ಗುರುವಾಯನಕೆರೆ: ಇಂದು ಬೆಳಿಗ್ಗೆ ಶಿವಾಜಿನಗರ ನಿವಾಸಿ ರಿಕ್ಷಾ ಚಾಲಕ ಪ್ರವೀಣ್ ಪಿಂಟೊ ಎಂಬವರು ಗುರುವಾಯನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತವಾಗಿ ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆ ತಂಡದ ಸ್ವಯಂಸೇವಕರು ಅಗ್ನಿಶಾಮಕ ದಳದವರೊಂದಿಗೆ ನಿರಂತರ ಹುಡುಕಾಟ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರಿನ ಈಶ್ವರ ಮಲ್ಪೆಯವರನ್ನು ಶೋಧ ಕಾರ್ಯಕ್ಕೆ ಕರೆಯಲಾಯಿತು. ನಮ್ಮ ತಂಡದ ಹರೀಶ್ ಕೂಡಿಗೆ, ಸಂತೋಷ್, ಮಾಸ್ಟರ್ ಸ್ನೇಕ್ ಪ್ರಕಾಶ್ ಕೂಡಿಕೊಂಡು ಸುಮಾರು 12 ಜನರ ತಂಡ ಬೆಳಗಿನಿಂದ ಮಧ್ಯಾಹ್ನದವರೆಗೆ ಸತತ ಹುಡುಕಾಟ ನಡೆಸಲಾಯಿತು.

ಇನ್ನೇನು ಶವ ಪತ್ತೆಯಾಗುವುದಿಲ್ಲ ಎಂದು ತೀವ್ರ ಹುಡುಕಾಟ ನಡೆಸಿದ ಪರಿಣಾಮವಾಗಿ ಶವ ಕೆರೆಯಲ್ಲಿ ಪತ್ತೆಯಾಗಿದೆ. ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್, ವಿಪತ್ತು ನಿರ್ವಹಣೆ ತಂಡದ ಯೋಜನಾಧಿಕಾರಿ ಜೈವಂತ್ ಪಟಗಾರ್ ಉಪಸ್ಥಿತರಿದ್ದರು. ಪೋಲೀಸು ಇಲಾಖೆಯವರು ಸಹಕರಿಸಿದ್ದರು. ವಿಪತ್ತು ನಿರ್ವಹಣೆ ತಂಡದ ಪ್ರಯತ್ನವು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.