ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸಹಕಾರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಶ್ರೇಯೋಭಿವೃದ್ಧಿಯ ಆರ್ಥಿಕ ಶಕ್ತಿ ಆಗಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ತನ್ನ ಸದಸ್ಯರೆಲ್ಲರ ಸಂಪೂರ್ಣ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ಸಂಘವು 2024-25ನೇ ಸಾಲಿನಲ್ಲಿ ರೂ.95.32 ಲಕ್ಷ ಲಾಭ ಗಳಿಸಿ ,ತನ್ನ ಸದಸ್ಯರಿಗೆ ಶೇ.20 ಡಿವಿಡೆಂಡ್ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಸ್. ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.
ನಗರದ ಕೊಡಿಯಾಲ್ ಬೈಲ್ ಪಿವಿಎಸ್ ಕಲಾಕುಂಜದ ಬಳಿ ಇರುವ ಸಂಘದ ಪ್ರಧಾನ ಕಛೇರಿಯ ಸಪ್ತವರ್ಣ ಸಭಾಂಗಣದಲ್ಲಿ ಶನಿವಾರ ನಡೆದ 94ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಎಸ್. ಜಗದೀಶ್ಚಂದ್ರ ಅಂಚನ್ ಮಾತನಾಡಿದರು. ಸಂಘಕ್ಕೆ ನೌಕರ ಸದಸ್ಯರೇ ಜೀವಾಳ. ಸಂಘದ ವ್ಯವಹಾರ ಅಭಿವೃದ್ಧಿಯಲ್ಲಿ ಸದಸ್ಯರೆಲ್ಲರ ಬೆಂಬಲ, ಪ್ರೋತ್ಸಾಹ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರೆಲ್ಲರ ಸಂಘಟಿತ ಕಾರ್ಯನಿರ್ವಹಣೆಯಿಂದ ಸಂಘವು ಸಾಕಷ್ಟು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿದೆ ಎಂದರು.
ರೂ. 177.23 ಕೋಟಿ ವ್ಯವಹಾರ : ಸಹಕಾರ ಸಂಘಗಳ ನೌಕರ ಸದಸ್ಯರುಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿಯನ್ನು ನೀಡಿಯೂ ಸಂಘವು ವರದಿ ವರ್ಷದಲ್ಲಿ ಅತ್ಯಧಿಕ ಲಾಭವನ್ನು ಗಳಿಸಿದೆ . ಸಂಘವು 1140 ಮಂದಿ ಸದಸ್ಯರನ್ನು ಹೊಂದಿದೆ . ವರದಿ ವರ್ಷದಲ್ಲಿ ಸಂಘವು ರೂ.34.02 ಲಕ್ಷ ಪಾಲು ಬಂಡವಾಳವನ್ನು ಹೊಂದಿದ್ದು, ರೂ. 5.54 ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಠೇವಣಿ ಸಂಗ್ರಹಣೆಯಲ್ಲೂ ಸಂಘವು ಗಮನಾರ್ಹ ಸಾಧನೆಗೈದಿದೆ. ಕಳೆದ ವರ್ಷಾಂತ್ಯಕ್ಕೆ ಠೇವಣಿ ರೂ. 88.96 ಕೋಟಿಯಿಂದ ವರದಿ ವರ್ಷದಲ್ಲಿ ರೂ.94.33 ಕೋಟಿಗೆ ಏರಿಕೆಯಾಗಿದೆ . ಸಾಲ ಮುಂಗಡದಲ್ಲೂ ಏರಿಕೆಯಾಗಿದ್ದು ರೂ. 74.64 ಕೋಟಿಯಿಂದ ರೂ.82.90 ಕೋಟಿಗೆ ಹೆಚ್ಚಳವಾಗಿದೆ. ಸಂಘದ ಒಟ್ಟು ವ್ಯವಹಾರವೂ ಕೂಡ ರೂ.163.60 ಕೋಟಿಯಿಂದ ರೂ. 177.23 ಕೋಟಿಗೆ ಏರಿಕೆಯಾಗಿದೆ ಎಂದು ಜಗದೀಶ್ಚಂದ್ರ ಅಂಚನ್ ತಿಳಿಸಿದರು.
ಸತತ 8ನೇ ಬಾರಿ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ: ಸಂಘದ ಪ್ರಗತಿಯನ್ನು ಗುರುತಿಸಿ ಎಸ್ ಸಿಡಿಸಿಸಿ ಬ್ಯಾಂಕ್ ಕಳೆದ 7 ವರ್ಷಗಳಿಂದ ( 2017-18, 2018-19, 2019-20 , 2020-21, 2021-22, 2022-23 ,2023-24) ಸಾಧನಾ ಪ್ರಶಸ್ತಿಯನ್ನು ನೀಡುತ್ತಿದೆ. 2024-25ನೇ ಸಾಲಿನಲ್ಲೂ ಸಂಘವು ಎಸ್ ಸಿಡಿಸಿಸಿ ಬ್ಯಾಂಕಿನ ಸಾಧನಾ ಪ್ರಶಸ್ತಿಗೆ ಪಾತ್ರವಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಸತತ 8ನೇ ಬಾರಿ ಪಡೆದ ಹೆಗ್ಗಳಿಕೆಗೆ ಸಂಘವು ಪಾತ್ರವಾಗಿದೆ ಎಂದು ಅವರು ತಿಳಿಸಿದರು.
ಡಾ.ಎಂಎನ್ಆರ್ ಮಾರ್ಗದರ್ಶಕರು: ಸಂಘವು ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸಹಕಾರ ರಂಗದ ಅಗ್ರಗಣ್ಯ ನಾಯಕರಾದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರು ಮುಖ್ಯ ಕಾರಣಕರ್ತರಾಗಿದ್ದಾರೆ. ಅವರ ಸೂಕ್ತ ಸಲಹೆ , ಮಾರ್ಗದರ್ಶನದಿಂದಲೇ ಸಂಘವು ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಆಡಳಿತ ಕಚೇರಿ ಸೇರಿದಂತೆ ಕೊಡಿಯಾಲ್ ಬೈಲ್ ಶಾಖೆ ಹಾಗೂ ಸಂಪೂರ್ಣ ಹವಾನಿಯಂತ್ರಿತ ಸಪ್ತವರ್ಣ ಸಭಾಭವನ ಇರುವ ಮೂರು ಮಹಡಿಯ ಸುಸಜ್ಜಿತ 'ಉನ್ನತಿ ' ಸ್ವಂತ ಕಟ್ಟಡವನ್ನು ಹೊಂದಲು ಸಾಧ್ಯವಾಗಿದೆ. ಅವರಿಗೆ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಜಗದೀಶ್ಚಂದ್ರ ಅಂಚನ್ ಕೃತಜ್ಞತೆಯನ್ನು ಸಲ್ಲಿಸಿದರು.
ಪ್ರತಿಭಾ ಪುರಸ್ಕಾರ: ಸಂಘವು ಪ್ರತಿವರ್ಷ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಸದಸ್ಯರ ಮಕ್ಕಳನ್ನು ಪುರಸ್ಕರಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ವಾರ್ಷಿಕ ಮಹಾಸಭೆಯಲ್ಲಿ ಹಮ್ಮಿಕೊಂಡು ಬರುತ್ತಿದ್ದು, ಈ ಬಾರಿ ಶೇ.70ಕ್ಕಿಂತ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ ಒಟ್ಟು 50 ಪ್ರತಿಭಾನ್ವಿತ ಮಕ್ಕಳಿಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಗೋಪಾಲಕೃಷ್ಣ ಭಟ್ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಪ್ರೋತ್ಸಾಹ ಧನವನ್ನು ನೀಡಿ ಪುರಸ್ಕರಿಸಲಾಯಿತು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸಂಘವು ಸತತ ನಾಲ್ಕು ವರ್ಷಗಳಿಂದ ನಡೆಸುತ್ತಾ ಬಂದಿದೆ.
ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ರಾಘವ ಆರ್ ಉಚ್ಚಿಲ್, ನಿರ್ದೇಶಕರುಗಳಾದ ದಿವಾಕರ ಶೆಟ್ಟಿ ಕೆ, ವಿಶ್ವೇಶ್ವರ ಐತಾಳ್ , ಜಯಪ್ರಕಾಶ್ ರೈ ಸಿ, ಗಿರಿಧರ್ ಕೆ, ವಿಶ್ವನಾಥ ಕೆ ಟಿ, ಶಿವಾನಂದ ಪಿ, ಚಂದ್ರಕಲಾ ಕೆ., ಮೋಹನ್ ಎನ್ , ವಿಶ್ವನಾಥ್ ಎನ್. ಅಮೀನ್, ಗೀತಾಕ್ಷಿ , ಕಿರಣ್ ಕುಮಾರ್ ಶೆಟ್ಟಿ , ನಿಶಿತಾ ಜಯರಾಮ್, ಪ್ರೇಮ್ ರಾಜ್ ಭಂಡಾರಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ , ಸಂಘದ 2024-25ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪತ್ರವನ್ನು ಮಂಡಿಸಿದರು. ಉಪಾಧ್ಯಕ್ಷರಾದ ರಾಘವ ಆರ್ ಉಚ್ಚಿಲ್ ವಂದಿಸಿದರು.