ಮೂಡುಬಿದಿರೆ: ಮಂಗಳೂರು ವಿವಿಯ ಅಂತರಕಾಲೇಜು ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು ಸಾರ್ವಕಾಲಿಕ ಸಾಧನೆ ಮೆರೆದಿದ್ದಾರೆ. ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಸತತ 22ನೇ ಬಾರಿ ಸಮಗ್ರ ತಂಡ ಪ್ರಶಸ್ತಿಯನ್ನು ದ್ವಿತೀಯ ಸ್ಥಾನ ಪಡೆದ ತಂಡದಿಂದ 460 ಅಂಕಗಳ ಅಂತರದಲ್ಲಿ ಪಡೆಯುವುದರ ಜೊತೆಗೆ 11 ನೂತನ ಕೂಟದ ಖಲೆಯನ್ನು ಆಳ್ವಾಸ್ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ.
ಈ ಸಾಧನೆ ಮೆರೆದ ಭಾರತದ ಏಕೈಕ ಕಾಲೇಜು
ಈ ಅಪ್ರತಿಮಾ ಸಾಧನೆಯ ಜೊತೆಯಲ್ಲಿ ಮಂಗಳೂರು ವಿವಿಯ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿರುವ 46 ವಿಭಾಗಗಳಲ್ಲಿ ಈಗಾಗಲೇ ಆಳ್ವಾಸ್ ವಿದ್ಯಾರ್ಥಿಗಳು ನೂತನ ಕೂಟದಾಖಲೆ ನಿರ್ಮಿಸಿದ್ದರೆ, ಬಾಕಿ ಉಳಿದಿದ್ದ ಹೆಪ್ಟಾತ್ಲಾನ್ ವಿಭಾಗದಲ್ಲೂ ಈ ಬಾರಿ ನೂತನ ಕೂಟದಾಖಲೆ ನಿರ್ಮಿಸುವ ಮೂಲಕ ಅಥ್ಲೇಟಿಕ್ಸ್‍ನಲ್ಲಿರುವ ಒಟ್ಟು 47 ವಿಭಾಗಗಳಲ್ಲೂ ನೂತನ ಕೂಟದಾಖಲೆ ನಿರ್ಮಿಸಿದ ಭಾರತದ ಏಕೈಕ ಕಾಲೇಜು ಎಂಬ ಅಸಾಮಾನ್ಯ ಸಾಧನೆಯನ್ನು ಆಳ್ವಾಸ್ ಮೆರೆದಿದೆ.
ಎರಡು ವಿಭಾಗಗಳಲ್ಲಿ 84 ಪದಕಗಳು
ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್‍ಷಿಪ್‍ನ ಪುರುಷರ ವಿಭಾಗದಲ್ಲಿ 292 ಅಂಕಗಳು ಹಾಗೂ ಮಹಿಳೆಯರ ವಿಭಾಗದಲ್ಲಿ 277 ಅಂಕ ಪಡೆದು ಆಳ್ವಾಸ್ ಒಟ್ಟು 569 ಅಂಕಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆಯಿತು. ಪುರುಷರ ವಿಭಾಗದಲ್ಲಿ 64 ಅಂಕ ಪಡೆದ ಉಜಿರೆಯ ಎಸ್‍ಡಿಎಂ ಕಾಲೇಜು ಹಾಗೂ ಮಹಿಳೆಯರ ವಿಭಾಗದಲ್ಲಿ 48 ಅಂಕ ಪಡೆದ ಅಜ್ಜರಕಾಡಿನ ಡಾ ಜಿ ಶಂಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರನ್ನರ್‍ಅಪ್ ಪ್ರಶಸ್ತಿ ಪಡೆದವು. ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ 24 ಚಿನ್ನ, 17 ಬೆಳ್ಳಿ, 1 ಕಂಚಿನ ಪದಕ ಸೇರಿ ಒಟ್ಟು 42 ಹಾಗೂ ಮಹಿಳಾ ವಿಭಾಗದಲ್ಲಿ 21 ಚಿನ್ನ 16 ಬೆಳ್ಳಿ ಹಾಗೂ 5 ಕಂಚಿನ ಪದಕದೊಂದಿಗೆ 42 ಪದಕ ಪಡೆಯಿತು. ಎರಡು ವಿಭಾಗಗಳಲ್ಲಿ ಒಟ್ಟು 84 ಪದಕ ಪಡೆಯಿತು.
ವೈಯಕ್ತಿಕ ದಾಖಲೆ
ಕ್ರೀಡಾಕೂಟದ ಪುರುಷರ ಹಾಗೂ ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಉದ್ದ ಜಿಗಿತ ಸ್ಪರ್ಧೆಯ ಪುರುಷೋತ್ತಮ ಹಾಗೂ 100 ಮೀ ಓಟದ ಪವಿತ್ರಾ ಪಡೆದುಕೊಂಡರು. ಇವರು ಇಬ್ಬರು ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು.
ನೂತನ ಕೂಟ ದಾಖಲೆ
ಪುರುಷರ ವಿಭಾಗದಲ್ಲಿ ಗಗನ್-5000 ಮೀ ಓಟ, ಚಂದನ್- 10000ಮೀ ಓಟ, ಅಮನ್ ಸಿಂಗ್ - ಪೋಲ್ವಾರ್ಟ್, 4*100 ರಿಲೇ ತಂಡ ಕೂಟದಾಖಲೆ ನಿರ್ಮಿಸಿದರೆ, ಮಹಿಳೆಯರ ವಿಭಾಗದಲ್ಲಿ ಕೆ.ಎಂ ಶಾಲಿನಿ 20 ಕಿಮೀ ನಡಿಗೆ, ಸುನೀತಾ- ಡಿಸ್ಕಸ್‍ಥ್ರೋ, ಶ್ರುತಿ - ಹ್ಯಾಮರ್‍ಥ್ರೋ, ಪ್ರಜ್ಞಾ- 400 ಮೀ ಹರ್ಡಲ್ಸ್, ಮಂಜುಯಾದವ್ - ಸ್ಟೀಪಲ್ ಚೇಸ್, ಕಮಲ್ಜೀತ್‍ಕೌರ್- ಹೆಪ್ಟಾತ್ಲಾಲ್ ಹಾಗೂ 4*400 ಮೀ ರಿಲೇಯಲ್ಲಿ ಕೂಟದಾಖಲೆ ನಿರ್ಮಾಣವಾಗಿವೆ.
ನಗದು ಬಹುಮಾನ
ಮಂಗಳೂರು ವಿವಿಯ ಅಂತರಕಾಲೇಜುಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ನೂತನ ಕೂಟ ದಾಖಲೆ ಮೆರೆದ 11 ಜನ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ತಲಾ 10000 ನಗದು ಬಹುಮಾನವನ್ನು ನೀಡಲಾಯಿತು.
ಅಂತರ ವಿವಿಯ ಅಥ್ಲೇಟಿಕ್ಸ್ ಕ್ರೀಡಾಕೂಟ
ರಾಷ್ಟ್ರ ಮಟ್ಟದ ಅಂತರ ವಿವಿಯ ಅಥ್ಲೇಟಿಕ್ಸ್ ಕ್ರೀಡಾಕೂಟವು ಡಿಸೆಂಬರ್ 26 ರಿಂದ 31ರ ವರೆಗೆ ಒಡಿಶಾದ ಕಳಿಂಗ ವಿವಿಯಲ್ಲಿ ಜರುಗಲಿದ್ದು, ಆಳ್ವಾಸ್ ಕಾಲೇಜಿನ ಒಟ್ಟು 75 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.
ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.