ಮದುವೆ ಮಾನವನ ಬದುಕಿನಲ್ಲಿ ಮಹತ್ತರ ಬದಲಾವಣೆ, ಹಿಂದೆ ಮದುವೆ ಮನೆಗಳಲ್ಲಿ ನೈಜತೆಯ ಕಲರವ ಮದುವೆ ಮನೆಗಳಲ್ಲಿ ಸಂಭ್ರಮ ಸಡಗರ, ಬಂಧು ಬಾಂಧವರ ಓಡಾಟ ಸಂಪ್ರದಾಯದ ಪಾಲನೆ.

ಮದುಮಗ ಮದುಮಗಳ ಮೊಗದಲ್ಲಿ  ಹಾಲಬೆಳದಿಂಗಳಂತ ಪರಿಶುದ್ಧ ನಗು, ಅಲ್ಲಿ  ಸರಳತೆಯೇ  ರಾರಾಜಿಸುತ್ತಿತ್ತು . ಮೂರಕ್ಷರದ ಮದುವೆಯ ನಂಟಿನ ಜೊತೆ ಎರಡು ಜೀವ ಬೆಸೆಯುವ ಮದುವೆಗೆ ಅದ್ದೂರಿ ಅವಶ್ಯವೇ? ಈಗ ಮದುವೆ ಎಂದರೆ ಪ್ರತಿಷ್ಠೆ ಪ್ರದರ್ಶಿಸುವ ಸಂಪ್ರದಾಯವಾಗಿದೆ. ಶ್ರೀಮಂತಿಕೆ ಪ್ರದರ್ಶನದಲ್ಲಿ ನೈಜತೆಯ ಸೌಂದರ್ಯ ಅಳಿಸಿ ಹೋದಂತಾಗಿದೆ. ಮದುವೆ ಎಂದರೆ ಜೀವನದಲ್ಲಿ ಒಮ್ಮೆ ಆಗುವಂತದ್ದು ಎಂದು ನಾವು ಹಣದ ಖರ್ಚು ವೆಚ್ಚ ಸಾಧ್ಯವಾದಷ್ಟು ಹೆಚ್ಚು ಮಾಡುತ್ತೆವೆ. ಗಣ್ಯ ವ್ಯಕ್ತಿಗಳು ತಮ್ಮ ಪ್ರತಿಷ್ಠೆ ಪ್ರದರ್ಶಿಸಲು ಚಡಪಡಿಸುವಲ್ಲಿ ಇತರರಿಗೆ ಮುಳುವಾಗುತಿದ್ದಾರೆ. ಒಬ್ಬರೂ ಅದ್ದೂರಿಯಾಗಿ ಮದುವೆ ಮಾಡಿದರೆ ಹೀಗೆ ಮದುವೆ ಮಾಡಬೇಕೆಂದು ತಿಳಿಯುವರು. ಬಡವರ ಸರಳತೆಯ ಮದುವೆಗೆ ಮೂಗು ಮೂರಿಯುವವರು ಕೂಡ ಹೆಚ್ಚು. ಆ ಕಾರಣಕ್ಕೂ ಸಹ ಅದ್ದೂರಿ ಮದುವೆ ಮಾಡಿ ಕೈ ಸುಟ್ಟುಕೊಂಡವರಿದ್ದಾರೆ.

ಹೊಟ್ಟೆ ಹಸಿವು ನೀಗಬಹುದು ಆದರೆ ಪ್ರತಿಷ್ಠೆ ಪ್ರದರ್ಶಿಸುವ ಹಸಿವು ಎಂದೂ ತೀರದೇನೊ. ಪ್ರಕೃತಿಯ ಪವಾಡವೆಂಬಂತೆ ಲಾಕ್ ಡೌನ್ ಮಾನವನಿಗೆ ಬಹಳಷ್ಟು ಕಲಿಸಿತ್ತು ತಿದ್ದಿ ತಿಡಿತ್ತು. ಅದ್ದೂರಿ  ಮದುವೆಗೆ ಕಡಿವಾಣ ಹಾಕಿತ್ತು. ಈಗಲೂ ಜನ ಮನಸ್ಸು ಮಾಡಬೇಕು ಅರ್ಥವಿಲ್ಲದ ವ್ಯರ್ಥ ಖರ್ಚು ಕಡಿಮೆ ಮಾಡಬೇಕು ಮದುವೆ ರಿಸೆಪ್ಶನ್ ಗಳಲ್ಲಿ  ದೃಷ್ಟಿ ಹೋದಷ್ಟು ದೂರದವರೆಗೂ ಚಿಕ್ಕದಾಗಿ ಕಾಣುವಷ್ಟು ಸಾಲಾಗಿ ನಿಂತ ಚಾಟ್ ಗಾಡಿಗಳು ಹತ್ತು ಹಲವಾರು ಸ್ವೀಟ್ಸ್, ದೋಸಾ, ನೂಡಲ್ಸ, ಸೂಪ್ ಎಣಿಲಾಗದಷ್ಟು ವ್ಯಂಜನಗಳು ಯಾವುದು ಕೂಡ ತಿನ್ನಲಾಗದೆ ತಟ್ಟೆಯಲ್ಲೆ ಬಿಟ್ಟು ಹೋಗುವ ಆಹಾರ ನೋಡಿರುತ್ತಿರಾ. ನಿಮ್ಗೆ ಎನಿಸುವುದಿಲ್ವಾ  ಇದು ವ್ಯರ್ಥ ಆಹಾರ ಮತ್ತು ಹಣದ ವ್ಯರ್ಥ. ಹಸಿವಿದ್ದವರಿಗೆ ಅಂಬಲಿಯೂ ಅಮೃತದಂತೆ. ಹಸಿವಿಲ್ಲದವನಿಗೆ ಅಮೃತವೂ ವಿಷನೇ. ಇತಿಮಿತಿಗಳಿಂದ ತಿನ್ನುವುದಕ್ಕೆ ಆಗುವಷ್ಟು ತರಹದ ಪದಾರ್ಥಗಳು ಸಾಕಲ್ಲವೇ..?

ಅದ್ಧೂರಿ ಮದುವೆಯಾದವರು ಅಷ್ಟೇ ಧಿಡೀರನೆ ವಿಚ್ಛೇದನ ಪಡೆದದ್ದು ನೋಡಿದಿವಿ. ಸರಳತೆಯಿಂದ ಮದುವೆಯಾದವರು ಸರಳ ಜೀವನ ನಡೆಸಿದವರನ್ನು ಕೂಡ ನೋಡಿದ್ದೆವೆ.

ಮದುವೆ  ಎಂದರೆ ಎರಡು ಮನಸ್ಸುಗಳು ಬೆಸೆಯುವುದು,  ಎರಡು ಕುಟುಂಬಗಳ ಅಂತಸ್ತು ಅಳೆಯುವುದು ಅಲ್ಲ ಅಲ್ಲವೇ.?

Article By

✍ ಅಂಜಲಿ ಶ್ರೀನಿವಾಸ