ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಹಾಗೂ ಭಿನ್ನ ಸಾಮರ್ಥ್ಯವುಳ್ಳವರ ತರಬೇತಿ ಶಾಲೆ ಮತ್ತು ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ 6ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಜಾಗೃತಿ ಜಾಥಾ ಹಾಗೂ ಅಂತರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಸಮಾವೇಶ ಜರಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ದ ಕ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ ಆದರ್ಶ ಸಂಸ್ಥೆಯು ಆತ್ಮವಿಶ್ವಾಸದಿಂದ ವಿಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸ್ವತಹ ದುಡಿದು ಸ್ವಾವಲಂಬಿ ಬದುಕು ನಡೆಸಲು ಶಕ್ತಿ ನೀಡುತ್ತಿರುವುದು ಅತ್ಯಂತ ಸಂತಸದಾಯಕ ಸಂಗತಿಯಾಗಿದೆ. ಪೋಷಕರ ಶಕ್ತಿ , ತಾಳ್ಮೆ ನಿಜಕ್ಕೂ ಮೆಚ್ಚ ತಕ್ಕದ್ದು. ತರಬೇತಿ ಶಾಲೆಯ ಶಿಕ್ಷಕರು ತಮ್ಮದೇ ಮಕ್ಕಳೆಂಬ ಭಾವನೆಯಿಂದ ವಿದ್ಯಾರ್ಥಿಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿದ ಆದರ್ಶ ಸಂಸ್ಥೆಯ ಇಮಾನ್ಯುಯಲ್ ಮೊನಿಸ್ ಮಾತನಾಡಿ ವಿಭಿನ್ನ ಸಾಮರ್ಥ್ಯದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಂಸ್ಥೆ ಪ್ರಯತ್ನಿಸುತ್ತಿದೆ, ಪೋಷಕರು ಬೆಂಬಲಿಸುತ್ತಿದ್ದಾರೆ. ಸಮಸ್ಯೆಗಳನ್ನು ಹಂಚಿಕೊಂಡರೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಸಂಸ್ಥೆಗೆ ಶಿಕ್ಷಕರು ಆಸಕ್ತಿಯಿಂದ ಬದ್ಧತೆಯನ್ನು ನೀಡುತ್ತಿರುವುದು ಮೆಚ್ಚ ತಕ್ಕ ಸಂಗತಿ ಎಂದು ಶಿಕ್ಷಕರನ್ನು ಪ್ರಶಂಸಿಸಿದರು. ಡಾ.ಶೆರ್ಲಿ ಬಾಬುರವರು ಹಕ್ಕು ಮತ್ತು ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

ಮಂಗಳೂರು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಮಾತನಾಡಿ ಸಾಧ್ಯವಿದ್ದಷ್ಟು ಎಲ್ಲ ರೀತಿಯ ಸಹಕಾರವನ್ನು ವಿಭಿನ್ನ ಸಾಮರ್ಥ್ಯದ ಮಕ್ಕಳ ಅಭಿವೃದ್ಧಿಗಾಗಿ ವಿನಯೋಗಿಸುತ್ತಿದ್ದೇವೆ ಎಲ್ಲರೂ ಸಹಕರಿಸುತ್ತಿರುವುದರಿಂದಾಗಿ ಮಕ್ಕಳನ್ನು ಪೋಷಿಸಲು, ಪ್ರೇರೇಪಿಸಲು ಸಾಧ್ಯವಾಗುತ್ತಿದೆ ಎಂದರು. ಕಾರ್ಯಕ್ರಮಕ್ಕೆ ಮೊದಲು ಲೇಬರ್ ಶಾಲೆಯಿಂದ ಸಮಾಜ ಮಂದಿರದ ತನಕ ಜಾಗೃತಿ ಜಾಥಾ ನಡೆಯಿತು. ವೇದಿಕೆಯಲ್ಲಿ ಎಸ್ ಬಿ ಐ ನ ಕುಶಾಲ್ನಗರ ಶಾಖೆಯ ಕು. ಸಂಧ್ಯಾ ಮಾಂಟ್ರಾಡಿ, ಆದರ್ಶ ಸಂಸ್ಥೆಯ ನಿರ್ದೇಶಕ ಜೇಕಬ್ ವರ್ಗಿಸ್, ನವಚೇತನ ಸಂಸ್ಥೆಯ ವಸಂತಿ, ಹಾಜರಿದ್ದರು. 

ರವೀಂದ್ರ ನಾಯಕ್ ಸ್ವಾಗತಿಸಿದರು. ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಲಕರಣೆ ವಿತರಣೆಯ ಪಟ್ಟಿಯನ್ನು ಜಯಂತಿ ಪ್ರಸ್ತುತಪಡಿಸಿದರು. ತುಷಾರ ಕಾರ್ಯಕ್ರಮ ನಿರ್ವಹಿಸಿದರು. ಜಯಶ್ರೀ ವಂದಿಸಿದರು.