ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ: ಕ್ರೀಡಾಂಗಣದ ಒಳಗೆ ಸೇರುವಾಗ ಮೊದಲು ನನ್ನ ದರ್ಶನಕ್ಕೆ ಸಿಕ್ಕಿದ್ದು ಶ್ರೀಕೃಷ್ಣ. ಅಂದಮೇಲೆ ಗೋಕುಲದ ಉಡುಪಿ ಶ್ರೀಕೃಷ್ಣನನ್ನು ನೆನೆಪಿಸುವುದು ಮುಖ್ಯ. ಒಂದು ಶತಮಾನ ಅಂದರೆ ನೂರು ಸಂವತ್ಸರಗಳ ದೊಡ್ಡ ಸಂಭ್ರಮ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭದ ವಿಷಯಲ್ಲ. ಅದರಲ್ಲೂ ಎರಡು ದಿನಗಳ ಕಾರ್ಯಕ್ರಮ ವ್ಯವಸ್ಥೆ ಕಷ್ಟಕರ ಕೆಲಸವಾಗಿದೆ. ಅದೂ ಪ್ರಪ್ರಥಮವಾಗಿ ತುಳು ಕನ್ನಡಿಗ ಸಂಸ್ಥೆಗಳನ್ನು ಒಗ್ಗೂಡಿಸಿದ ಕಾರ್ಯಕ್ರಮ ಅಂದರೆ ಅಶ್ಚರ್ಯವೇ ಸರಿ. ಈ ಮೂಲಕ ಮುಂಬಯಿವಾಸಿ ತುಳು-ಕನ್ನಡಿಗರ ಸರ್ವಧರ್ಮ ಸಮಭಾವ ಕಲ್ಪನೆಯ ಕನಸು ನನಸಾಗಿದೆ. ಭಾವನೆಗಳ ಬೆಸುಗೆಯ ಗೋಕುಲ ಕ್ರೀಡೋತ್ಸವ ಸಮನ್ವಯದ ಸಾಧನೆಯಾಗಿದೆ. ಬಿಎಸ್‌ಕೆಬಿಎಗೆ ನನ್ನ ತುಂಬು ಹೃದಯದ ಅಭಿವಂದನೆ, ಅಭಿನಂದನೆಗಳು. ಇಂತಹ ಹಲವು ಸಂಸ್ಥೆಗಳು ಬೃಹನ್ಮುಂಬಯಿಯಲ್ಲಿ ಶತಮಾನದ ಹಾದಿಯಲ್ಲಿದ್ದು ಎಲ್ಲರೂ ಜೊತೆಗೂಡಿ ಇಂತಹ ಅನೇಕ ಕಾರ್ಯಕ್ರಮಗಳು ಆಯೋಜಿಸಬೇಕು ಎಂದು ಭವಾನಿ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಂಸ್ಥಾಪಕ ಕೆ.ಡಿ.ಶೆಟ್ಟಿ ಚೆಲ್ಲಡ್ಕ ಕರೆಯಿತ್ತರು.

ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ) ತನ್ನ ಶತಮಾನೋತ್ಸವ ಆಚರಣಾ ವರ್ಷದ ಅಂಗವಾಗಿ ಬೃಹನ್ಮುಂಬಯಿಯಲ್ಲಿನ ತುಳು ಕನ್ನಡಿಗರಿಗೆ ಇಂದಿಲ್ಲಿ ಭಾನುವಾರ ಸಂಜೆ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದ ಕ್ರೀಡಾಂಗಣದಲ್ಲಿ ನಡೆಸಲ್ಪಟ್ಟ ‘ಗೋಕುಲ ಮುಂಬಯಿ ತುಳು ಕನ್ನಡಿಗ ಗೇಮ್ಸ್ 2025’ ಕ್ರೀಡಾಕೂಟದ ಸಮಾರೋಪ, ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಕೆ.ಡಿ.ಶೆಟ್ಟಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್‌ನ ಮಾಜಿ ಜತೆ ಕಾರ್ಯದರ್ಶಿ ಡಾ| ಪಿ.ವಿ ಶೆಟ್ಟಿ, ಗೌರವ ಅತಿಥಿsಗಳಾಗಿ ಬಂಟ್ಸ್ ಸಂಘ ಮುಂಬಯಿ ಇದರ ಬೊರಿವಲಿ ಎಜ್ಯುಕೇಶನ್ ಕಮಿಟಿ ಕಾರ್ಯಾಧ್ಯಕ್ಷ ರವೀಂದ್ರ ಎಸ್.ಶೆಟ್ಟಿ, ಭಂಡಾರಿ ಸೇವಾ ಸಮಾಜ ಮುಂಬಯಿ ಮಾಜಿ ಅಧ್ಯಕ್ಷ ಪ್ರಭಾಕರ ಪಿ.ಭಂಡಾರಿ, ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ವಿಜಯೇಂದ್ರ ವಿ.ಗಾಣಿಗ, ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ರವೀಶ್ ಜಿ.ಆಚಾರ್ಯ, ಬಂಟ್ಸ್ ಸಂಘ ಮುಂಯಿ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ  ಸುರೇಶ್ ಶೆಟ್ಟಿ ಯೆಯ್ಯಾಡಿ, ತೀಯಾ ಸಮಾಜ ಮುಂಬಯಿ ಗೌ| ಪ್ರ.ಕಾರ್ಯದರ್ಶಿ ಬಾಬು ಬೆಳ್ಚಡ, ಬಿಎಸ್‌ಕೆಬಿ ಮಾಜಿ ಅಧ್ಯಕ್ಷ ಸುಬ್ಬಣ್ಣ ಕೆ.ರಾವ್, ಪೊಯಿಸರ್ ಜಿಮ್ಖಾನದ ಉಪಾಧ್ಯಕ್ಷ ಕರುಣಾಕರ ಶೆಟ್ಟಿ ಹಾಗೂ ಸ್ಟಾರ್ ಆಕರ್ಷಕರಾಗಿ ಹೆಸರಾಂತ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನಾ ರಣತುಂಗಾ ಆಗಮಿಸಿ ಶುಭಹಾರೈಸಿದರು.

ಡಾ| ಪಿ.ವಿ ಶೆಟ್ಟಿ ಮಾತನಾಡಿ ಸುರೇಶ್ ರಾವ್ ಅವರು ಕ್ರೀಡಾಪಟು ಅಲ್ಲ, ಅವರು ವೈದ್ಯರು. ನಾನು ಕ್ರೀಡಾಪಟು.ನನಗೆ ಕ್ರೀಡೆಯಲ್ಲಿ ಒಲವುಯಿದೆ. ಆದರೆ. ಸುರೇಶ್ ರಾವ್ ಮತ್ತು ಗೋಕುಲ ಬಳ್ಗದ ಕ್ರೀಡಾ ಉತ್ಸಾಹವನ್ನು ನೋಡಿ ಅಚ್ಚರಿಯಾದೆ. ಕ್ರೀಡೋತ್ಸವದ ಮೂಲಕ ಅವರ ಆಶಯಗಳೆಲ್ಲವೂ ಈಡೇರಲಿ ಎಂದರು.

ಮಹಾನಗರದಲ್ಲಿನ ಎಲ್ಲಾ ತುಳು ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಕರೆತರುವುದು ಬಿಎಸ್‌ಕೆಬಿಎ ಉದ್ದೇಶವಾಗಿತ್ತು, ಒಮ್ಮೆ ಗೋಕುಲದ ಬ್ರಹ್ಮಕಲಶದ ಸಮಯದಿ ನೀವೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದೀರಿ. ಇಂದು ಕ್ರೀಡಾಕೂಟವು ನಮ್ಮೆಲ್ಲರನ್ನು ಒಗ್ಗೂಡಿಸಿತು. ನಾವು ಆಗಾಗ್ಗೆ ಭೇಟಿಯಾದಾಗ ಸಾಧಿಸಲು ಅನೇಕ ವಿಷಯಗಳಿವೆ. ಸಂಘ-ಸಂಸ್ಥೆಗಳ ಸಮೂಹ ದೊಡ್ಡದಾದರೆ ಸಾಧನಾಶೀಲ ಕೆಲಸಗಳನ್ನು ಮಾಡುವುದು ಸುಲಭ. ಎಲ್ಲಾ ಸಂಘಗಳು ಒಟ್ಟಾಗಿ ಸೇರಿಕೊಂಡು ಸಾಮಾನ್ಯ ವಿಷಯವನ್ನು ಚರ್ಚಿಸಿದಾಗ ಅದು ಸಾಧಿಸಲು ಸುಲಭವಾಗುವುದು. ಮುಂದೆಯೂ ನಾವೆಲ್ಲರೂ ಒಟ್ಟಾಗಿ ಸ್ಪಂದಿಸಲು ಈ ಕ್ರೀಡೋತ್ಸವ ಪೂರಕವಾಗಲಿದೆ ಅನ್ನುವ ಭರವಸೆ ನಮಗಿದೆಎಂದು ಡಾ. ಸುರೇಶ್ ರಾವ್ ಹೇಳಿದರು.

ಕ್ರೀಡೋತ್ಸವದ ಪ್ರಯುಕ್ತ ಶನಿವಾರ ದಿನಪೂರ್ತಿ 16 ತಂಡಗಳ ಮಧ್ಯೆ ಸೀಮಿತ ಓವರ್ ಕ್ರಿಕೆಟ್ ಪಂದ್ಯಾವಳಿ ನಡೆಸಲ್ಪಟ್ಟಿತು. ಬಂಟರ ಸಂಘ ಮುಂಬಯಿ ಇದರ ಟೀಮ್ ಎ ಪ್ರಥಮ ಸ್ಥಾನ, ಬಂಟರ ಸಂಘ ಮುಂಬಯಿ ಇದರ ಟೀಮ್ ಬಿ ದ್ವಿತೀಯ ಸ್ಥಾನ ಪಡೆದಿದ್ದು, ಬಿಲ್ಲವರ ಅಸೋಸಿಯೇಶನ್ ಮುಂಬಯಿ ತೃತೀಯ ಸ್ಥಾನ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ನಾಲ್ಕನೇ ಸ್ಥಾನವನ್ನು ಗಳಿಸಿದೆ.  ಭಾನುವಾರ ಪುರುಷರಿಗಾಗಿ ವಾಲಿಬಾಲ್, ಮಹಿಳೆಯರಿಗಾಗಿ ಥ್ರೊಬಾಲ್ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಮತ್ತು ಪ್ರತ್ಯೇಕ ವಯೋಮಾನಕ್ಕನುಗುಣವಾಗಿ ಹಿರಿಯರು, ಕಿರಿಯರೆಲ್ಲರಿಗೂ ವಿವಿಧ ಓಟ, ರಿಲೇ ಓಟ ಆಟೋಟಗಳು, ಉದ್ದ ಜಿಗಿತ, ಭಾರ ಎಸೆತ, ವೇಗದ ನಡಿಗೆ ಇತ್ಯಾದಿ ಸ್ಪರ್ಧೆಗಳು ನಡೆಸಲ್ಪಟ್ಟವು. ವೈಯಕ್ತಿಕ ಸ್ಪರ್ಧೆಗಳ ವಿಜೇತರಿಗೂ ಹಾಗೂ ವಿವಿಧ ಸ್ಪರ್ಧೆಗಳಲ್ಲಿನ ವಿಜೇತ ತಂಡಗಳಿಗೆ ಫಲಕ, ಪದಕ, ಪ್ರಮಾಣಪತ್ರ, ಪಾರಿತೋಷಕಗಳನ್ನು ಕೊಡಮಾಡಿದ್ದು ಅತಿಥಿಗಳು ವಿಜೇತರಿಗೆ ಪ್ರದಾನಿಸಿ ಅಭಿನಂದಿಸಿದರು.  

ಇದೇ ಸಂದರ್ಭದಲ್ಲಿ ಪ್ರವೀಣ್ ಶೆಟ್ಟಿ ವಾರಂಗ, ಜಯಂತಿ ದೇವಾಡಿಗ, ಜಯ ದೇವಾಡಿಗ ಹಾಗೂ ಪ್ರಶಾಂತ್ ಆರ್. ಹೆರ್ಲೆ ಮತ್ತು ಶ್ರೀಲಕ್ಷ್ಮೀ ಪಿ.ಹೆರ್ಲೆ ದಂಪತಿ ಅವರನ್ನು ಅತಿಥಿಗಳು ಸನ್ಮಾನಿಸಿದರು.

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ತಂಡ (ಪ್ರಥಮ), ಬಂಟ್ಸ್ ಸಂಘ ಮುಂಬಯಿ ತಂಡ (ದ್ವಿತೀಯ), ಮಹಿಳಾ ಥ್ರೊಬಾಲ್ ಪಂದ್ಯಾಟದಲ್ಲಿ ಬಂಟ್ಸ್ ಸಂಘ ಮುಂಬಯಿ ತಂಡ (ಪ್ರಥಮ), ಮೊಗವೀರ ವ್ಯವಸ್ಥಾಪಕ ಮಂಡಳಿ ತಂಡ (ದ್ವಿತೀಯ), ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಂಟ್ಸ್ ಸಂಘ ಮುಂಬಯಿ ತಂಡ (ಪ್ರಥಮ), ಮೊಗವೀರ ವ್ಯವಸ್ಥಾಪಕ ಮಂಡಳಿ ತಂಡ (ದ್ವಿತೀಯ), ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಂಟ್ಸ್ ಸಂಘ ಮುಂಬಯಿ ತಂಡ (ಪ್ರಥಮ), ಬೋಂಬೆ ಬಂಟ್ಸ್ ಅಸೋಸಿಯೇಶನ್ ತಂಡ (ದ್ವಿತೀಯ), ಮಾರ್ಚ್‌ಪಸ್ಟ್ ಮೊಗವೀರ ವ್ಯವಸ್ಥಾಪಕ ಮಂಡಳಿ ತಂಡ (ಪ್ರಥಮ), ದೇವಾಡಿಗ ಸಂಘ ಮುಂಬಯಿ (ದ್ವಿತೀಯ) ವಿಜೇತರಾದವು.