ಮಂಗಳೂರು:  ಇಂದಿನ ದಿನಗಳಲ್ಲಿ  ವಿದ್ಯಾರ್ಥಿಗಳೇ ಹೆಚ್ಚಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಅಘಾತಕಾರಿ ಸಂಗತಿ.  ಭವಿಷ್ಯವನ್ನೇ ಹೊಸಕಿ ಹಾಕುತ್ತಿರುವ ಮಾದಕ ವಸ್ತುಗಳ ವಿರುದ್ಧ ಹೋರಾಡುವುದು ಅಗತ್ಯವಾಗಿದೆ ಎಂದು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಕರೆ ನೀಡಿದ್ದಾರೆ.

ಅವರು ಗುರುವಾರ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೆನ್‌ಲಾಕ್ ಜಿಲ್ಲಾಸ್ಪತ್ರೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ಲಿಂಕ್ ವ್ಯಸನಮುಕ್ತ ಸಮಗ್ರ ಪುನರ್ವಸತಿ ಕೇಂದ್ರ  ಇವರ ಸಂಯುಕ್ತ ಆಶ್ರಯದಲ್ಲಿ ನಡೆದ  ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಪ್ರಯುಕ್ತ  'ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಾದಕ ವ್ಯಸನಗಳಿಂದ  ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ, ವಿದ್ಯಾರ್ಥಿಗಳು ಮುಂದಿನ ಉತ್ತಮ ಭವಿಷ್ಯಕ್ಕಾಗಿ ಒಳಿತನ್ನು ಮಾತ್ರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಶ್ಚಟಗಳ ವಿರುದ್ಧ ಜೋಳಿಗೆ ಹಿಡಿದು ಹೋರಾಡಿದ ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.  

ಅನಿಯಂತ್ರಿತ ಮೊಬೈಲ್ ವೀಕ್ಷಣೆ ಕೂಡಾ ವ್ಯಸನ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಡಾ. ಎಚ್.ಆರ್‍ತಿಮ್ಮಯ್ಯ ಮಾತನಾಡಿ,  ಯಾವುದೇ ಒಂದು ಅಭ್ಯಾಸವನ್ನು ಬಿಡಲು ಸಾಧ್ಯವಾಗದೆ ಇರುವುದೇ ವ್ಯಸನವಾಗಿದೆ. ನಿರಂತರವಾಗಿ ಮೊಬೈಲ್ ವೀಕ್ಷಿಸುವುದೂ ವ್ಯಸನವಾಗಿದೆ. ಇಂದು ಪುಟ್ಟ ಮಕ್ಕಳಿಗೆ ಆಹಾರ ತಿನ್ನಿಸಲು ಕೂಡಾ ಅವರ ಕೈಗೆ ಮೊಬೈಲ್ ನೀಡುವ ಮೂಲಕ ಹೆತ್ತವರು ತಮ್ಮ ಮಕ್ಕಳನ್ನು ವ್ಯಸನಿಗಳನ್ನಾಗಿಸುತ್ತಿದ್ದಾರೆ. ಇದರಿಂದ ಆ ಮಗು ಇತರೆ ಆಟ ಮತ್ತು ಬಾಲ್ಯ ಸಹಜ ಚಟುವಟಿಕೆಗಳಿಂದ ದೂರ ಸರಿಯುವಂತಾಗಿದೆ. ಇದು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಳಿಗೆ  ಸಮಸ್ಯೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ, ಮತ್ತು ಲಿಂಕ್ ಆಡಳಿತಾಧಿಕಾರಿ ಲಿಡಿಯಾ ಲೋಬೋ ಮಾತನಾಡಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ಸುದರ್ಶನ್‍ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.  ಮನೋರೋಗ ತಜ್ಞೆ ಡಾ. ಪ್ರಜಾಕ್ತಾ ಉಪಸ್ಥಿತರಿದ್ದರು.  ಫಾದರ್ ಮುಲ್ಲರ್‍ ಆಸ್ಪತ್ರೆಯ ಮನೋರೋಗ ತಜ್ಞೆ ಡಾ. ಅರುಣಾ ಎಡಿಯಾಲ್‍ ಅವರು ಉಪನ್ಯಾಸ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಲಿಂಕ್ ವತಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ  ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನಗಳನ್ನು ವಿತರಿಸಲಾಯಿತು. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೇಪಾಡಿ ವಂದಿಸಿದರು. ರುಚಿತಾ ಕಾರ್ಯಕ್ರಮ ನಿರೂಪಿಸಿದರು.