ಮಂಗಳೂರು: ಶಕ್ತಿನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ಶಕ್ತಿ ಪೂರ್ವ ಪ್ರಾಥಮಿಕ ಮತ್ತು ಶಕ್ತಿ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜರುಗಿತು. 

ಈ ಸಮಾರಂಭದಲ್ಲಿ ರೂಪ ಬಾಳಿಗ ಆಡಳಿತಾಧಿಕಾರಿ ಹಾಗೂ ಪ್ರಾಂಶುಪಾಲರು ಟ್ರೀ ಹೌಸ್ ಶಾಲೆ ಮಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೀಪವನ್ನು ಬೆಳಗಿಸಿ ನಂತರ ಮಾತನಾಡಿದ ಅವರು ಶಕ್ತಿ ವಸತಿ ಶಾಲೆಯಲ್ಲಿರುವ ಈ ಪ್ರೋತ್ಸಾಹದಾಯಕ ಮತ್ತು ಕಲಿಕೆಗೆ ಸ್ಪೂರ್ತಿ ನೀಡುವ ಈ ವಾತಾವರಣವನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಮಕ್ಕಳಲ್ಲಿರುವ ಮೌಲ್ಯ ಮತ್ತು ಉತ್ತಮ ಗುಣಗಳು ನನ್ನನ್ನು ಆಕರ್ಷಿಸಿದವು. ಪೋಷಕರು, ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರೆಲ್ಲರು ಮಕ್ಕಳಿಗೆ ನಿರ್ಭೀತಿಯಿಂದ ಬೆಳೆಯಲು ಸ್ವಾತಂತ್ರ್ಯವನ್ನು ಕಲ್ಪಿಸಬೇಕು. ಇದು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಶಿಕ್ಷಣ ಕೇವಲ ಪರೀಕ್ಷೆ ನಡೆಸುವುದು ಮತ್ತು ಅಂಕಗಳಿಸುವುದು ಅಷ್ಟೆ ಅಲ್ಲ, ಅವರಲ್ಲಿರುವ ಪ್ರತಿಭೆಯನ್ನು ಹೊರತೆಗೆಯಲು ಸಹಕರಿಸುವುದೇ ಶಿಕ್ಷಣ. ಜೀವನದಲ್ಲಿ ಬರುವ ಸೋಲು ಗೆಲುವು ಎಲ್ಲವನ್ನು ಸಮಾನವಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬ ಮಗು ವಿಶೇಷವಾದ ಗುಣಗಳನ್ನು ಹೊಂದಿರುತ್ತದೆ. ಈ ಶಕ್ತಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸಿಗುವ ಶಿಕ್ಷಣ, ಮೌಲ್ಯ ಮತ್ತು ಸಂಸ್ಕಾರ ನಿಜಕ್ಕೂ ಶ್ಲಾಘಿಸುವಂತದ್ದು. ಶಕ್ತಿ ವಿದ್ಯಾ ಸಂಸ್ಥೆಯು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಬೇಕಾದ ಶಿಕ್ಷಣವನ್ನು ನೀಡುತ್ತಿರುವ ಶಾಲಾ ಆಡಳಿತ ಮಂಡಳಿಯ ಕಾರ್ಯವನ್ನು ನಾನು ಮನಸ್ಪೂರ್ತಿಯಾಗಿ ಅಭಿನಂದಿಸುತ್ತೇನೆ. ಈ ಸಂಸ್ಥೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸದೃಢರಾಗಿ ಭವಿಷ್ಯದ ಪ್ರಜೆಗಳಾಗಿ ಹೊರಹೊಮ್ಮಲಿ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ  ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾೈಕ್ ರವರು ಮಾತನಾಡಿ ನಮ್ಮ ಈ ಸಂಸ್ಥೆಯ ಯಶಸ್ಸಿಗೆ ಪೋಷಕರ ಸಹಕಾರವು ಮಹತ್ತರವಾದದ್ದು. ನಿಮ್ಮೆಲರ ಸಲಹೆ- ಸಹಕಾರಗಳನ್ನು ನಾನು ಒಪ್ಪಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದ್ದೇನೆ. ಈ ವಾರ್ಷಿಕೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಪೋಷಕರನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಮುಂದಿನ ದಿನಗಳಲ್ಲಿಯೂ ನಿಮ್ಮೆಲ್ಲರ ಸಹಕಾರವನ್ನು ಕೋರುತ್ತೇನೆ ಎಂದು ಮಾತಿಗೆ ವಿರಾಮ ನೀಡಿದರು.                        

ಈ ಸಂಧರ್ಭದಲ್ಲಿ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವರದಿ ವಾಚನವನ್ನು ಸಂಸ್ಥೆಯ ಪ್ರಾಂಶುಪಾಲೆ ಬಬಿತಾ ಸೂರಜ್ ಹಾಗೂ ಶಕ್ತಿ ಪೂರ್ವ ಪ್ರಾಥಮಿಕ ಶಾಲಾ ಸಂಯೋಜಕಿ ಸುಷ್ಮ ರವರು ವಾರ್ಷಿಕ ವರದಿವಾಚನವನ್ನು ನೇರವೇರಿಸಿದರು. ಈ ಸಂಧರ್ಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ ಮತ್ತು ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ ಹೆಚ್ ಉಪಸ್ಥಿತರಿದ್ದರು. 

ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಶಕ್ತಿ ಪೂರ್ವ ಪ್ರಾಥಮಿಕ ಶಾಲಾ ಸಂಯೋಜಕಿ ಸುಷ್ಮರವರು ನೇರವೇರಿಸಿದರೆ, ಶಿಕ್ಷಕಿ ಆ್ಯನೆಟ್‍ರವರು ಧನ್ಯವಾದವನ್ನು ಸಲ್ಲಿಸಿದರು. ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಶ್ವೇತ ಶೆಟ್ಟಿ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃಾತಿಕ ಕಾರ್ಯಕ್ರಮಗಳು ಜರುಗಿದವು.