ಮುಂಬಯಿ: ಬಿ. ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ ಸಾಯನ್ , ಭಾರತದ ಸ್ವಾತಂತ್ರ್ಯೋತ್ಸವವನ್ನು ಧ್ವಜಾರೋಹಣ, ದೇಶಭಕ್ತಿ ಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ, ಕಾಸರಗೋಡು ಇವರಿಂದ "ನರಕಾಸುರ ವಧೆ, ಗರುಡ ಗರ್ವ ಭಂಗ" ಯಕ್ಷಗಾನ ಗೊಂಬೆಯಾಟ, ಖ್ಯಾತ ರಂಗ ನಟಿ ಅಹಲ್ಯ ಬಲ್ಲಾಳ್ ನಿರ್ದೇಶನದಲ್ಲಿ "ಮಂಥರೆ" ನಾಟಕ, ಗೀತಾ ಹೆರಲಾ ಇವರ ನಿರ್ದೇಶನದಲ್ಲಿ ಬಾಲ ಕಲಾವೃಂದದವರಿಂದ "ಧನ್ಯೋಸ್ಮಿ ಭಾರತ" ಕಿರು ಪ್ರಹಸನ, ಹಾಡುಗಳು, ವಿದುಷಿ ಸಹನಾ ಭಾರದ್ವಾಜ್ ನಿರ್ದೇಶನದಲ್ಲಿ ಶ್ರೀ ಕೃಷ್ಣನ ಬಹುಮುಖ ವ್ಯಕ್ತಿತ್ವ, ಲೀಲಾ ವಿನೋದಗಳ ಸಂಗೀತ ರೂಪಕ "ಸಖಾ" ಪ್ರಸ್ತುತಗೊಂಡು ಕಲಾ ಪ್ರಿಯರ ಮೆಚ್ಚುಗೆ ಗಳಿಸಿತು.
ತನ್ಮಧ್ಯೆ ಡಾ. ಸುರೇಶ್ ಎಸ್ ರಾವ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ, ದಿ.ಬಾಲಚಂದ್ರ ರಾವ್ ಅವರು ತಮ್ಮ ಮಾತಾಪಿತರುಗಳ ಸ್ಮರಣಾರ್ಥ ಗೋಕುಲದಲ್ಲಿ ಸ್ಥಾಪಿಸಿದ "ಗೋಕುಲ ಕಲಾಶ್ರೀ" ಪ್ರಶಸ್ತಿಯನ್ನು, ಸಂಸ್ಥೆಯ ಬಹುಮುಖ ಪ್ರತಿಭೆ, ಖ್ಯಾತ ರಂಗ ನಟಿ, ಕಲಾವಿದೆ, ಅಹಲ್ಯಾ ಬಲ್ಲಾಳ್ ರವರಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರದಾನಿಸಿದರು.
ಶತಮಾನೋತ್ಸವದ ಅಂಗವಾಗಿ ಅನಿವಾಸಿ ಗೋಕುಲದವರ ಸ್ನೇಹ ಸಮ್ಮಿಲನವನ್ನು ಸಂಸ್ಥೆ ಆಯೋಜಿಸಿತ್ತು. ಸುಮಾರು 70 ಸದಸ್ಯರು ಸ್ವಾತಂತ್ರ್ಯೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಠಮಿಯ ಎರಡು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನೆರೂಲ್ ನಲ್ಲಿರುವ ಹಿರಯ ನಾಗರಿಕರ ಆಶ್ರಯಧಾಮ ಆಶ್ರಯಕ್ಕೆ ಭೇಟಿ ನೀಡಿ ಅಲ್ಲಿನ ಹಿರಿಯ ನಾಗರಿಕರೊಂದಿಗೆ ಸ್ನೇಹ ವಿನಿಮಯ ಮಾಡಿಕೊಂಡು ಅಲ್ಲಿನ ಸೌಕರ್ಯ ಸವಲತ್ತುಗಳನ್ನು ನೋಡಿ ಹರ್ಷ ವ್ಯಕ್ತ ಪಡಿಸಿದರು.