ಮಂಗಳೂರು, ನ. 6: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ದ.ಕ ಜಿಲ್ಲೆಯಲ್ಲಿ ಇ-ಶ್ರಮ್‍ನಲ್ಲಿ ನೋಂದಣಿಯಾದ ಒಟ್ಟು ಸಂಖ್ಯೆಯ ಅಸಂಘಟಿತ ಕಾರ್ಮಿಕರಲ್ಲಿ 4818 ಬಿಪಿಎಲ್ ಕಾರ್ಡ್ ಇಲ್ಲದ ಸಂಘಟಿತ ಕಾರ್ಮಿಕರನ್ನು ಗುರುತಿಸಿ ಸದರಿ ಪಟ್ಟಿಯಲ್ಲಿ ಇರುವ ಇ- ಶ್ರಮ್ ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ಪ್ರಾರಂಭಿಸಿದೆ.

ಪಟ್ಟಿಯಲ್ಲಿರುವ ಗುರುತಿಸಿದ 4818 ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ/ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ / ಗ್ರಾಮ ಒನ್/ ಮಂಗಳೂರು ಒನ್ / ಇವರ ಸಿಬ್ಬಂದಿಗಳು ದೂರವಾಣಿ ಕರೆಮಾಡಿ ಮಾಹಿತಿ ನೀಡುತ್ತಿದ್ದಾರೆ.

ಅರ್ಹ ಕಾರ್ಮಿಕರು ಬಿಪಿಎಲ್ ಕಾರ್ಡ್ ಪಡೆಯಲು ನಿಮ್ಮ ಹತ್ತಿರದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ/ ತಾಲೂಕು ಕಛೇರಿಯಲ್ಲಿರುವ ಆಹಾರ ನಿರೀಕ್ಷಕರು/ ಗ್ರಾಮ ಒನ್/ ಮಂಗಳೂರು ಒನ್‍ಗಳಲ್ಲಿ ಕೂಡಲೇ ಸಂಪರ್ಕಿಸಿ ಪಡಿತರ ಚೀಟಿ ಪಡೆದುಕೊಳ್ಳಲು ತಿಳಿಸಲಾಗಿದೆ. ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ಟ್ಯಾಕ್ಸ್ ಪಾವತಿಸಿದ ರಶೀದಿ/ ಬಾಡಿಗೆ ಕರಾರು ಮತ್ತು ಇ-ಶ್ರಮ್ ಕಾರ್ಡ್ ತೆಗೆದುಕೊಂಡು ಹೋಗುವಂತೆ ಸೂಚಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 1967 ಅಥವಾ ದೂರವಾಣಿ ಸಂಖ್ಯೆ 1800 425 9339 ಸಂಪರ್ಕಿಸುವಂತೆ ಮಂಗಳೂರು ಉಪವಿಭಾಗ ಕಾರ್ಮಿಕ ಅಧಿಕಾರಿ 1&2 ಪ್ರಕಟಣೆಯಲ್ಲಿ ತಿಳಿಸಿದ್ದಾರೆ