ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ: ಸ್ಥಳೀಯ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ನಾರಾಯಣ ಗುರು ಸೇವಾದಳ, ನಾರಾಯಣ ಗುರು ಮಹಿಳಾ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 6 ರಂದು ನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ ಮತ್ತು 38ನೇ ಮೂರ್ತಿ ಪ್ರತಿಷ್ಠಾಪನೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಹವಾ ನಿಯಂತ್ರಿತ ಅಮೃತ ಸಭಾಭವನವನ್ನು ಉದ್ಘಾಟಿಸಲಾಯಿತು. 

500 ಆಸನಗಳ ಅಮೃತ ಸಭಾಭವನ ಹಾಗೂ 250 ಆಸನಗಳ ಎಂ ಶೀನಪ್ಪ ಮಂಗಳ ಭವನ ಪಾರ್ಟಿ ಹಾಲ್ ಗಳನ್ನು ದೀಪ ಬೆಳಗಿ ಬೆಂಗಳೂರು ಉಚ್ಚ ನ್ಯಾಯಾಲಯದ ನಿರ್ದೇಶಿತ ಹಿರಿಯ ನ್ಯಾಯವಾದಿ ತಾರಾನಾಥ ಪೂಜಾರಿ ಅವರು ಉದ್ಘಾಟಿಸಿದರು. ಅವರು ಮೇಲಂತಸ್ತಿನ ಕಾಮಧೇನು ಸಭಾಭವನದ ಕರ್ನಿರೆ ಶ್ರೀಮತಿ ವಸಂತಿ ಪ್ರಭಾಕರ ಸುವರ್ಣ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ಸಮಸ್ತ ಕರಾವಳಿಯ ಏಕೈಕ ನಾರಾಯಣ ಗುರುಗಳು ಸತ್ಯ, ಸತ್ವ ಸಂಶೋಧನೆಗೆ ಇಳಿದು ಜಾತಿ ರಹಿತ ಸಮಾನತೆಯ ಹರಿಕಾರರಾಗಿ ವೈಚಾರಿಕತೆಯನ್ನು ಬೆಳೆಸಿಕೊಂಡರು. ವಿದ್ಯೆ ಸಂಘಟನೆ ನಮ್ಮ ಮುಖ್ಯ ತತ್ವಗಳಾಗಿರಬೇಕೆಂದು ತಿಳಿಸಿ ಮನುಷ್ಯತ್ವ, ಮಾನವೀಯತೆಯನ್ನು ಸಾರಿದರು. ಇಂದಿನ ಯುವಕರು ಮೌಢ್ಯ ಗಳಿಂದ ದೂರವಿದ್ದು ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡಬೇಕು. ಜ್ಞಾನವನ್ನು ಹರಡಿ ಒಳ್ಳೆಯ ಕೆಲಸವನ್ನು ಮಾಡಿ ನೆಮ್ಮದಿ, ತೃಪ್ತಿಯಿಂದ ಬದುಕಬೇಕು ಎಂದರು.

ಇದೇ ಸಂದರ್ಭದಲ್ಲಿ ನಾರಾಯಣ ಗುರುಗಳ ಲೋಗೋವನ್ನು ಸಂವೇದನಾ ಸಂಸ್ಥೆಯ ಪ್ರಕಾಶ್ ಮಲ್ಪೆ ಲೋಕಾರ್ಪಣೆ ಗೈದು ಗುರು ಸಂದೇಶವನ್ನು ನೀಡಿದರು.

ವೇದಿಕೆಯಲ್ಲಿ ಕರ್ನಿರೆ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಪ್ರಭಾಕರ ಸುವರ್ಣ, ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಭಾರತ್ ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ ಸುವರ್ಣ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಕೋಟ್ಯಾನ್, ಉದ್ಯಮಿ ನಾರಾಯಣ ಪಿ ಎಂ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ ಎಂ, ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸೇವಾ ದಳದ ಅಧ್ಯಕ್ಷ ದಿನೇಶ್ ಪೂಜಾರಿ ಮಾರೂರು, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ರಾಜೇಶ್ ನಾಯಕ್, ಜಗದೀಶ್ ಪೂಜಾರಿ, ರವೀಂದ್ರ ಕರ್ಕೇರಾ, ಶಿವಾನಂದ ಅಂಚನ್, ಪ್ರಸನ್ನ ಸುವರ್ಣ, ಸದಾನಂದ ಹಾಗೂ ಇತರ ಮುಂದಾಳುಗಳು ವೇದಿಕೆಯಲ್ಲಿ ಹಾಜರಿದ್ದು ಶುಭ ಹಾರೈಸಿದರು. 

ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹರ್ಷ ಬಿ ಕೋಟ್ಯಾನ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು. ನಾರಾಯಣ ಗುರು ಲೋಗೋ ನಿರ್ಮಿಸಿದ ರವಿ ಮುಡುಕೋಣಜೆ ಅವರನ್ನು ಸನ್ಮಾನಿಸಲಾಯಿತು. ಶ್ರೀರಾಜ್ ಸನಿಲ್ ಹಾಗೂ ಪ್ರಜ್ವಲ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಸುಶಾಂತ್ ಕರ್ಕೇರ ಧನ್ಯವಾದ ಸಲ್ಲಿಸಿದರು.