ಮಂಗಳೂರಿನ ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಘೋಷಿಸಲ್ಪಟ್ಟು, ಅಂತ್ಯಸಂಸ್ಕಾರದ ಕಟ್ಟಿಗೆಯ ಮೇಲೆ ಇಡಬೇಕೆನ್ನುವಷ್ಟರಲ್ಲಿ ಜೀವಂತವಾಗಿದ್ದು, ಕುಟುಂಬಕ್ಕೆ ಶಾಕ್ ಮತ್ತು ಸಂತಸವನ್ನು ನೀಡಿದ ವಿಚಿತ್ರ ಘಟನೆ ನಡೆದಿದೆ.

ಅಕ್ಟೋಬರ್ 16 ರಂದು ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿಗೆ ದಾಖಲಾಗಿದ್ದ 69 ವರ್ಷದ ರಘುನಾಥ ಗಟ್ಟಿಯವರು, ಅಕ್ಟೋಬರ್ 19 ರ ಸಂಜೆ ‘ಮೃತರಾಗಿದ್ದಾರೆ’ ಎಂದು ವೈದ್ಯರು ಘೋಷಿಸಿದರು. ಕುಟುಂಬಸ್ಥರು ಮರುದಿನ ಬೆಳಿಗ್ಗೆ ಮೃತದೇಹವನ್ನು ತೆಗೆದುಕೊಂಡು ಹೋಗುವುದಾಗಿ ತಿಳಿಸಿದ ಬಳಿಕ, ಆಸ್ಪತ್ರೆಯ ಸಿಬ್ಬಂದಿ ರಘುನಾಥ್ ಅವರ ದೇಹವನ್ನು ರಾತ್ರಿಯಿಡೀ ಶವಾಗಾರದಲ್ಲಿ ಇರಿಸಿದ್ದರು!

ಮರುದಿನ ಬೆಳಿಗ್ಗೆ, ಕುಂಬಳೆಯ ಕಂಚಿಕಟ್ಟೆಯಲ್ಲಿರುವ ಮನೆಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಯಿತು. ಕುಟುಂಬಸ್ಥರು ಮತ್ತು ನೆಂಟರು ಸೇರಿ ಅಂತ್ಯಸಂಸ್ಕಾರದ ಎಲ್ಲ ಸಿದ್ಧತೆಗಳನ್ನು ಮುಗಿಸಿದ್ದರು. ಇನ್ನು ಅಂತಿಮ ವಿಧಿವಿಧಾನಗಳನ್ನು ಮುಗಿಸಿ, ದೇಹವನ್ನು ಚಿತೆಯ ಮೇಲೆ ಇರಿಸಬೇಕು ಎನ್ನುವಷ್ಟರಲ್ಲಿ… ಅಲ್ಲಿದ್ದ ಜನರಿಗೆ ಒಂದು ಅಚ್ಚರಿಯ ದೃಶ್ಯ ಎದುರಾಯಿತು!

ಮರಣಶಯ್ಯೆಯ ಮೇಲೆ ಮಲಗಿದ್ದ ರಘುನಾಥ ಗಟ್ಟಿ ಅವರು ತಮ್ಮ ತಲೆ ಮತ್ತು ಕಾಲುಗಳನ್ನು ನಿಧಾನವಾಗಿ ಅಲ್ಲಾಡಿಸಲು ಶುರು ಮಾಡಿದರು! ಸಾವು ಖಚಿತ ಎಂದು ತಿಳಿದಿದ್ದ ಕುಟುಂಬಸ್ಥರು ಈ ದೃಶ್ಯ ನೋಡಿ ಒಂದು ಕ್ಷಣ ದಿಗ್ಭ್ರಮೆಗೊಂಡರು. ಕೂಡಲೇ ಎಚ್ಚೆತ್ತುಕೊಂಡ ಅವರು, ರಘುನಾಥ ಗಟ್ಟಿ ಅವರನ್ನು ತಕ್ಷಣ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರು.