ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ಪುರಸಭೆಯ ಮಾರ್ಚ್ ತಿಂಗಳ ಸಭೆ ಇಂದು ನಡೆಯಿತು. ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಮುಖ್ಯಾಧಿಕಾರಿ ಇಂದು, ಸ್ಥಾಯೀ ಸಮಿತಿ ಅಧ್ಯಕ್ಷೆ ಸ್ವಾತಿ ಪ್ರಭು ವೇದಿಕೆಯಲ್ಲಿ ಹಾಜರಿದ್ದರು.

ಮುಖ್ಯಾಧಿಕಾರಿಗಳು, ಆರೋಗ್ಯ ಅಧಿಕಾರಿಗಳ ಮೇಲೆ ಎಗರಾಡಿದ ಸದಸ್ಯರು- ಪೊನ್ನೆಚಾರಿ ಸೇತುವೆಯ ಅಡಿಯಲ್ಲಿ ಇರುವ ಆರು ಇಂಚು ವ್ಯಾಸದ ಪೈಪ್ ಮೂಲಕ ಯಾರಿಗೂ ತಿಳಿಯದಂತೆ ರಾತ್ರಿಯ ಹೊತ್ತು ಮಾತ್ರ ಕೊಳಚೆ ನೀರನ್ನು ಬಿಡುತ್ತಿದ್ದರು. ಇದರಿಂದ ಇಡೀ ಪ್ರದೇಶ ದುರ್ನಾಥದಿಂದ, ಸ್ಥಳೀಯ ಸುಮಾರು 30-40 ಮನೆಗಳವರ ಬಾವಿ ನೀರು ಕುಡಿಯಲು ಅಯೋಗ್ಯವಾಗಿರುವ ಬಗ್ಗೆ ಸದಸ್ಯ ಸುರೇಶ್ ಪ್ರಭುರವರು ಗಮನ ಸೆಳೆದಾಗ ಮೇಲ್ಕಂಡ ಅಧಿಕಾರಿಗಳು ನಿರುತ್ತರರಾಗಿದ್ದರು. ಇದಕ್ಕೆ ದನಿಗೂಡಿಸಿದ ರಾಜೇಶ್ ನಾಯಕ್, ಪಿ ಕೆ ತೋಮಸ್ ಅವರುಗಳು ಇದು ಎಲ್ಲಾ ರಾಜ ಕಾಲ್ವೆಗಳ ಪ್ರದೇಶದಲ್ಲೂ ಹತ್ತಿರದ ಬಹು ಮಹಡಿ ಕಟ್ಟಡಗಳ ಕೊಳಚೆ ನೀರನ್ನು ಶುದ್ಧೀಕರಿಸದೆಯೇ ಬಿಡಲಾಗುತ್ತಿದೆ. ರಾತ್ರಿಯ ಹೊತ್ತು ಕದ್ದು ಮುಚ್ಚಿ ಶುದ್ಧೀಕರಿಸದ ನೀರನ್ನು ನಿರಂತರವಾಗಿ ಸಮೀಪದ ತೋಡಿಗೆ ಬಿಡುವ ಕೆಲಸ ನಡೆಯುತ್ತಿದೆ ಆದುದರಿಂದ ಯಾವ ಮುಲಾಜಿಗೂ ಒಳಗಾಗದೇ ಎಲ್ಲಾ ಬಹು ಮಹಡಿ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳ, ಹೊಟೇಲುಗಳ ಕೊಳಚೆ ನೀರನ್ನು ಸ್ವತಹ ಶುದ್ಧೀಕರಿಸಿ ಸಾರ್ವಜನಿಕ ತೋಡಿಗೆ ಬಿಡುವಂತೆ ಕಡ್ಡಾಯಗೊಳಿಸಬೇಕೆಂದು ಸಭೆ ಸರ್ವನುಮತದಿಂದ ನಿರ್ಣಯಿಸಿತು. ಈ ಬಾರಿ ನೋಟೀಸು ನೀಡಿದ್ದರು, 15 ದಿನದೊಳಗೆ ಸೂಕ್ತ ಏರ್ಪಾಡು ಸಂಬಂಧ ಪಟ್ಟ ಬಹು ಮಹಡಿ ಕಟ್ಟಡ ಹಾಗೂ ಹೋಟೆಲ್ ನವರು ಮಾಡಿಕೊಳ್ಳಲು ಅವಕಾಶ ನೀಡುವಂತೆ ನಿರ್ಣಯಿಸಲಾಯಿತು. ಈ ಬಗ್ಗೆ ಸಾಮೂಹಿಕ ಖಂಡನಾ ನಿರ್ಣಯವನ್ನು ಸದಸ್ಯರು ಬರೆಸಿದರು. ಕಳೆದ ಎರಡು ತಿಂಗಳಿಂದ ಸೂಕ್ತ ಕ್ರಮ ಕೈಗೊಳ್ಳದೆ ವಿಳಂಬಿಸಿರುವುದಕ್ಕೆ ತೀವ್ರ ಬೇಸರವನ್ನು ಸಭೆ ವ್ಯಕ್ತಪಡಿಸಿತು. 

ಸರಕಾರದ ಅಮೃತ್ ಜಲ ಯೋಜನೆಯನ್ನು ತಕ್ಷಣದಿಂದ ನಿಲ್ಲಿಸಿ- ಸರಕಾರದ ಅಮೃತ್ ಜಲ ಯೋಜನೆಯ ಅಧಿಕಾರಿಗಳು ಪುರಸಭೆಯ ಸದಸ್ಯರನ್ನು ಕತ್ತಲೆಯಲ್ಲಿಟ್ಟಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಶಾಸಕರ ಸಮಕ್ಷಮದಲ್ಲಿ ಎಲ್ಲಾ ಮಾಹಿತಿಗಳನ್ನು ಪುರಸಭಾ ಸದಸ್ಯರಿಗೆ ಆಯಾ ವಾರ್ಡಿನ ಕಾಮಗಾರಿಯ ಸಂದರ್ಭದಲ್ಲಿ ಒದಗಿಸಿ ಕಾಮಗಾರಿ ನಡೆಸುತ್ತೇವೆಂದು ತಿಳಿಸಿದ್ದರು. ಆದರೆ ಈತನಕವು ಈ ಬಗ್ಗೆ ಸಮರ್ಪಕ ಮಾಹಿತಿಯನ್ನು ಯಾವುದೇ ಸದಸ್ಯರಿಗೂ ಒದಗಿಸಿರುವುದಿಲ್ಲ. ಎಲ್ಲಾ ಕಾಮಗಾರಿಯನ್ನು ಒಟ್ಟಾರೆ ಮಾಡಿರುತ್ತಾರೆ. ಮೂರು ನಾಲ್ಕು ಮೀಟರ್ ಆಳದಲ್ಲಿ ಅಳವಡಿಸಬೇಕಿರುವ ನೀರಿನ ಪೈಪುಗಳನ್ನು ಕೇವಲ ಎರಡು ಮೂರು ಫೀಟ್ ಆಳದಲ್ಲಿ ಹಾಕಲಾಗಿರುತ್ತದೆ ಎಂದು ಜೋಸ್ಸಿ ಮಿನಿಜಸ್ ದಾಖಲೆ ಸಮೇತ ವಿವರಿಸಿದರು.. ತಕ್ಷಣ ಎದ್ದುನಿಂತ ಪಿಕೆ ತ್ರೋಮಸ್, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ಮಹಮ್ಮದ್ ಕರೀಂ ಇತ್ಯಾದಿಯರು ದನಿಗೂಡಿಸಿದರು. ಪ್ರಸ್ತುತ ಆ ಯೋಜನೆಯನ್ನು ತಕ್ಷಣದಿಂದ ನಿಲ್ಲಿಸುವಂತೆ ಎಲ್ಲ ಸದಸ್ಯರು ಮುಖ್ಯ ಅಧಿಕಾರಿಗಳನ್ನು ಆಗ್ರಹಿಸಿ, ನಿರ್ಣಯಿಸಿದರು. ಅಲ್ಲದೆ ಕೇಂದ್ರದ ಮಾರ್ಗಸೂಚಿ ನಿಯಮಾವಳಿಗಳ ಪ್ರತಿಯನ್ನು ಪಿಕೆ ಥಾಮಸ್ ಅವರು ಇಂಜಿನಿಯರ್ ಅವರಿಗೆ ನೀಡಿ ಮುಂದಿನ ಸಭೆಗೆ ಸಮರ್ಪಕ ಮಾಹಿತಿಯನ್ನು ಒದಗಿಸುವಂತೆ ಕೇಳಿಕೊಂಡರು. 

ಬಸ್ಸು ನಿಲ್ದಾಣದ ಅವ್ಯವಸ್ಥೆ ಸರಿಪಡಿಸಿ- ಪುರಂದರ ದೇವಾಡಿಗ, ಕೊರಗಪ್ಪ 

ಬಸ್ಸು ನಿಲ್ದಾಣ ಇರುವುದು ಬಸ್ಸು ನಿಲ್ಲಿಸಲೇ ಹೊರತು ಖಾಸಗಿ ವಾಹನಗಳನ್ನು ನಿಲ್ಲಿಸಲು ಅಲ್ಲ. ಹಲವಾರು ಬಾರಿ ಮಾಧ್ಯಮಗಳಲ್ಲಿ ಈ ಬಗ್ಗೆ ಸಚಿತ್ರ ವರದಿ ಪ್ರಕಟಗೊಂಡಿರುತ್ತದೆ. ಹೀಗಿದ್ದರೂ ಪುರಸಭೆಯವರು ಅವರದೇ ಬಸು ನಿಲ್ದಾಣದಲ್ಲಿ ವ್ಯವಸ್ಥೆಯನ್ನು ಯಾಕೆ ಮಾಡುತ್ತಿಲ್ಲ? ಒಂದೆರಡು ಬಾರಿ ಅಲ್ಲಿರುವ ಅಂಗಡಿಗಳವರ ನಿರ್ದಿಷ್ಟ ವಾಹನಗಳನ್ನು ಬಿಟ್ಟು ಉಳಿದ ಎಲ್ಲ ವಾಹನಗಳನ್ನು ಪೊಲೀಸರ ಸಹಕಾರದಿಂದ ಪುರಸಭೆಯಲ್ಲಿ ಅಥವಾ ಪೊಲೀಸ್ ಠಾಣೆಯಲ್ಲಿ ತಂದಿರಿಸಿ ದಂಡ ಕಟ್ಟಿದ ತರುವಾಯ ಬಿಡುಗಡೆ ಮಾಡುವಂತೆ ಕಡ್ಡಾಯಗೊಳಿಸಿ. ದ್ವಿಚಕ್ರ ವಾಹನದವರಿಗೆ ಬಸ್ಸು ನಿಲ್ದಾಣದ ಶೌಚಾಲಯದ ಎದುರು ಸ್ಥಳ ನಿಗದಿ ಮಾಡಲಾಗಿರುತ್ತದೆ. ಅಲ್ಲಿ ಮಾತ್ರ ಅವಕಾಶವನ್ನು ನೀಡಿ ಎಂದು ಏರು ದನಿಯಲ್ಲಿ ಕೊರಗಪ್ಪ ಹಾಗೂ ಪೂರಕವಾಗಿ ಪುರಂದರ ದೇವಾಡಿಗರು ಆಗ್ರಹಿಸಿದರು. ತಕ್ಷಣ ಮಧ್ಯ ಪ್ರವೇಶಿಸಿದ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ತಾವು ಅಧ್ಯಕ್ಷರಾಗಿದ್ದಾಗ ಮಾಡಿದ ಸೂಕ್ತ ಕ್ರಮಗಳನ್ನು ಸಭೆ ಎದುರು ಮಂಡಿಸಿದರು. ಅಂತಹ ಕ್ರಮಕ್ಕೆ ಎಲ್ಲ ಸದಸ್ಯರು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಬಸ್ಸು ಮತ್ತು ಅಲ್ಲಿರುವ ಅಂಗಡಿಗಳವರ ನಿರ್ದಿಷ್ಟ ವಾಹನಗಳನ್ನು ಬಿಟ್ಟು ಬೇರೆ ಯಾವುದೇ ವಾಹನಗಳು 10 ನಿಮಿಷಕ್ಕಿಂತ ಹೆಚ್ಚು ವೇಳೆ ಅಲ್ಲಿ ನಿಲುಗಡೆಯಾಗದಂತೆ ಕಾರ್ಯಾಚರಣೆಯನ್ನು ಪೊಲೀಸರ ಸಹಕಾರದೊಂದಿಗೆ ನಡೆಸಲು ಮುಖ್ಯಾಧಿಕಾರಿಗಳಿಗೆ ಸಭೆ ಒಪ್ಪಿಗೆಯನ್ನು ಸೂಚಿಸಿತು.

ಮಳೆಗಾಲದ ನೀರು ಹೋಗುವ ರಾಜಾ ಕಾಲುವೆಗಳು ಕಿರಿದಾಗುತ್ತಿವೆ-ಸುರೇಶ್ ಕೋಟ್ಯಾನ್: ನಾಗರಕಟ್ಟೆ, ಕಲ್ಸಂಕ, ಅಲಂಗಾರು, ಪೊನ್ನೆಚಾರಿ ಇತ್ಯಾದಿ ಪ್ರದೇಶದಲ್ಲಿ ಇರುವ ಮಳೆಗಾಲದ ತೋಡುಗಳು ಬಹು ಮಹಡಿ ಕಟ್ಟಡಗಳ ಭರಾಟೆಯಲ್ಲಿ ನಲುಗಿ ಕಿರಿದಾಗುತ್ತಿವೆ. ಈ ಬಗ್ಗೆ ಈಗಾಗಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಎಲ್ಲವೂ ಒಂದು ದಿನ ಮಾಯವಾಗಿ ಮೂಡುಬಿದಿರೆ ಪೇಟೆ ಮುಳುಗ ಬೇಕಾಗಬಹುದು ಎಂದು ಸುರೇಶ್ ಕೋಟ್ಯಾನ್ ಎಚ್ಚರಿಸಿದರು. ತಕ್ಷಣ ವಿಷಯದ ಗಂಭೀರತೆಯನ್ನು ಮನಗಂಡ ಉಪಾಧ್ಯಕ್ಷ ನಾಗರಾಜ ಪೂಜಾರಿಯವರು ನಾಲ್ಕೈದು ಹಿಟಾಚಿಗಳ ಮೂಲಕ ಎಲ್ಲ ತೋಡುಗಳನ್ನು ಅಗಲ ಹಾಗೂ ಆಳ ಸರಿಪಡಿಸಿ ಸುಸ್ಥಿತಿಗೊಳಿಸುವ ಭರವಸೆಯನ್ನು ಸಭೆಗೆ ನೀಡಿದರು. 

ದಿನವಹಿ ಮಾರುಕಟ್ಟೆಯಲ್ಲಿರುವ ಅಂಗಡಿಗಳವರಿಂದ ಸಂಗ್ರಹಿಸುತ್ತಿರುವ ಹಣಕ್ಕೆ ಕಡ್ಡಾಯವಾಗಿ ರಶೀದಿ ನೀಡುವಂತಾಗಬೇಕೆಂದು ಸುರೇಶ್ ಪ್ರಭು ಒತ್ತಾಯಿಸಿದಾಗ ಪ್ರಸಾದ್ ಕುಮಾರ್ ಧನಿಗೂಡಿಸಿದರು ಅಲ್ಲದೆ ರಸೀದಿ ನೀಡುತ್ತಿರುವ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿ ಅಂಗಡಿ ಮುಂಗಟ್ಟುಗಳಿಂದ ಕಸ ವಿಲೇವಾರಿಗಾಗಿ ಹಣ ಪಡೆಯಲಾಗುತ್ತಿದೆ. ಈ ಪ್ರಕಾರ ಪ್ರತಿ ತಿಂಗಳು ಮೂರುವರೆ ಲಕ್ಷದಷ್ಟು ಸಂಗ್ರಹವಾಗುತ್ತಿದ್ದರು, ಸಮರ್ಪಕ ದಾರಿದೀಪವನ್ನು ನಿರ್ವಹಿಸದೆ ಇರುವ ಬಗ್ಗೆ ಪಿಕೆ ಥಾಮಸ್ ಗಮನ ಸೆಳೆದರು ಅದನ್ನು ಶೀಘ್ರ ಸರಿಪಡಿಸುವ ಭರವಸೆಯನ್ನು ಮುಖ್ಯಾಧಿಕಾರಿಯವರು ನೀಡಿದರು.  ಶ್ವೇತ ಅವರು ಕಸವನ್ನು ಸರಿಯಾಗಿ ವಿಂಗಡಿಸಿ ಕೊಡದೆ ಇರುವವರ ಬಗ್ಗೆ ಅವರಿಗೆ ತಿಳುವಳಿಕೆ ಮೂಡಿಸುವ ಅಗತ್ಯವನ್ನು ತಿಳಿಹೇಳಿದರು. 

ಹಲವಾರು ಅಂಗನವಾಡಿಗಳು ಬೀಳುವ ಸ್ಥಿತಿಯಲ್ಲಿದ್ದು ಅವುಗಳ ರಕ್ಷಣೆ ಹಾಗೂ ಅಭಿವೃದ್ಧಿಗೆ ಅನುದಾನ ನೀಡಬೇಕೆಂದು ಪ್ರಸಾದ್ ಕುಮಾರ್ ಆಗ್ರಹಿಸಿದರು. ಆ ಬಗ್ಗೆ ಅರ್ಜಿ ನೀಡುವಂತೆ ಸದಸ್ಯರನ್ನು ಕೇಳಿಕೊಳ್ಳಲಾಯಿತು. ಪ್ಲಾಸ್ಟಿಕ್ ಬ್ಯಾನರ್, ಬಂಟಿಂಗ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕು, ಏಕ ಬೆಳಕೆಯ ಪ್ಲಾಸ್ಟಿಕ್ ಅನ್ನು ಶಾಶ್ವತವಾಗಿ ನಿಷೇಧಿಸುವಂತಾಗಲು ಅಂತಹ ಪ್ಲಾಸ್ಟಿಕ್ ಮಾರಾಟವನ್ನೇ ನಿಷೇಧಿಸಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು. 

ಪುಚ್ಚ ಮೊಗರು ವೆಂಟೆಡ್ ಡ್ಯಾಮ್ ನಲ್ಲಿ ಕೇವಲ ಮೂರು ಮೀಟರ್ ಮಾತ್ರ ನೀರಿದ್ದು 10-12 ದಿನಕ್ಕೆ ಮಾತ್ರ ಬರಬಹುದೆಂದು ಸುರೇಶ್ ಪ್ರಭುರವರು ಗಮನ ಸೆಳೆದಾಗ ಈಗಾಗಲೇ ಮಿತವಾಗಿ ನೀರು ಬಿಡುವ ಕ್ರಮ ಜಾರಿಗೊಳಿಸಲಾಗಿದೆ, ಸೂಕ್ತ ವ್ಯವಸ್ಥೆಗಾಗಿ ಎದುರು ನೋಡಲಾಗುತ್ತಿದೆ ಎಂದು ಮುಖ್ಯಾಧಿಕಾರಿಯವರು ಸಭೆಗೆ ಮಾಹಿತಿ ನೀಡಿದರು.

ಶಿಸ್ತಿಲ್ಲದ, ಅನಾಗರಿಕ ಕಂಟ್ರಾಕ್ಟರ್ ಗಳ ಕಾರ್ಯಯೋಜನೆಗಳನ್ನು ತಡೆಹಿಡಿರಿ, ಯಾವುದೇ ಕಾರ್ಯಯೋಜನೆ ನೀಡಬೇಡಿ-ಪುರಂದರ ದೇವಾಡಿಗ: ಕಳೆದ ಆರು ತಿಂಗಳುಗಳಿಂದ ಹಿಡಿದ ಕೆಲಸವನ್ನು ಅರೆಬರೆ ಮಾಡಿ ದಿನದೊಡುತ್ತಿರುವ ಎಲ್ಲಾ ಆಶಿಸ್ತಿನ ಅನಾಗರಿಕ ಕಂಟ್ರಾಕ್ಟರ್ ಗಳ ಕಾರ್ಯ ಯೋಜನೆಗಳನ್ನು ವಾಪಸ್ ಪಡೆದು ಮುಂದೆ ಯಾವತ್ತೂ ಅವರಿಗೆ ಕ್ರಿಯಾಯೋಜನೆಗಳನ್ನು ನೀಡಬೇಡಿ ಎಂದು ಪುರಂದರ ದೇವಾಡಿಗ ಆಗ್ರಹಿಸಿದರು. ಹಿಂದಿನ ನಾಲ್ಕು ಐದು ಮೀಟಿಂಗ್ಗಳಲ್ಲಿ ಅರೆಬರೇ ಕಾಮಗಾರಿಯ ಬಗ್ಗೆ ಗಮನ ಸೆಳೆದಿದ್ದರೂ ಉತ್ತರ ನೀಡುತ್ತಿಲ್ಲದ ಬಗ್ಗೆ ಅಧಿಕಾರಿಗಳ ಮೇಲೆ ಹರಿಹಾಯ್ದರು. ಮಾಡಿದ ನಿರ್ಣಯಗಳು ಜಾರಿಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಿ ಪಡಿಸಿದ ಪುರಂದರ ದೇವಾಡಿಗ ಹಾಗೂ ಜೋಸ್ಸಿ ಮಿನೇಜಸ್ ರವರುಗಳು ಒಂದು ಹಂತದಲ್ಲಿ ರಾಜೀನಾಮೆಯ ಮಾತನ್ನು ಹತಾಶರಾಗಿ ಆಡಿದರು. 

ಮೆಸ್ಕಾಂ ನ ಪ್ರವೀಣ್ ಹಾಗೂ ಅರಣ್ಯ ಇಲಾಖೆಯ ಗುರುಮೂರ್ತಿಯವರು ದಾರಿದೀಪ, ಲೈಟ್ ಕಂಬಗಳಿಗೆ ಅಡ್ಡ ಇರುವ ಮರದ ಕೊಂಬೆಗಳನ್ನು ನಿವಾರಿಸಿ ಸೂಕ್ತ ರಕ್ಷಣೆ ಒದಗಿಸುವ ಭರವಸೆಯನ್ನು ನೀಡಿದರು. ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದು ಫೈಲ್ ಗಳು ಸಿಗದಿರುವ ಕಾಮಗಾರಿಗಳ ಬಗ್ಗೆ ಶೀಘ್ರ ವಿಲೇವಾರಿ ಮಾಡಿ ಸರಿಪಡಿಸುವಂತೆ ಸದಸ್ಯರು ಮೆಸ್ಕಾಂ ನವರನ್ನು ಕೇಳಿಕೊಂಡರು. ಎಸ್ ಎಫ್ ಸಿ ನಿಧಿಯಿಂದ ಅನುದಾನ ನೀಡಿ ಸಾಲಗಾರರಿಗೆ ಸಾಲದಿಂದ ಮುಕ್ತಗೊಳಿಸಲು ಅದಾಲತ್ ಮೂಲಕ ವಿಲೇವಾರಿ ಮಾಡಿ ಅನುದಾನವನ್ನು ಒದಗಿಸಲು ಸದಸ್ಯರು ಸೂಚಿಸಿದರು. ಪುರಸಭೆಯ ನೀರಿನ ಪೈಪಿಗೆ ಪಂಪು ಅಳವಡಿಸಿ ನೀರು ಕದಿಯುವುದನ್ನು ತಡೆಯಬೇಕೆಂದು, ಮೀನು ಮಾರುಕಟ್ಟೆಯ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿರುವ ಬಗ್ಗೆ ರೂಪ ಸಂತೋಷ್ ಗಮನಿಸಿ  ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ನೀರು ಅಲಭ್ಯತೆಯ ಈ ದಿನಗಳಲ್ಲೂ ಕೆಲವಾರು ಮನೆಗಳವರು ಪೈಪನ್ನು ಸದಾ ಗಿಡದ ಬುಡದಲ್ಲಿ ಇರಿಸಿ ನೀರು ಪೋಲು ಮಾಡುತ್ತಿರುವುದನ್ನು ತಡೆಯಬೇಕೆಂದು ಆಗ್ರಹಿಸಿದರು. ನವನಗರ, ಕೊಡಂಗಲ್ಲು, ಏದಾಡಿ ಗುತ್ತುಗಳ ಪರಂಬೋಕು ತೋಡುಗಳನ್ನು ಈಗಲೇ ಸರಿಪಡಿಸಿ ನೀರು ಸರಾಗವಾಗಿ ತೆರಳುವಂತೆ ಕ್ರಮ ಕೈಗೊಳ್ಳಲು ಸಭೆ ನಿರ್ಣಯಿಸಿತು. ಏದಾಡಿ ಗುತ್ತು ನಲ್ಲಿ ಇನ್ನು ಮುಂದೆ ಹೋಗಿ ಬರಲು ಸೂಕ್ತ ದಾರಿಯ ವ್ಯವಸ್ಥೆಯನ್ನು ಮಾಡದಿದ್ದಲ್ಲಿ ಮನೆ ನಂಬರ್ ನೀಡುವುದನ್ನು ನಿಲ್ಲಿಸಬೇಕೆಂದು ಎಲ್ಲ ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು. ಅಲ್ಲದೆ ತಕ್ಷಣ ಅಧಿಕಾರಿಗಳು ಅಲ್ಲಿಯ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಸಭೆಗೆ ವಿಷಯವನ್ನು ಒದಗಿಸುವಂತೆ ಆಗ್ರಹಿಸಿದರು. ಒಳ ಪ್ರದೇಶದಲ್ಲಿ ಎಷ್ಟೇ ಅಗಲ ಇದ್ದರು ಮುಖ್ಯರಸ್ತೆಯಿಂದ ಒಳ ಹೊರ ಹೋಗಲು ಸೂಕ್ತ ರಸ್ತೆಯ ಅಲಭ್ಯತೆಯ ಬಗ್ಗೆ ಗಮನ ಸೆಳೆಯಲಾಯಿತು. ಪಿ ಐ ಡಿ ಸಂಖ್ಯೆಯ ತೊಂದರೆಯನ್ನು ನಿವಾರಿಸಿ ಬಡವರಿಗೆ ಸಹಕರಿಸುವಂತೆ ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು. ಇದಕ್ಕೆ ಮುಖ್ಯಾಧಿಕಾರಿಯವರು ಒಪ್ಪಿಗೆ ಸೂಚಿಸಿದರು. ಚರಂಡಿಯ ಹೂಳೆತ್ತುವಿಕೆ  ಹಾಗೂ ಜಂಗಲ್ ಕಟ್ಟಿಂಗ್ ಗಳನ್ನು ವಾರ್ಡ್ ವೈಸ್ ಮಾಡಿ ಆಯಾ ಸದಸ್ಯರ ಸಮಕ್ಷಮದಲ್ಲಿ ಕೆಲಸ ನಡೆಸಿ ಇಂಜಿನಿಯರ್ ಕೂಡ ಸ್ಥಳ ತನಿಖೆ ಮಾಡಿದ ತರವಾಯವೇ ಕಾಮಗಾರಿಯ ಹಣ ಸಂದಾಯ ವಾಗುವಂತಾಗಬೇಕೆಂದು ಕೇಳಿಕೊಂಡರು. 

ಆಸ್ತಿ ತೆರಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಎಲ್ಲ ಸದಸ್ಯರು ಖಡಾಖಂಡಿತವಾಗಿ ವಿರೋಧಿಸಿ ಈಗಿರುವುದೇ 'ಹೆಚ್ಚು ವರಿ' ಯಾಗಿದೆ ಎಂದು ತಿಳಿಸಿದರು. ಕರೆಂಟು ಕಂಬಕ್ಕೆ ಬಟ್ಟೆಯನ್ನು ಕಟ್ಟಿ ಮಾರುವ ದಂಧೆಯವರನ್ನು ಅಂತಹ ಪ್ರದೇಶಗಳಿಂದ ಶಾಶ್ವತವಾಗಿ ನಿವಾರಿಸುವಂತೆ ರಾಜೇಶ್ ನಾಯಕ್ ಪ್ರತಿ ಮೀಟಿಂಗ್ನಲ್ಲೂ ಒತ್ತಾಯಿಸುತ್ತಿದ್ದರು ಕ್ರಮ ಕೈಗೊಳ್ಳದ ಬಗ್ಗೆ ಕೆಂಡಾಮಂಡಲರಾದರು. ಎಲ್ಲಾ ಅನಧಿಕೃತ ಫ್ಲೆಕ್ಸ್, ಬ್ಯಾನರ್ಸ ಗಳನ್ನು ನಿವಾರಿಸಬೇಕೆಂದು ಆಗ್ರಹಿಸಿದರು..