ಉಜಿರೆ: ತಮ್ಮ ಧರ್ಮದ ಮರ್ಮವನ್ನರಿತು ಇತರ ಧರ್ಮಗಳನ್ನೂ ಗೌರವಿಸಿದಾಗ ಸಾಮಾಜಿಕ ಸಾಮರಸ್ಯದೊಂದಿಗೆ ವಿಶ್ವ ಶಾಂತಿ ಸಾಧ್ಯವಾಗುತ್ತದೆ ಎಂದು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಂದರ್ಭದಲ್ಲಿ ಗುರುವಾರ ಆಯೋಜಿಸಿದ ಸರ್ವಧರ್ಮ ಸಮ್ಮೇಳನದ 89ನೆ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಬದುಕು ಮತ್ತು ಬದುಕಲು ಬಿಡು” ಎಂಬುದು ಜೈನಧರ್ಮದ ಶ್ರೇಷ್ಠ ತತ್ವವಾಗಿದೆ. ಸತ್ಯ, ಅಹಿಂಸೆ, ತ್ಯಾಗ, ಪರರ ಸೇವೆಯಿಂದ ಜೀವನ ಪಾವನವಾಗುತ್ತದೆ ಎಂದು ಭಗವಾನ್ ಮಹಾವೀರರು ಬೋಧಿಸಿದ್ದಾರೆ. ಸಾಧಿಸಿ ತೋರಿಸಿದ್ದಾರೆ. ಲೋಕಸಭೆಯಲ್ಲಿ ಹಾಗೂ ಸರ್ವೋಚ್ಛ ನ್ಯಾಯಾಲಯದಲ್ಲಿಯೂ ಸರ್ವಧರ್ಮಗಳ ಸಮನ್ವಯದಿಂದಲೇ ಲೋಕ ಕಲ್ಯಾಣ ಸಾಧ್ಯ ಎಂಬ ಆಶಯ ವ್ಯಕ್ತಪಡಿಸಲಾಗಿದೆ. ಧರ್ಮದತತ್ವ, ಸಿದ್ಧಾಂತಗಳನ್ನು ಅರಿತು ಬದುಕಿನಲ್ಲಿ ಪಾಲನೆ ಮಾಡಿದರೆ ಎಲ್ಲರಲ್ಲಿಯೂ ಪರಸ್ಪರ ಪ್ರೀತಿ, ವಿಶ್ವಾಸ ಬೆಳೆದು ಸಾಮಾಜಿಕ ಸಾಮರಸ್ಯ ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಪವಿತ್ರಕ್ಷೇತ್ರ ಧರ್ಮಸ್ಥಳದ ಸೇವೆ - ಸಾಧನೆ ಶ್ಳಾಘನೀಯವಾಗಿದೆ ಎಂದು ಹೇಳಿ ಅವರು ಹೆಗ್ಗಡೆಯವರನ್ನು ಅಭಿನಂದಿಸಿದರು.
ಲೋಕ ಹಿತಕ್ಕಾಗಿ ಎಲ್ಲರನ್ನೂ ಉದ್ಧರಿಸುವುದೇ ಧರ್ಮದ ಮೂಲ ಉದ್ದೇಶವಾಗಿದೆ. ಎಲ್ಲಾ ಧರ್ಮಗಳೂ ಸಮಾನವಾಗಿದ್ದು ಧರ್ಮದ ಮೂಲಕ ವಿಶ್ವಶಾಂತಿ ಮತ್ತು ವಿಶ್ವಕಲ್ಯಾಣ ಸಾಧ್ಯವಾಗುತ್ತದೆ. ಎಲ್ಲರೂ ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಂಡು ವಿಶ್ವಮಾನವರಾಗಬೇಕು ಎಂದು ಅವರು ಹೇಳಿ ಆಗ ಮಾತ್ರವೇ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆ ಮೂಡಿ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಬೆಂಗಳೂರಿನ ಎಸ್. ವ್ಯಾಸಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಕಲಪತಿ ಪ್ರೊ.ರಾಮಚಂದ್ರ ಜಿ. ಭಟ್ಟರು ಮಾತನಾಡಿ, ಧರ್ಮವು ನಮ್ಮಎಲ್ಲಾ ಪಾಪಕರ್ಮಗಳನ್ನು ಕಳೆಯುತ್ತದೆ. ಧರ್ಮದಲ್ಲಿ ಸರ್ವರ ಹಿತವಿದೆ. ಧರ್ಮದಲ್ಲಿ ಸರ್ವವೂ ಇದೆ, ಆದರೆ ಸರ್ವವೂ ಧರ್ಮವಲ್ಲ ಎಂದು ಅವರು ಹೇಳಿದರು.
ಸರ್ವಧರ್ಮಗಳೂ ಪರಸ್ಪರ ಪೂರಕವಾಗಬೇಕು, ಮಾರಕವಾಗಬಾರದು. ಸರ್ವರ ಸ್ವಾಸ್ಥ್ಯಕ್ಕಾಗಿ ನಾವು ಪ್ರಕೃತಿಗೆ ಪೂರಕವಾಗಿ ಬದುಕಬೇಕು. ಮಾನವನ ಅಪರಾಧಗಳು ಹಾಗೂ ಪ್ರಕೃತಿಗೆ ವಿರುದ್ಧವಾಗಿ ವರ್ತಿಸುವ ಸ್ವಭಾವವೇ ಇಂದಿನ ಪ್ರಾಕೃತಿಕ ವಿಕೋಪಗಳಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಸರ್ವವೂ ಧರ್ಮ ಮಯವಾಗಬೇಕು. ಧರ್ಮವು ಜಾತಿ-ಮತ, ಪಂಥಗಳ ಚೌಕಟ್ಟಿಗೆ ಸೀಮಿತವಾಗಬಾರದು. ಗುರುಕುಲ ಶಿಕ್ಷಣ ಪದ್ಧತಿಯ ಮೂಲಕ ಮಾತ್ರ ಸಮಾಜದ ಸಭ್ಯ, ಸುಸಂಸ್ಕøತ ನಾಗರಿಕರನ್ನು ರೂಪಿಸಬಹುದು. ಸಂಸ್ಕøತದ ಮೂಲಕ ಸಂಸ್ಕøತಿ ಮತ್ತು ಸಂಸ್ಕಾರ ಉದ್ದೀಪನಗೊಳಿಸಬಹುದು. ಕಾಯಾ, ವಾಚಾ ಮತ್ತು ಮನಸಾ ಎಲ್ಲರೂ ಹೃದಯ ಶ್ರೀಮಂತಿಕೆಯೊಂದಿಗೆ ಜ್ಞಾನ, ಧ್ಯಾನ ಮತ್ತುಕರ್ಮದಲ್ಲಿ ನಿರತರಾದಾಗ ವಿಶ್ವಶಾಂತಿಯೊಂದಿಗೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಉದಾರ ಭಾವನೆ ಮೂಡಿಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸಾಗರದ ಡಾ. ಸಫ್ರ್ರಾಜ್ ಚಂದ್ರಗುತ್ತಿ ಅವರು “ಭಾರತೀಯ ಧರ್ಮಗಳು” ಎಂಬ ವಿಷಯದ ಬಗ್ಯೆ ಮೈಸೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಸ್. ಪದ್ಮಅವರು, “ಜೈನ ಧರ್ಮದ ಮೌಲಿಕತೆ ಮತ್ತು ಮಹತ್ವ”ದ ಬಗ್ಯೆ ಮತ್ತು ಶಿವಮೊಗ್ಗದ ವೀರೇಶ್ ವಿ. ಮೊರಾಸ್‍ಅವರು “ಧರ್ಮ ಮತ್ತು ಸಾಮಾಜಿಕ ಸ್ವಾಸ್ಥ”ದ ಬಗ್ಯೆಉಪನ್ಯಾಸ ನೀಡಿದರು.
ಆರಂಭದಲ್ಲಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಲಕ್ಷದೀಪೋತ್ಸವ ಸಂದರ್ಭದಲ್ಲಿ ಕಳೆದ 88 ವರ್ಷಗಳಲ್ಲಿ ಆಯೋಜಿಸಿದ ಸರ್ವಧರ್ಮ ಸಮ್ಮೇಳನದಲ್ಲಿ ಅನೇಕ ವಿದ್ವಾಂಸರು ಸರ್ವಧರ್ಮಗಳ ಸಾರವನ್ನು ಸಂದೇಶ ರೂಪದಲ್ಲಿ ನೀಡಿ ಸಾರ್ಥಕ ಬದುಕಿಗೆ ಮಾರ್ಗದರ್ಶನ ನೀಡಿದ್ದಾರೆ. ಸಭ್ಯ, ಸುಸಂಸ್ಕøತ ನಾಗರಿಕತೆ ಯುಧರ್ಮದ ಮೂಲ ಜೀವ ದ್ರವ್ಯವಾಗಿದೆ.
ಧರ್ಮ ಮತ್ತು ಸೇವೆಗಳು ಜೊತೆಯಲ್ಲೆ ಸಾಗಬೇಕು. ಧರ್ಮದ ಮರ್ಮವಿರುವುದು ಆಚರಣೆಯಲ್ಲಿ ಆದುದರಿಂದ ಆಚಾರಕ್ಕೂ, ವಿಚಾರಕ್ಕೂ, ನಡೆಗೂ, ನುಡಿಗೂ ವ್ಯತ್ಯಾಸವಿರಬಾರದು ಎಂದು ಹೆಗ್ಗಡೆಯವರು ಅಭಿಪ್ರಾಯಪಟ್ಟರು.
ತಾನು ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟಾಭಿಷಿಕ್ತನಾದ ಬಳಿಕ ಪ್ರಗತಿಪರ ಚಿಂತನೆಗಳೊಂದಿಗೆ ಲೋP Àಕಲ್ಯಾಣಕ್ಕಾಗಿ ಹಮ್ಮಿಕೊಂಡ ಸೇವಾ ಕಾರ್ಯಗಳ ಮಾಹಿರತಿಯನ್ನು ಹೆಗ್ಗಡೆಯವರು ನೀಡಿದರು.
• ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಆಶ್ರಯದಲ್ಲಿ 5 ಲಕ್ಷದ 55 ಸಾವಿರ ಸ್ವ-ಸಹಾಯ ಸಂಘಗಳನ್ನು ರಚಿಸಿದ್ದು 50 ಲಕ್ಷ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
• ಬ್ಯಾಂಕುಗಳಿಂದ ಸ್ವ-ಸಹಾಯ ಸಂಘಗಳಿಗೆ 14 ಸಾವಿರಕೋಟಿರೂ. ಹಣವನ್ನು ವ್ಯವಹಾರಕ್ಕಾಗಿ ಒದಗಿಸಲಾಗಿದೆ.
• ಜೀವನ ಮಧುರ ಪಾಲಿಸಿಯ ಮೂಲಕ 20 ಲಕ್ಷ ಮಂದಿಗೆ ವಿಮಾರಕ್ಷೆ ಒದಗಿಸಲಾಗಿದೆ.
• ಧರ್ಮೋತ್ಥಾನ ಟ್ರಸ್ಟ್ ಮೂಲಕ 259 ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರಗೊಳಿಸಲಾಗಿದೆ.
• ಕಳೆದ ಒಂದು ವರ್ಷದಲ್ಲಿ 843 ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳದಿಂದ 14 ಕೋಟಿರೂ. ನೆರವು ನೀಡಲಾಗಿದೆ.
• ವೈದ್ಯಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳಿಗೆ 61 ಕೋಟಿ 23 ಲಕ್ಷರೂ. ನೆರವು ನೀಡಲಾಗಿದೆ.
• 585 ಆರ್‍ಸೆಟಿಗಳಲ್ಲಿ 5 ಲಕ್ಷಕ್ಕೂ ಮಿಕ್ಕಿ ಯುವಕ–ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಗಿದೆ.
• ಶಾಂತಿವನ ಟ್ರಸ್ಟ್ ಮೂಲಕ ಯೋಗ, ನೈತಿಕ ಶಿಕ್ಷಣ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ಪ್ರೋತ್ಸಾಹ ನೀಡಲಾಗುತ್ತದೆ.
ಜೊತೆಗೆ ಅನ್ನದಾನ, ವಿದ್ಯಾದಾನ, ಔಷಧಿ ದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದೆ ಎಂದು ಹೆಗ್ಗಡೆಯವರು ಹೇಳಿದರು.
ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್, ಉಪನ್ಯಾಸಕರಾದ ಡಾ. ಸಫ್ರ್ರಾಜ್ ಚಂದ್ರಗುತ್ತಿ, ಡಾ.ಎಂ.ಎಸ್. ಪದ್ಮ ಮತ್ತು ವೀರೇಶ್ ಮೊರಾಸ್ ಅವರನ್ನು ಗೌರವಿಸಿದರು.
ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್ ಉಪಸ್ಥಿತರಿದ್ದರು.
ಧರ್ಮಸ್ಥಳದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಕುರ್ಮಾಣಿ ಧನ್ಯವಾದವಿತ್ತರು.
ಉಜಿರೆ ಎಸ್. ಡಿ.ಎಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.