ಕಾರ್ಕಳ:  ಫಲವತ್ತಾದ ಮಣ್ಣೇ ಶ್ರೇಷ್ಠ ಸಂಪತ್ತು. ಆ ಮಣ್ಣಿನೊಂದಿಗೆ ನಮಗೆ ಅವಿನಾಭಾವ ಸಂಬಂಧ ಇದ್ದಾಗ ಮಾತ್ರ ಕೆಸರೆಂಬುದು ಆಪ್ತವಾಗುತ್ತಾ ಹೋಗುತ್ತದೆ. ರೈತನೇ ದೇಶವನ್ನು ಕಟ್ಟಬಲ್ಲವನು. ರೈತಾಪಿ ವರ್ಗ ನಿಷ್ಕ್ರಿಯವಾದರೆ ಬದುಕೇ ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ರೈತರ ಕಷ್ಟ, ಕೃಷಿಯಿಂದ ಸಿಗುವ ಆನಂದ ಅನುಭವದ ಮೂಲಕ ಪಡೆಯಬೇಕು ಎಂದು ಹಿರ್ಗಾನ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ  ಸಂತೋಷ್ ಶೆಟ್ಟಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪಶು ವೈದ್ಯರಾದ ಸಾಣೂರಿನ ಜ್ಞಾನದೇವ ಅವರು ಇಂದು ಜಗತ್ತೇ ವಿಷಮಯವಾಗುತ್ತಿದೆ. ಆಹಾರ ಪದಾರ್ಥಗಳೆಲ್ಲ ಕಲುಷಿತಗೊಂಡಿವೆ. ಇಂದಿನ ತುರ್ತು ಅಗತ್ಯ ಸಂಪೂರ್ಣ ಸಾವಯವ ಪ್ರಧಾನವಾದ ಕೃಷಿ ನಡೆಸುವುದಾಗಿದೆ. ಕೃಷಿ ಕಷ್ಟಕರವಾದರೂ ಅದನ್ನು ಇಷ್ಟಪಟ್ಟು ಮಾಡಬೇಕಾಗಿದೆ ಎಂದು ನುಡಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವಥ್ ಎಸ್ ಎಲ್ ರವರು ಮಾತನಾಡಿ ಕೃಷಿ ಮೂಲವೇ ನಾಗರಿಕತೆಯ ಮೂಲ. ಮಣ್ಣು ಕೇವಲ ಕೆಸರಲ್ಲ. ಬದಲಾಗಿ ಅದು ಬದುಕಿನ ಬುತ್ತಿ. ಆಹಾರ ಪದ್ಧತಿ ಕೆಟ್ಟು ಹಿಂದಿನವರ ಆಹಾರ ಕ್ರಮ ಶ್ರೇಷ್ಠವೆಂಬುದನ್ನು ಅರಿಯಬೇಕಾಗಿದೆ ಎಂದರು. 

ಸಹ ಸಂಸ್ಥಾಪಕರಾದ ಡಾ.ಬಿ. ಗಣನಾಥ ಶೆಟ್ಟಿ ರವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕಲಿಕೆಯನ್ನು ರೂಢಿಸಿ ಕೃಷಿ ಚಟುವಟಿಕೆ ನಡೆಸುವ ಮೂಲಕ ಬದುಕಿನ ಪಾಠ ಕಲಿಸಲಾಗುತ್ತಿದೆ. ವಿದ್ಯಾರ್ಥಿಗಳು ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು. ಸಹ ಸಂಸ್ಥಾಪಕರಾದ ಗಣಪತಿ ಭಟ್ ಕೆ .ಎಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಕೃಷಿಕರಾದ ದಿನೇಶ್ ನಾಯಕ್ ಮತ್ತು ವಸಂತ ಪೂಜಾರಿ ಇವರನ್ನು ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ತುಳುನಾಡಿನ ವಿಶೇಷ ತಿಂಡಿ ತಿನಿಸುಗಳನ್ನು ಪರಿಚಯಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.  ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಉಪನ್ಯಾಸಕ ವರ್ಗದವರು, ಊರ ಗಣ್ಯರು ಭಾಗವಹಿಸಿದ್ದರು. ಜೀವಶಾಸ್ತ್ರ ಉಪನ್ಯಾಸಕ ಲೋಹಿತ್ ಎಸ್. ಕೆ. ಕಾರ್ಯಕ್ರಮ ನಿರೂಪಿಸಿದರು. ಎನ್ ಎಸ್ ಎಸ್ ಸಂಯೋಜನಾಧಿಕಾರಿ  ಉಮೇಶ್ ವಂದಿಸಿದರು. 

 ಸಮಾರೋಪ ಸಮಾರಂಭ 

"ಹಸಿರೊಡನೆ ಕಲಿಕೆಯ ಕಲರವ  ಕ್ರಿಯೇಟಿವ್ ಕೆಸರ್ಡೊಂಜಿ  ದಿನ ಕಾರ್ಯಕ್ರಮ"ದ  ಸಮಾರೋಪ ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಹಾಗೂ ಬಂಟ್ಸ್ ಕೋ ಆಪರೇಟಿವ್ ಸೊಸೈಟಿ ಜೋಡುರಸ್ತೆ, ಕಾರ್ಕಳ ಇಲ್ಲಿನ ಅಧ್ಯಕ್ಷರಾದ  ಉದಯಕುಮಾರ್ ಶೆಟ್ಟಿ ಮುನಿಯಾಲು ರವರು ಮಾತನಾಡಿ ಕೃಷಿ ನಮ್ಮ ಮೂಲ ಸಂಸ್ಕೃತಿ ಎಂದು ತಿಳಿಸಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ  ಕೆ ಯೋಗೀಶ್ ಕಿಣಿ, ಮುಖ್ಯೋಪಾಧ್ಯಾಯರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಲಾಯಿ  ಬಾಕ್ಯಾರು, ತೆಳ್ಳಾರು  ಇವರು ಕ್ರಿಯೇಟಿವ್ ಕಾಲೇಜಿನ ಸೃಜನಾತ್ಮಕ ಚಟುವಟಿಕೆಗಳ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ರವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಕೃಷಿಯ ಮಹತ್ವವನ್ನು ಕುರಿತು ತಿಳಿಸಿಕೊಟ್ಟರು. 

ಸಮಾರಂಭದಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರುಗಳಾದ ಡಾ. ಬಿ ಗಣನಾಥ ಶೆಟ್ಟಿ, ಆದರ್ಶ ಎಂ. ಕೆ ರವರು ಉಪಸ್ಥಿತರಿದ್ದರು. 

ಹಿಂದಿ ಭಾಷಾ ಮುಖ್ಯಸ್ಥರಾದ ವಿನಾಯಕ ಜೋಗ್ ರವರು ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ. ಬಿ ಗಣನಾಥ ಶೆಟ್ಟಿ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು, ಊರ ನಾಗರಿಕರು ಭಾಗವಹಿಸಿದ್ದರು.

ಕನ್ನಡ ಭಾಷಾ ಉಪನ್ಯಾಸಕಿ ಪ್ರಿಯಾಂಕ ತೀರ್ಥರಾಮರವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.