ಮೂಡುಬಿದಿರೆ: ರಾಜನಾಗಿ ಹುಟ್ಟುವುದಲ್ಲ ರಾಜನಂತೆ ಬದುಕುವುದು ಮುಖ್ಯ , ಖಾಲಿ ಜೇಬು ನೂರು ಪಾಠಗಳನ್ನು ಕಲಿಸುತ್ತದೆ ಎನ್ನುವುದಕ್ಕೆ ನಿದರ್ಶನವಾದ ರಾಮಕೃಷ್ಣ ಆಚಾರ್ ಮಾತಿಗಿಂತ ಕೃತಿ ಮುಖ್ಯ ಎಂದು ತೋರಿಸಿಕೊಟ್ಟವರು ಅನ್ವೇಷಣೆಯ ಮೂಲಕ ಸಮಾಜದ ಪ್ರಗತಿಗೆ ಕಾರಣರಾಗಿ ಬದಲಾವಣೆ ತರುವ ಮೂಲಕ ಸಾಧಕರಾದರು. ಸಮಸ್ಯೆಯನ್ನು ಅವಕಾಶವನ್ನಾಗಿ ಸಿಕೊಂಡು ಬೆಳೆದ ಅನುಕರಣೀಯರು ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರು ನುಡಿದರು .ಅವರು ರವಿವಾರ ಸಂಜೆ ಕನ್ನಡ ಭವನದಲ್ಲಿ ಮೂಡುಬಿದಿರೆ ಪೌರಸಮ್ಮಾನ ಸಮಿತಿ ವತಿಯಿಂದ ಕೈಗಾರಿಕೋದ್ಯಮ ಕೃಷಿ ಸಮಾಜ ಸೇವಾ ಕ್ಷೇತ್ರದಲ್ಲಿ ನ ಅನನ್ಯ ಸಾಧನೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಜಿ ರಾಮಕೃಷ್ಣ ಆಚಾರ್ ಅವರಿಗೆ ನಡೆದ ಮೂಡುಬಿದಿರೆ ಪೌರ ಸಂಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಮಾತನಾಡಿ ಹಸಿವು ಮತ್ತು ದಾಹ ತೀರಿಸುವ ಮಹತ್ವದ ಕ್ಷೇತ್ರಗಳಲ್ಲಿ ಆರ್ಥಿಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕನ್ನು ಬದಲಾಯಿಸುವ ಶಕ್ತಿಯಾಗಿ ಬೆಳೆದಿರುವ ರಾಮಕೃಷ್ಣ ಆಚಾರ್ ಆತ್ಮ ನಿರ್ಭರ ಭಾರತಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು.
ಪೌರಸಮ್ಮಾನ: ಡಾ. ಜಿ ರಾಮಕೃಷ್ಣ ಆಚಾರ್ ಅವರಿಗೆ ಪಂಚಲೋಹದ ಶ್ರೀಕೃಷ್ಣನ ವಿಗ್ರಹ , ಶಾಲು ಹಾರ ಪೇಟ ಸ್ಮರಣಿಕೆಯೊಂದಿಗೆ ಪೌರಸಮ್ಮಾನ ಗೌರವವನ್ನು ನೀಡಲಾಯಿತು .
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ ರಾಮಕೃಷ್ಣ ಆಚಾರ್ ಬದುಕಿನ ಅನುಭವದೊಂದಿಗೆ ಬೆಳೆಯುವಲ್ಲಿ ಮೂಡುಬಿದಿರೆಯ ವಿಶ್ವನಾಥ ಪ್ರಭು ಸೇರಿದಂತೆ ಜನತೆ ನನ್ನನ್ನು ಆಶೀರ್ವದಿಸಿ ಈ ಮಟ್ಟಕ್ಕೆ ಏರಿಸಿದೆ.
ಹಣ ಮತ್ತು ಹೆಸರು ನಮ್ಮನ್ನರಸಿ ಬಂದಾಗಲೇ ಅದಕ್ಕೆ ಬೆಲೆ.ಕಾಲಕಾಲಕ್ಕೆ ತಕ್ಕಂತೆ ಬದಲಾಗುವುದರಿಂದ ಬೆಳೆದಿದ್ದೇನೆ. ಕೃಷಿ ಸಮೃದ್ಧಿ ,ಶುದ್ಧ ನೀರು ಸವಯವ ಬೆಳೆ ಗೋತಳಿ ಸಮೃದ್ಧಿಯ ಜೊತೆಗೆ 'ಬ್ಯಾಕ್ ಟು ವಿಲೇಜ್' 'ಪರಿಕಲ್ಪನೆಯ ನನ್ನ ಕನಸುಗಳ ಹಿಂದೆ ಶ್ರಮಿಸುತ್ತಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಎಂ. ಮೋಹನ್ ಆಳ್ವ ಮಾತನಾಡಿ ವಿಶ್ವಕರ್ಮ ಸಮುದಾಯಕ್ಕೆ ಸೃಜನಶೀಲತೆ, ಸೂಕ್ಷ್ಮತೆ ,ಸಂಶೋಧನಾ ಕೌಶಲ ರಕ್ತಗತವಾಗಿ ಬಂದಿದೆ. ಅದೇ ಹಿನ್ನಲೆಯಲ್ಲಿ ಹೋರಾಟದ ಬದುಕು,ಅನುಭವದ ಪಾಠ ಬದ್ಧತೆಯ ಹೋರಾಟ ರಾಮಕೃಷ್ಣ ಆಚಾರ್ ಅವರನ್ನು ಸಾಧಕರನ್ನಾಗಿ ರೂಪಿಸಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಅವಿಭಜಿತ ದಕ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮಾತನಾಡಿ ಇದು ವಿಶ್ವಕರ್ಮ ಸಮಾಜಕ್ಕೆ ಸಂದ ಗೌರವ. ಕೆಲಸದಲ್ಲಿ ದೇವರನ್ನು ಕಂಡು ಹಲವು ಕುಟುಂಬಗಳಿಗೆ ಅನ್ನದಾತರಾದ ರಾಮಕೃಷ್ಣ ಆಚಾರ್ ಅವರಿಗೆ ಕೇಂದ್ರ ಸರಕಾರದ ಗೌರವಗಳು ಅರಸಿ ಬರಲಿ ಎಂದು ಹಾರೈಸಿದರು.
ಲೆಕ್ಕಪರಿಶೋಧಕ ಎಸ್ ಎಸ್ ನಾಯಕ್ ಶುಭಾಶಯದ ಮಾತುಗಳನ್ನಾಡಿ ವಾರದಲ್ಲಿ ಐದು ದಿನಗಳ ಕೆಲಸ ಕಲ್ಪನೆಯನ್ನು ತಮ್ಮ ಸಂಸ್ಥೆಯಲ್ಲಿ ಅನುಷ್ಠಾನಗೊಳಿಸಿ ,ತೆರಿಗೆ ತಪ್ಪಿಸದೇ ದಾನದ ಸಂಪೂರ್ಣ ಫಲವನ್ನೂ ಪಡೆದ ವ್ಯವಹಾರ ಧರ್ಮದ ರಾಮಕೃಷ್ಣ ಆಚಾರ್ಯ ಮೂಡುಬಿದಿರೆಯನ್ನು ಕೈಗಾರಿಕಾ ಕಾಶಿಯನ್ನಾಗಿಸಿದ ಮಾದರಿ ಸಾಧಕ ಎಂದರು.
ಬಾಲಾಜಿ ಸಮೂಹ ಸಂಸ್ಥೆಯ ಉದ್ಯಮಿ ಕೆ ವಿಶ್ವನಾಥ ಪ್ರಭು ಮಾತನಾಡಿ ತನ್ನ ಉದ್ಯೋಗಿಯಾಗಿದ್ದ ರಾಮಕೃಷ್ಣ ಆಚಾರ್ ಬೆಳೆದ ರೀತಿ ಅಚ್ಚರಿ ಮತ್ತು ಹೆಮ್ಮೆ ಮೂಡಿಸಿದೆ ಎಂದರು.
ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಮಾತನಾಡಿ ರಾಮಕೃಷ್ಣ ಆಚಾರ್ ಬಡತನದ ನಡುವೆಯೂ ಸಾಧಕರಾಗಿ ಮೂಡಿಬಂದು ಎರಡು ದಶಕಗಳ ಹಿಂದೆಯೇ ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಅನುಷ್ಠಾನಕ್ಕೆ ತಂದವರು ಎಂದರು .
ಭದ್ರಾವತಿಯ ಉದ್ಯಮಿ ನಾಗೇಶ್ ,ಮೂಡುಬಿದಿರೆ ನಿಶ್ಮಿತಾ ಸಮೂಹ ಸಂಸ್ಥೆಯ ನಾರಾಯಣ ಪಿಎಂ , ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಉಳಿಯ ಬಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಪೌರಸಮ್ಮಾನ ಸಮಿತಿಯ ಕಾರ್ಯದರ್ಶಿ ಬೆಳುವಾಯಿ ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಪ್ರಾಧ್ಯಾಪಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವಿವಿಧ ಸಂಘ ಸಂಸ್ಥೆಗಳು ಗಣ್ಯರು ಸಾರ್ವಜನಿಕರಿಂದ ಸಮಾರಂಭದ ಕೊನೆಯಲ್ಲಿ ರಾಮಕೃಷ್ಣ ಆಚಾರ್ ಅವರಿಗೆ ಗೌರವಾರ್ಪಣೆ ನಡೆಯಿತು.