ಉಜಿರೆ: ಗ್ರಾಹಕರಿಗೆಉತ್ತಮ ಸೇವೆ ನೀಡುವುದೇ ನಮ್ಮಉದ್ದೇಶವಾಗಿದೆ ಹೊರತು ಕೇವಲ ಲಾಭ ಗಳಿಸುವುದು ಅಲ್ಲಎಂದು ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಅಧ್ಯಕ್ಷ ಹಾಗೂ ಖ್ಯಾತ ವಕೀಲ ಮಂಗಳೂರಿನ ಪಿ.ಪಿ. ಹೆಗ್ಡೆ ಹೇಳಿದರು.

ಉಜಿರೆಯಲ್ಲಿ ಭಾನುವಾರ ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 8 ನೆ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉಜಿರೆ ಶಾಖೆಯಲ್ಲಿ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುವುದು. ಈಗಾಗಲೇ ಶಾಖೆಯಲ್ಲಿ ಎರಡು ಕೋಟಿ ರೂ. ಠೇವಣಿ ಸಂಗ್ರಹವಾಗಿದೆ. ಸದ್ಯದಲ್ಲಿಯೇ ಧರ್ಮಸ್ಥಳ, ಬೆಳ್ತಂಗಡಿ, ವೇಣೂರು ಮತ್ತು ಮಡಂತ್ಯಾರಿನಲ್ಲಿ ಸೊಸೈಟಿಯ ಶಾಖೆಗಳು ಆರಂಭಗೊಳ್ಳುತ್ತವೆ.

2025 ರೊಳಗೆ 25 ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. ಮುಂದೆ 100 ಶಾಖೆಗಳ ಮೂಲಕ 100 ಕೋಟಿ ರೂ. ಠೇವಣಿ ಸಂಗ್ರಹಿಸಲಾಗುವುದು. ಮಹಾವೀರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಂದೆ ಮಹಾವೀರ ಬ್ಯಾಂಕ್ ಆಗಲಿದೆ ಎಂದು ಅವರು ಹೇಳಿದರು.

ಕಾನೂನು ನೆಲೆಯಲ್ಲಿ ಕಕ್ಷಿಗಾರರನ್ನು ದೇವರ ಪ್ರತಿನಿಧಿಗಳೆಂದು ಭಾವಿಸಿತಾನು ಸೇವೆ ಮಾಡುತ್ತೇನೆ. ಪ್ರೀತಿ– ವಿಶ್ವಾಸಕ್ಕಿಂತ ಮಿಗಿಲಾದ ಶಕ್ತಿ ಯಾವುದೂ ಇಲ್ಲ. ಸಮಾಜ ಬಾಂಧವರು ಹಾಗೂ ಗ್ರಾಹಕರ ಪ್ರೀತಿ– ವಿಶ್ವಾಸವೇ ಸೊಸೈಟಿಯ ಪ್ರಗತಿಗೆ ಕಾರಣವಾಗಿದೆ ಎಂದು ಹೇಳಿದರು. ಕಾನೂನಿನ ಚೌಕಟ್ಟಿನೊಳಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ನೂತನ ಶಾಖೆಯನ್ನು ಉದ್ಘಾಟಿಸಿದ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರಿ ಸಂಘಗಳು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿವೆ. ಸಿಬ್ಬಂದಿಗಳು ಎಲ್ಲಾ ಗ್ರಾಹಕರಿಗೆ ಪ್ರೀತಿ– ವಿಶ್ವಾಸದೊಂದಿಗೆ ಸೌಜನ್ಯ ಪೂರ್ಣ ಸೇವೆ ನೀಡಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‍ಕುಮಾರ್, ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂಧರ ಜೈನ್ ಮತ್ತು ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾಆರ್. ಶೆಟ್ಟಿ ಶುಭಾಶಂಸನೆ ಮಾಡಿದರು.

ಕಟ್ಟಡದ ಮೂಲಕ ಬಾಲಕೃಷ್ಣ ಆರಿಪ್ಪಾಡಿತ್ತಾಯ ಅವರನ್ನು ಸನ್ಮಾನಿಸಲಾಯಿತು.

ಮಹಾವೀರ ಕ್ರೆಡಿಟ್ ಸೊಸೈಟಿಯು ಮುಂದೆ ಮಹಾವೀರ ಬ್ಯಾಂಕ್ ಆದಾಗ ತಮ್ಮ ಕಟ್ಟಡದಲ್ಲಿ ಎರಡು ಸಾವಿರ ಚದರ ಅಡಿ ಜಾಗವನ್ನು ಬ್ಯಾಂಕ್‍ಗೆ ಉಚಿತವಾಗಿ ನೀಡುವುದಾಗಿ ಆರಿಪ್ಪಾಡಿತ್ತಾಯರು ಭರವಸೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿರ್ತಾಡಿಯ ಎಸ್.ಡಿ. ಸಂಪತ್ ಸಾಮ್ರಾಜ್ಯ, ಕಳೆದ ವರ್ಷ ಸೊಸೈಟಿ 250 ಕೋಟಿ ರೂ. ವ್ಯವಹಾರ ಮಾಡಿ ಸದಸ್ಯರಿಗೆ ಶೇ.16 ಲಾಭಾಂಶ ನೀಡಲಾಗಿದೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು. ಕೆ. ಸುರೇಶ್ ಜೈನ್ ಧನ್ಯವಾದವಿತ್ತರು. ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.