ಮಂಗಳೂರು: ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯದ ಓದಿನ ಅಭಿರುಚಿ ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಮಕ್ಕಳ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ ‘ ಅಭಿಯಾನದ ಎಂಟನೇ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ತಲೆಮಾರಿಗೆ ತುಳು ಭಾಷೆಯನ್ನು ಕೊಂಡೊಯ್ಯುವ ಮಹತ್ತರ ಜವಬ್ದಾರಿ ವಿದ್ಯಾರ್ಥಿಗಳಲ್ಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬ್ರಹ್ಮಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪಿ. ದಯಾಕರ್ ಅವರು ಮಾತನಾಡಿ , ತುಳು ಭಾಷೆ , ಸಾಹಿತ್ಯದ , ಸಂಸ್ಕ್ರತಿ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ ಕಾರ್ಯಕ್ರಮ ಒಂದು ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳು ಭಾಷೆಯಲ್ಲಿ ಪ್ರಕಟಗೊಂಡ ಸಾಹಿತ್ಯದ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು ಅನ್ನುವ ಆಶಯದೊಂದಿಗೆ ‘ಬಲೆ ತುಳು ಓದುಗ “ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗುಣವತಿ ರಮೇಶ್, ಕನ್ನಡ ಭಾಷಾ ಶಿಕ್ಷಕಿ ಅಕ್ಷತಾ ಕೇಶವ್ , ಪತ್ರಕರ್ತ ರಮೇಶ್ ಮಂಜೇಶ್ವರ , ವಿದ್ಯಾರ್ಥಿ ಸಂಚಾಲಕಿ ವಿನ್ಯ ದಯಾನಂದ ಸಾಲ್ಯಾನ್ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ಸದಸ್ಯ ಬೂಬ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರೌಢಶಾಲೆಯ 30 ವಿದ್ಯಾರ್ಥಿಗಳು ಅಕಾಡೆಮಿಯ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ಸಂಜೆಯ ಸಮಾರೋಪ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.