರಿಗಳು, ಪುರಸಭಾ ಉಪಾಧ್ಯಕ್ಷ ನಾಗರಾಜ ಪೂಜಾರಿ, ವಿಪಕ್ಷ ನಾಯಕ ಪಿ ಕೆ ಥೋಮಸ್, ರಾಜೇಶ್ ನಾಯ್ಕ್, ಹಾಗೂ ಮಾಜಿ ಅಧ್ಯಕ್ಷ, ಉಪಾಧ್ಯಕ್ಷರುಗಳು ಹಾಗೂ ಎಲ್ಲಾ ಸದಸ್ಯರುಗಳು, ಅಧಿಕಾರಿಗಳು ಹಾಜರಿದ್ದರು. ಕಂದಾಯ ಅಧಿಕಾರಿ ಜ್ಯೋತಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.