ಚಿತ್ರ / ವರದಿ: ರೋನ್ಸ್ ಬಂಟ್ವಾಳ್
ಮುಂಬಯಿ: ರಾಮನನ್ನು ದೇವರು ಮಾಡಿದಿದ್ದರೆ ಅದು ಹನುಮಂತನಾಗಿದ್ದಾನೆ. ಇತಹ ರಾಮಭಕ್ತ ಹನುಮಂತನ ಜನ್ಮ ದಿನದಿ ಸಂಭ್ರಮಿಸುವ ಈ ಕಲಾ ಸಂಭ್ರಮದಿಂದ ರಾಮತತ್ವದ ಸೌಭಾಗ್ಯ ಸಾಧ್ಯವಾಗುವುದು. ಅಭಿಮಾನಿಗಳು ಇದ್ದಾಗ ಮಾತ್ರ ಯಾವುದೇ ಕಾರ್ಯಗಳು ಯಶಸ್ಸು ಕಾಣುವುದು. ಇದನ್ನು ಅಶೋಕ್ ಸಾಧಿಸಿದ ಸಾಧನಾ ಉತ್ಸವ ಇದಾಗಿದೆ. ಈ ಎಲ್ಲವೂಗಳ ಮೂಲಕ ಕಲಾಜಗತ್ತಿಗೆ ಅಶೋಕ್ ಕೊಡ್ಯಡ್ಕ ಧ್ರುವತಾರೆ ಆಗಿದ್ದಾರೆ. ಮುಂಬಯಿಯಲ್ಲಿ ಅದ್ಭುತವಾಗಿ ರಥೋತ್ಸವ ನೇರವೇರಿಸಿಕೊಟ್ಟ ಏಕೈಕ ಕಲಾಕಾರನಿದ್ದರೆ ಅದು ಅಶೋಕ್ ಕೊಡ್ಯಡ್ಕ ಮಾತ್ರ. ಇಂತಹ ಕಲಾವಿದರನ್ನು ಎಲ್ಲರೂ ಪ್ರೋತ್ಸಾಹಿಸಿ ಬೆಳೆಸಬೇಕು. ಮುಂಬಯಿವಾಸಿ ಕಲಾಭಿಮಾನಿಗಳು ಕಲೆಗೆ ನೀಡುವಂತಹ ಪ್ರೋತ್ಸಾಹದಿಂದ ದಿನನಿತ್ಯ ಇಲ್ಲಿ ಕಲೆಗಳು ಜೀವಂತವಾಗಿ ಉಳಿದಿದೆ ಎಂದು ಕಡಂದಲೆ ಸುರೇಶ್ ಭಂಡಾರಿ ತಿಳಿಸಿದರು.
ಘಾಟ್‌ಕೋಪರ್ ಪಶ್ಚಿಮದ ಅಸಲ್ಫ್ಪಾ ಇಲ್ಲಿನ ಜಂಗಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶನಿವಾರ ಸಂಜೆ ಕೊಡ್ಯಡ್ಕ ಕ್ರಿಯೇಷನ್ಸ್ ಆಯೋಜಿಸಿದ್ದ ನೃತ್ಯವೈಭವ, ಗಾನ ವೈಭವ, ಸಭಾ ಮತ್ತು ಸನ್ಮಾನ ಕಾರ್ಯಕ್ರಮ, ತುಳು ಹಾಸ್ಯಮಯ ನಾಟಕ ಇತ್ಯಾದಿಗಳ ಮೇಳೈಕೆಗಳ ಕಲಾ ಸಂಭ್ರಮ-2025 ಅಧ್ಯಕ್ಷತೆ ವಹಿಸಿ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನ ಅಸಲ್ಫ್ಪಾ Asalpha ಇದರ ಅಧ್ಯಕ್ಷ ಸುರೇಶ್ ಭಂಡಾರಿ ಮಾತನಾಡಿದರು.
ಎಸ್.ಕೆ.ಎಫ್ ಉದ್ಯಮ ಸಂಸ್ಥೆ ಮೂಡಬಿದಿರೆ ಇದರ ನಿರ್ದೇಶಕ ಡಾ| ರಾಮಕೃಷ್ಣ ಆಚಾರ್ ಮುಖ್ಯ ಅತಿಥಿಯಾಗಿದ್ದು, ದೀಪಹಚ್ಚಿ ಸಮಾರಂಭಕ್ಕೆ ಚಾಲನೆಯನ್ನಿತ್ತು ಮಾತನಾಡಿ ಕಲೆಯ ಬಗ್ಗೆ ಆಸಕ್ತಿ ವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಇದೊಂದು ಸೂಕ್ತವಾದ ವೇದಿಕೆಯಾಗಿದೆ. ಕಲಾ ಪ್ರದರ್ಶನ ಸಣ್ಣ ಕೆಲಸವಲ್ಲ, ನಿಮ್ಮೆಲ್ಲರ ಪ್ರೋತ್ಸಾಹದ ಸಹಯೋಗವೇ ಕೊಡ್ಯಡ್ಕ ಅವರ ಕಲಾಭಿವೃದ್ಧಿಯ ಸಂಪತ್ತು ಆಗಿದೆ ಎಂದರು.
ಶ್ರೀ ಮೂಕಾಂಬಿಕಾ ದೇವಾಲಯ ಘನ್ಸೋಲಿ ಇದರ ಅಧ್ಯಕ್ಷ ಧರ್ಮದರ್ಶಿ ಅಣ್ಣ ಸಿ.ಶೆಟ್ಟಿ ಮತ್ತು ಶ್ರೀ ಶನೀಶ್ವರ ಮಂದಿರ ನೆರೂಲ್ ಇದರ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ.ಪೂಜಾರಿ ಆಶೀರ್ವಚನಗೈದರು. ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ರವೀಶ್ ಜಿ.ಆಚಾರ್, ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಅಧ್ಯಕ್ಷ ಉತ್ತಮ್ ಶೆಟ್ಟಿಗಾರ್, ಅಭಿನಯ ಮಂಟಪ ಮುಂಬಯಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮೂಡಬಿದ್ರೆ, ಬಿಲ್ಲವರ ಅಸೋಸಿಯೇಶನ್ ನವಿಮುಂಬಯಿ ಸ್ಥಳೀಯ ಕಚೇರಿ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ. ಪೂಜಾರಿ, ತುಳುಕೂಟ ಅಸಲ್ಫ್ಪಾ ಅಧ್ಯಕ್ಷ ರಮಾನಾಥ್ ಟಿ.ಕೋಟ್ಯಾನ್, ಗೌರವ ಕಾರ್ಯದರ್ಶಿ ಸತೀಶ್ ಕುಶಲ ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗಧ್ಯಕ್ಷೆ ಚಿತ್ರಾ ಆರ್.ಶೆಟ್ಟಿ, ಕನ್ನಡ ವೆಲ್ಫೇ ಸೊಸೈಟಿ ಘಾಟ್ಕೋಪರ್ ಇದರ ಮಹಿಳಾ ವಿಭಾಗಧ್ಯಕ್ಷೆ ಸುಜಲ ಅಜಿತ್ ಶೆಟ್ಟಿ ಗೌರವ ಅತಿಥಿಗಳಾಗಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ, ಸಾಹಿತ್ಯ, ಸಮಾಜ ಸೇವೆಗೈದ ಜಿ.ಟಿ ಆಚಾರ್ಯ ಮತ್ತು ಉಷಾ ಆಚಾರ್ಯ, ನಾಟಕ ಮತ್ತು ಸಿನಿಮಾ ಮೇಕಪ್ ಕಲಾವಿದ ಮಂಜುನಾಥ್ ಶೆಟ್ಟಿಗಾರ್ ಮತ್ತು ಹರಿಣಾಕ್ಷಿ ಶೆಟ್ಟಿಗಾರ್ ಹಾಗೂ ಮ್ಯಾರಥಾನ್ ವಿಜೇತರಾದ ಗಿರೀಶ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ಡಾ| ರಾಮಕೃಷ್ಣ ಆಚಾರ್ ಅವರಿಗೆ ಅಭಿನಂದನಾ ಸನ್ಮಾನಗೈದು ಶುಭಾರೈಸಲಾಯಿತು. ಗಣೇಶ್ ಕುಮಾರ್ ಪರಿಚಯಿಸಿ ಅಭಿನಂದನಾ ನುಡಿಗಳನ್ನಾಡಿದರು.
ಮಾಲತಿ ಪುತ್ರನ್ ಮತ್ತು ಉಷಾ ಕುಂದರ್ ಪ್ರಾರ್ಥನೆಯನ್ನಾಡಿದರು. ಕೊಡ್ಯಡ್ಕ ಕ್ರಿಯೇಷನ್ಸ್ ರೂವಾರಿ ಅಶೋಕ್ ಕುಮಾರ್ ಕೊಡ್ಯಡ್ಕ ಸ್ವಾಗತಿಸಿದರು. ಅಶೋಕ್ ಕೊಡ್ಯಡ್ಕ ಮತ್ತು ಸೌಮ್ಯ ಆಚಾರ್ಯ ಅತಿಥಿಗಳಿಗೆ ಪುಷ್ಪಗುಚ್ಫ, ಸ್ಮರಣಿಕೆಗಳನ್ನೀಡಿ ಗೌರವಿಸಿದರು.
ಸೌಪರ್ಣಿಕ ಆಚಾರ್ಯ, ಅಪೇಕ್ಷಾ ಶೆಟ್ಟಿ, ಸುಪ್ರಿಯಾ ಉಡುಪ ಸನ್ಮಾನಿತರನ್ನು ಪರಿಚಯಿಸಿದರು. ಸಚಿನ್ ಪೂಜಾರಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ಕಣಂಜಾರ್ ಪ್ರಸ್ತಾವನೆಗೈದು ವಂದಿಸಿದರು.