ಮಂಗಳೂರು: ಬೆಂಗಳೂರಿನ ನ್ಯಾಶನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಜಿಜ್ಞಾಸಾ ತಂಡದ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಹಕಾರದೊಂದಿಗೆ ಗುರುವಾರ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಜಿಲ್ಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ವಿಜ್ಞಾನ ಚಟುವಟಿಕೆಗಳ ಬಗ್ಗೆ ಕಾರ್ಯಾಗಾರ ನಡೆಯಿತು.
ಬೆಂಗಳೂರಿನ ನ್ಯಾಶನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್, ಮುಖ್ಯ ವಿಜ್ಞಾನಿ ಮತ್ತು ಡೆಪ್ಯುಟಿ ಹೆಡ್ ಡಿಟಿಎಸ್, ಸಿಎಸ್‍ಐಆರ್, ಜಿಜ್ಞಾಸಾ ತಂಡದ ನೋಡಲ್ ಅಧಿಕಾರಿ ಡಾ| ವಿಪಿಎಸ್ ನಾಯ್ಡು, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ಅತೀ ಮುಖ್ಯವಾದ ಹಂತದಲ್ಲಿ ನಾವಿಂದು ಪ್ರಯತ್ನಗಳನ್ನು ಕೈಗೊಳ್ಳಬೇಕಾಗಿದೆ. ಇದಕ್ಕಾಗಿ ಜಿಜ್ಞಾಸಾ ತಂಡ ಕೇಂದ್ರದಲ್ಲಿ ಹಾಗೂ ಇತರೆಡೆಗಳಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಾ ಕಾರ್ಯಾಗಾರಗಳನ್ನು ಏರ್ಪಡಿಸುತ್ತಿದೆ. ಮುಖ್ಯವಾಗಿ ಅಂತರಿಕ್ಷಯಾನ ದಂತಹ ಕೆಲವು ನಿರ್ಣಾಯಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ವಿದ್ಯಾರ್ಥಿಗಳು ಗಮನಿಸಿ ಮುಂದೆ ತಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಕಾರ್ಯೋನ್ಮುಖರಾಗಬೇಕೆಂದು ಕರೆಯಿತ್ತರು.
ಅತಿಥಿಗಳಾಗಿ ಭಾಗವಹಿಸಿದ್ದ ತಂಡದ ಡಾ| ಎಸ್ ಟಿ ಅರುಣಾ ಹೆಡ್, ಡಿಟಿಎಸ್ ಇವರು ಪ್ರಕೃತಿಯಲ್ಲಿ ನ್ಯಾನೋ ತಂತ್ರಜ್ಞಾನದ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಜಿಜ್ಞಾಸಾ ತಂಡದ ಸಹಕಾರವನ್ನು ಪ್ರಶಂಶಿಸುತ್ತಾ ಇಂತಹ ಕಾರ್ಯಾಗಾರಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಹೊರಗೆ ಚಿಂತಿಸುವ ಅವಕಾಶಗಳನ್ನು ನೀಡುತ್ತವೆ ಎಂದರು.
ತಂಡದ ಪ್ರಾಜೆಕ್ಟ್ ಅಸೋಸಿಯೇಟ್ ಆದರ್ಶ್, ಮತ್ತು ಆಡಳಿತ ಸಹಾಯಕ ಸೂರ್ಯ ಕಾರ್ಯಕ್ರಮದಲ್ಲಿ ಸಹಕರಿಸಿದರು. ಡ್ರೋನ್ ಶೋ ಬಗ್ಗೆ ವೀಡಿಯೋ ಮಾಹಿತಿ ನೀಡಿ, ಡ್ರೋನ್ ಶೋ ಸಹ ನಡೆಸಲಾಯಿತು.
ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು, ಇನ್ನೊವೇಶನ್ ಹಬ್‍ನ ಮೆಂಟರ್ ಹೇಮಂತ್ ಸ್ವಾಗತಿಸಿದರು, ಶೈಕ್ಷಣಿಕ ಸಹಾಯಕಿ ರಶ್ಮಿ ವಂದಿಸಿದರು.