ಮಂಗಳೂರು: ಮಂಗಳೂರಿನ ಶಕ್ತಿನಗರದ ಶಕ್ತಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕೋತ್ಸವವು ನಡೆಯಿತು. ಈ ಸಂದರ್ಭದಲ್ಲಿ ನಿಟ್ಟೆ ಪದವಿಪೂರ್ವಕಾಲೇಜಿನ ಪ್ರಾಚಾರ್ಯರು ಹಾಗೂ ದ.ಕ. ಜಿಲ್ಲಾ ಪ.ಪೂ ಕಾಲೇಜು ಪ್ರಾಂಶುಪಾಲರ ಸಂಘದ ಅಧಕ್ಷರಾದ ಡಾ. ನವೀನ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ನಂತರ ಅವರು ಮಾತನಾಡಿ ಡಾ. ಕೆ. ಸಿ. ನಾೈಕ್‍ ಒಬ್ಬ ಉದ್ಯಮಿಯಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಶ್ಲಾಘಿಸಿದರು. ಇಂತಹ ಸಾಧನೆಯನ್ನು ನಮ್ಮ ಅನುಕೂಲಕರ ವಾತಾವರಣದಿಂದ ಹೊರಬಂದು ಸವಾಲುಗಳನ್ನು ಎದುರಿಸಲು ಸಿದ್ಧರಾದಾಗ ಮಾತ್ರ ಮಾಡಲು ಸಾಧ್ಯ. ಶಕ್ತಿ ಶಿಕ್ಷಣ ಸಂಸ್ಥೆಯೇ ಒಂದು ದೇವಾಲಯದಂತೆ. ಭಕ್ತಿ, ನಂಬಿಕೆ, ಕಷ್ಟಗಳನ್ನು ಎದುರಿಸುವ ಧೈರ್ಯ ಮೊದಲಾದ ಮೌಲ್ಯಗಳನ್ನು ಮತ್ತು ಬದುಕಿಗೆ ಪೂರಕವಾದ ಶಕ್ತಿಗಳನ್ನು ತುಂಬುವ ವಾತಾವರಣವೇ ಇಲ್ಲಿದೆ. ಯಾವುದೇ ಕೆಲಸವನ್ನು ಮಾಡುವಾಗ ಕೆಲಸದ ಮೇಲೆ ಶ್ರದ್ಧೆ, ನಂಬಿಕೆ, ಪ್ರೀತಿ ಅತೀ ಮುಖ್ಯ. ಆ ಕಾರಣದಿಂದಲೇ ಶಕ್ತಿ ಸಂಸ್ಥೆಯು ಕಡಿಮೆ ಅವಧಿಯಲ್ಲಿಯೇ ಅಧಿಕ ಸಾಧನೆ ಮಾಡಲು ಸಾಧ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಪ್ರತಿಯೊಬ್ಬ ವಿದ್ಯಾರ್ಥಿಯ ಯಶಸ್ಸು ಮುಖ್ಯವೇ ಆಗಿರುತ್ತದೆ. ಇದನ್ನು ಸಾಧಿಸುವಲ್ಲಿ ಪ್ರತೀ ಶಿಕ್ಷಣ ಸಂಸ್ಥೆಗೂ ಮಹತ್ತರವಾದ ಹೊಣೆಗಾರಿಕೆ ಇದ್ದೇ ಇದೆ. ಹೀಗಿರುವಾಗ ಹಲವು ಒತ್ತಡಗಳ ನಡುವೆ ನಕಾರಾತ್ಮಕ ಭಾವನೆಗಳಿಂದ ಹೊರಬಂದು ಧನಾತ್ಮಕವಾಗಿರುವುದು ಕೂಡಾ ಇಂತಹಾ ಯಶಸ್ಸುಗಳಿಗೆ ಸವಾಲಾಗಿರುತ್ತದೆ. ಇದೆಲ್ಲವನ್ನೂ ಮೀರಿಗೆದ್ದಾಗಲೇ ಯಾವುದೇ ಯಶಸ್ಸು ನಮ್ಮದಾಗಲು ಸಾಧ್ಯ ಎಂದು ಹೇಳಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾೈಕ್ ಇಂದಿನ ಶ್ರಮಕ್ಕೆ ನಾಳೆ ಎನ್ನುವುದು ಭರವಸೆ. ಆ ಭರವಸೆಯೇ ನನಗೆ ಇಳಿ ವಯಸ್ಸಿನಲ್ಲಿ ಶಿಕ್ಷಣ ಸಂಸ್ಥೆಯನ್ಧು ಕಟ್ಟಿ ಬೆಳೆಸಲು ಪ್ರೇರಣೆಯಾಗಿದೆ. ನಾನೊಬ್ಬ ಶಿಕ್ಷಣ ಕ್ಷೇತ್ರದ ಸೇವಕನಾಗಿ ಕಾಣಿಸಿಕೊಂಡದ್ದು ಬಹಳ ತಡವಾಗಿ. ಆದರೆ ನನಗೆ ಆ ಅವಕಾಶ ಮಾಡಿಕೊಟ್ಟವರು ವಿದ್ಯಾರ್ಥಿಗಳು ಮತ್ತು ಪೋಷಕರು. ಹಾಗಾಗಿ ಎಲ್ಲರಿಗೂ ನಾನು ಚಿರಋಣಿ. ನನ್ನ ಸಂಸ್ಥೆಯಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶ ಮತ್ತು ತನ್ನ ತಂದೆತಾಯಿಗೆ ದೊಡ್ಡ ಆಸ್ತಿಯಾಗಬೇಕು ಎಂಬುವುದೇ ನನ್ನ ದೊಡ್ಡ ಕನಸು ಎಂದು ಹೇಳಿದರು. 

ಮುಖ್ಯ ಸಲಹೆಗಾರರಾದ ರಮೇಶ್ ಕೆ. ಶಕ್ತಿ ಕಾಲೇಜಿನಲ್ಲಿ ಪಠ್ಯ, ಪಠ್ಯೇತರ ಮತ್ತು ಸ್ಪರ್ಧಾತ್ಮಕ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡಿದೆ. ಆದ್ದರಿಂದಲೇ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ನಮ್ಮ ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿಯೂ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಕ್ಕೆ ವಿವಿಧ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು, ಜೆಇಇ, ನೀಟ್, ಕೆಸಿಇಟಿ ಮೂಲಕ ವಿವಿಧ ಕಾಲೇಜುಗಳಲ್ಲಿ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ  ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ವೆಂಕಟೇಶ್ ಮೂರ್ತಿ ಹೆಚ್ ವಾರ್ಷಿಕ ವರದಿ ವಾಚಿಸಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತ ಸೂರಜ್ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸ್ವಪ್ನ ಸನಿಲ್ ಸ್ವಾಗತಿಸಿದರು. ವಾಣಿಜ್ಯ ಉಪನ್ಯಾಸಕಿ ಮೆಲಿಸ ಲೂವಿಸ್ ವಂದಿಸಿದರು. ಆಂಗ್ಲ ಉಪನ್ಯಾಸಕಿ ಅಶ್ವಿನಿ ಅಂಚನ್‍ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು.