ಮಂಗಳೂರು ಫೆ.18: ಕರ್ನಾಟಕ ರಾಜ್ಯ ಹಜ್ ಸಮಿತಿ ವತಿಯಿಂದ ಈ ವರ್ಷ ಹಜ್‍ಯಾತ್ರೆ ಕೈಗೊಳ್ಳುವ ದಕ್ಷಿಣಕನ್ನಡ ಜಿಲ್ಲೆಯ ಯಾತ್ರಾರ್ಥಿಗಳಿಗೆ ತರಬೇತಿ ಶಿಬಿರ ಮಂಗಳವಾರ ನಗರದ ಇಂಡಿಯನ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು.
ದಕ್ಷಿಣಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಮಾತನಾಡಿ, ಹಿಂದೆ ಮಂಗಳೂರಿನಿಂದಲೇ ಹಜ್‍ಯಾತ್ರೆಗೆ ಸಂಚರಿಸುತ್ತಿದ್ದ ನೇರ ವಿಮಾನಯಾನ ಕೋವಿಡ್ ಬಳಿಕ ಸ್ಥಗಿತಗೊಂಡಿದೆ. ಇದನ್ನು ಪುನರಾರಂಭಿಸಲು ಕೇಂದ್ರ ಸರಕಾರಕ್ಕೆ ನಿರಂತರ ಮನವಿ ಮಾಡಲಾಗಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡಿನ 5 ಜಿಲ್ಲೆಗಳ ಹಜ್ ಯಾತ್ರಿಗಳಿಗೆ ಇದರಿಂದ ಬಹಳಷ್ಟು ನೆರವಾಗಲಿದೆ ಎಂದು ಹೇಳಿದರು. ಮಂಗಳೂರಿನಲ್ಲಿ ಹಜ್ ಭವನ ನಿರ್ಮಿಸಲು ಈಗಾಗಲೇ ಜಮೀನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಧಾರ್ಮಿಕ ವಿದ್ವಾಂಸ ಅಬ್ದುಲ್ ಅಜೀಜ್‍ದಾರಿಮಿ ಚೊಕ್ಕ ಬೆಟ್ಟು ಅವರು ಹಜ್ ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಸದಸ್ಯ ಅಶ್ರಫ್ ಅಸ್ಸಖಾಫ್ ತಂಗಳ್, ಯೆನಪೋಯ ಅಬ್ದುಲ್ಲಾಕುಂಞ ,ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ಹಜ್ ಸಮಿತಿ ಅಧಿಕಾರಿ ಭಾಷಾ ಮತ್ತಿತರರು ಉಪಸ್ಥಿತರಿದ್ದರು. ಎಸ್.ಎಮ್ ರಶೀದ್ ಹಾಜಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಈ ವರ್ಷ ಹಜ್‍ಯಾತ್ರೆ ಕೈಗೊಳ್ಳುವವರು ಭಾಗವಹಿಸಿದ್ದರು.