ಮಂಗಳೂರು: ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ಎಂ.ಸಿ. ವೇಣುಗೋಪಾಲ್ ಅವರು ಬುಧವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಸರ್ಕಾರದ ವಿವಿಧ ಇಲಾಖೆಗೆ ನಾಮನಿರ್ದೇಶನಗೊಂಡ ಜಿಲ್ಲೆಯ ಸದಸ್ಯರ ಜೊತೆ ಸಮಾಲೋಚನೆ ನಡೆಸಿದರು. 

ಬಳಿಕ ಮಾತನಾಡಿದ ಅವರು, ದ.ಕ. ಜಿಲ್ಲೆಯ ನಾಯಕರಿಗೆ ಕಾಂಗ್ರೆಸ್ ಪಕ್ಷವು ಹಲವು ರೀತಿಯ ಸ್ಥಾನಮಾನ ನೀಡಿದೆ. ಜಿಲ್ಲೆಯ ನಾಯಕರು, ಕಾರ್ಯಕರ್ತರಿಗೆ ಪಕ್ಷದ ಮೇಲೆ ನಿಷ್ಠೆಯಿದ್ದು, ಅದನ್ನು ಮತ್ತಷ್ಟು ಪಕ್ಷ ಸಂಘಟನೆಗೆ ವಿನಿಯೋಗಿಸಿಕೊಳ್ಳಬೇಕು. ಪಕ್ಷ ನಮಗೆ ಅಧಿಕಾರ ನೀಡಿದ ಸಂದರ್ಭ ಜನಸೇವೆ ಮಾಡುವುದರ ಜೊತೆಗೆ ಪಕ್ಷವನ್ನು ಸದೃಢಗೊಳಿಸಿ ಸಂಘಟನೆ ಮಾಡುವುದಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.

ಉಪಚುನಾವಣೆ ಸನಿಹದಲ್ಲೇ ಇರುವುದರಿಂದ ಹೆಚ್ಚು ಸಭೆ ನಡೆಸುವ ಬದಲು ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ ಮತದಾರರನ್ನು ಭೇಟಿ ಮಾಡುವ ಮೂಲಕ ಮತವಾಗಿ ಪರಿವರ್ತಿಸಬೇಕು. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಜನಸಾಮಾನ್ಯರಿಗೆ ಬೂತ್ ಮಟ್ಟದಲ್ಲಿ ತಲುಪಿಸಲು ಕ್ರಮವಹಿಸಬೇಕು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಮತ್ತಷ್ಟು ಒತ್ತು ನೀಡಿ ಕಾಂಗ್ರೆಸ್ ಗತವೈಭವ ಮರುಕಳಿಸಲು ಶ್ರಮವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭ ಮಾಜಿ ಸಚಿವ ಬಿ.ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ.ಬಾವ, ಪದ್ಮರಾಜ್.ಆರ್, ಸದಾಶಿವ್ ಉಳ್ಳಾಲ್, ಮಮತಾ ಗಟ್ಟಿ, ಭರತ್ ಮುಂಡೋಡಿ, ಮನೋರಾಜ್ ರಾಜೀವ, ಜೋಕಿಂ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.  ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಸ್ವಾಗತಿಸಿದರು. ಡಿಸಿಸಿ ಉಪಾಧ್ಯಕ್ಷ ಶುಭೋದಯ ಆಳ್ವ ವಂದಿಸಿದರು.