ಮಂಗಳೂರು:  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ದಕ್ಷಿಣಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಸನ್ಮಾನಿಸಿದರು.

ವಾಣಿಜ್ಯ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಕೆನರಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ದೀಪಶ್ರೀ  ಹಾಗೂ ವಿಜ್ಞಾನ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಎಕ್ಸ್ ಪರ್ಟ್‍ ಕಾಲೇಜಿನ ಅಮೂಲ್ಯ ಕಾಮತ್‍ ಅವರನ್ನು ಮಂಗಳವಾರ ಮಧ್ಯಾಹ್ನ ಫಲಿತಾಂಶ ಬಂದ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಕರೆಸಿದ ಜಿಲ್ಲಾಧಿಕಾರಿಗಳು ಶಾಲು ಹೊದಿಸಿ, ಹಾರ ಫಲಪುಷ್ಪ ನೀಡಿ ಸನ್ಮಾನಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ಆನಂದ್‍ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಳಿಕ ವಿದ್ಯಾರ್ಥಿಗಳೊಂದಿಗೆ ಅವರು ಸಮಾಲೋಚನೆ ನಡೆಸಿ, ಕಲಿಕಾ ವಿಧಾನ, ಅಧ್ಯಯನ, ಶ್ರದ್ಧೆ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಸಾಧನೆಗೆ ಬೆನ್ನೆಲುಬಾಗಿ ನಿಂತ ಪಾಲಕರು, ಶಿಕ್ಷಕರನ್ನು ಜಿಲ್ಲಾಧಿಕಾರಿಗಳು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅಮೂಲ್ಯ ಕಾಮತ್ ಪಾಲಕರಾದ ಡಾ.ದಿನೇಶ್‍ ಕಾಮತ್ ಮತ್ತು ಡಾ. ಅನುರಾಧ ಕಾಮತ್, ದೀಪಶ್ರೀ ಪಾಲಕರಾದ ಅಶೋಕ್‍ ಎಸ್. ಮತ್ತು ಸುಮಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಎಚ್.ಜಿ., ಇಲಾಖೆಯ ಶಾಖಾಧಿಕಾರಿ ನಿತಿನ್ ಶೆಟ್ಟಿ, ಕೆನರಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಲತಾ ಮಹೇಶ್ವರಿ, ಎಕ್ಸ್ ಪರ್ಟ್‍ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ಭಟ್ ಮತ್ತಿತರರು ಇದ್ದರು